ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ರಾಜಕೀಯಕ್ಕಾಗಿ ಶಿಕ್ಷಕರ ಕ್ಷೇತ್ರ ಬಲಿ ಬೇಡ: ಹರೀಶ್‌ ಆಚಾರ್ಯ

Published 31 ಮೇ 2024, 6:53 IST
Last Updated 31 ಮೇ 2024, 6:53 IST
ಅಕ್ಷರ ಗಾತ್ರ
ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್‌ ಆಕಾಂಕ್ಷಿ ಆಗಿದ್ದ ಎಸ್‌.ಆರ್‌.ಹರೀಶ್ ಆಚಾರ್ಯ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿನೆಟ್‌ ಸದಸ್ಯರೂ ಆಗಿರುವ ಈ ಚುನಾವಣೆಯ ಬಗ್ಗೆ ‘ಪ್ರಜಾವಾಣಿ’ಗೆ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರ

ಉನ್ನತ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ನೀವು ಹೊಂದಿರುವ ಪರಿಹಾರೋಪಾಯ ಏನು?

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಏಕರೂಪದ ಕ್ಯಾಲೆಂಡರ್‌ ರೂಪಿಸಬೇಕು. ಪಿ.ಯು. ಪರೀಕ್ಷೆ ಫಲಿತಾಂಶ ಬಂದು ತಿಂಗಳು ಆಗುತ್ತಾ ಬಂದರೂ, ಕೆಲ ವಿಶ್ವವಿದ್ಯಾಲಯಗಳ ಆರನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿಲ್ಲ. ಏಕರೂಪದ ಕ್ಯಾಲೆಂಡರ್‌ ಜಾರಿಯಾಗದ ಕಾರಣ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸೇರ್ಪಡೆ ಕಡಿಮೆ ಆಗುತ್ತಿದೆ. ಶುಲ್ಕ ಸಂಗ್ರಹ ಕಡಿಮೆ ಆಗುತ್ತಿದೆ. ಆದಾಯಕ್ಕಿಂತ ವೆಚ್ಚ ಜಾಸ್ತಿ ಆಗುತ್ತಿದೆ. ವಿಶ್ವವಿದ್ಯಾಲಯಗಳು ಆರ್ಥಿಕ ಹೊರೆ ಎದುರಿಸುವಂತಾಗಿದೆ. ಸಂಬಳ ನೀಡುವುದಕ್ಕೂ ಸಾಧ್ಯವಾಗದಷ್ಟು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಹೆಗಲು ಕೊಡುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಸರ್ಕಾರವೇ ಇವುಗಳ ಕೈ ಹಿಡಿದು ನಡೆಸಿ ಸರಿದಾರಿಗೆ ತರಬೇಕು.

ಪ್ರ

ಕೆಲವು ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ವೇತನ, ಸವಲತ್ತುಗಳನ್ನು ನೀಡುತ್ತಿಲ್ಲ. ಈ ಹುದ್ದೆಯ ಘನತೆಗೆ ತಕ್ಕಂತೆ ಅವರನ್ನು ನಡೆಸಿಕೊಳ್ಳುತ್ತಿಲ್ಲ ಎಂಬ ದೂರುಗಳಿವೆಯಲ್ಲ? 

ಸರ್ಕಾರಿ, ಅನುದಾನಿತ ಅಥವಾ ಅನುದಾನರಹಿತ ಶಾಲೆಗಳು ಅಥವಾ ಕಾಲೇಜುಗಳೇ ಇರಲಿ, ಶಿಕ್ಷಕರಿಗೆ ಗೌರವಾರ್ಹ ಕನಿಷ್ಠವೇತನ ನೀಡಲೇಬೇಕು. ಶಿಕ್ಷಕರು ನೆಮ್ಮದಿಯಿಂದ ಆದರ್ಶಯುತ ಬದುಕು ಕಟ್ಟಿಕೊಳ್ಳುವಷ್ಟಾದರೂ ವೇತನ ಅವರಿಗೆ ಸಿಗಬೇಕು. ಖಾಸಗಿ ಶಾಲಾ ಕಾಲೇಜುಗಳು ಶಿಕ್ಷಕರನ್ನು ಬೇರೆ ಸಿಬ್ಬಂದಿಯಂತೆ ನೇಮಕಾತಿ ಮಾಡಿಕೊಳ್ಳುತ್ತಿವೆ. ಸರ್ಕಾರಿ ಶಾಲಾ ಕಾಲೇಜುಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇಲ್ಲೂ ಶೇ 80ರಷ್ಟು ಅಧ್ಯಾಪಕರು ಅತಿಥಿ ಶಿಕ್ಷಕರು. ಅವರಿಗೆ ಕನಿಷ್ಠ ಕೂಲಿಯಷ್ಟು ವೇತನ ಸಿಗುತ್ತಿಲ್ಲ. ಕಾನೂನು ಕೇವಲ ಖಾಸಗಿ ಶಾಲಾ ಕಾಲೇಜುಗಳಿಗೆ ಮಾತ್ರ ಅನ್ವಯವಾಗುವುದಲ್ಲ. ಅದನ್ನು ಅನುಸರಿಸಬೇಕಾದುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಶಿಕ್ಷಕರಿಗೆ ಕನಿಷ್ಠ ಇಂತಿಷ್ಟು ಅವಧಿಯ ಪಾಠ ಪ್ರವಚನ ನಡೆಸಲು ಅವಕಾಶ ನೀಡಬೇಕು ಎಂದು ನಿಯಮ ಇದೆ. ಸರ್ಕಾರ ಜಾರಿಗೆ ತಂದ ಸೇವಾ ನಿಯಮಗಳು ಸರ್ಕಾರಿ ಶಾಲಾ ಕಾಲೇಜುಗಳಲ್ಲೇ  ಪಾಲನೆ ಆಗುತ್ತಿಲ್ಲ. ಅತಿಥಿ ಶಿಕ್ಷಕರಿಗೆ ಇಎಸ್‌ಐ ಹಾಗೂ ಭವಿಷ್ಯ ನಿಧಿಯ ಸೌಲಭ್ಯವನ್ನೂ ನೀಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತಕ್ಕ ನಡವಳಿಕೆ ಅಲ್ಲ. ಈ ಮಾನಸಿಕತೆಯೂ ಬದಲಾಗಬೇಕು. 

ಪ್ರ

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಮತದಾರರ ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿವೆಯೇ?

ಚುನಾವಣೆಯ ಮೌಲ್ಯವನ್ನು ಶಿಕ್ಷಕರ ಕ್ಷೇತ್ರದಲ್ಲಿ ಹುಡುಕುವಂತಹ ಸ್ಥಿತಿ ಇರಬೇಕಿತ್ತು. ಆದರೆ, ವಾಸ್ತವ ಹಾಗಿಲ್ಲ. ಸಾಮಾನ್ಯ ಚುನಾವಣೆಯಲ್ಲಿ ಮತದಾರರನ್ನು ಖರೀದಿ ಮಾಡಿದಂತೆ ಶಿಕ್ಷಕರ ಕ್ಷೇತ್ರದಲ್ಲೂ ಮತದಾರರನ್ನು ಖರೀದಿ ಮಾಡಬಹುದು ಎಂಬ ಮಾನಸಿಕತೆ ಅಭ್ಯರ್ಥಿಗಳಲ್ಲಿ ಬೆಳೆಯುತ್ತಿದೆ. ಹಾಗಾಗಿ ಇಲ್ಲೂ ಹಣ– ಹೆಂಡ ಕೆಲಸ ಮಾಡುತ್ತಿವೆ. ಇದರಿಂದ ಈ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಆಗಿರುವುದು ನಿಜ. ಆದರೆ, ಇಡೀ ಶಿಕ್ಷಕ ಸಮುದಾಯ ಆಮಿಷಕ್ಕೆ ಬಲಿಯಾಗುತ್ತಿದೆ ಎಂಬುದು ಸುಳ್ಳು. ಶೇ 80ರಷ್ಟು ಶಿಕ್ಷಕರು ಸರಿ ಇರುತ್ತಾರೆ. ಶೇ 20ರಷ್ಟು ಶಿಕ್ಷಕರಲ್ಲಿ ದೌರ್ಬಲ್ಯಗಳಿರಬಹುದು. ಆಮಿಷಕ್ಕೆ ಬಲಿಯಾಗುವ ಮಾನಸಿಕತೆಯನ್ನು ಶಿಕ್ಷಕರು ಹೊಂದಿಲ್ಲ ಎಂದು ಸಾಬೀತು ಮಾಡಬೇಕಿದೆ. ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ಇರುವ ಹಾಗೂ ವಿಷಯಾಧಾರಿತವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಶಿಕ್ಷಕರು ಬೆಂಬಲಿಸಬೇಕು. ರಾಜಕೀಯ ಪುನರ್ವಸತಿಗೆ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಬಲಿಕೊಡಲು ಬಿಡಬಾರದು.

ಪ್ರ

ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡ ನೀವು ಪಕ್ಷೇತರವಾಗಿ ಸ್ಪರ್ಧಿ‌ಸಬೇಕಾಗಿ ಬಂದಿದ್ದು ಏಕೆ?  ‌

ನಮ್ಮ ತರಹದ ಅಭ್ಯರ್ಥಿಗಳು ರಾಜಕೀಯ ಪಕ್ಷದ ಬೆಂಬಲ ನಿರೀಕ್ಷೆ ಮಾಡುವುದು ಸಹಜ. ನಾನೂ ಬಿಜೆಪಿಯ ಬೆಂಬಲ ನಿರೀಕ್ಷೆ ಮಾಡಿದ್ದೆ. ಆದರೆ ಈ ಚುನಾವಣೆ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯುವುದಿಲ್ಲ. ಹಿಂದೆಯೂ ವ್ಯಕ್ತಿ ಆಧರಿತವಾಗಿ  ಫಲಿತಾಂಶಗಳು ಬಂದಿವೆಯೇ ಹೊರತು ಪಕ್ಷದ ಆಧಾರದಲ್ಲಿ ಅಲ್ಲ. ಶಿಕ್ಷಕರ ಸಮಸ್ಯೆ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಯಾರು ಸಮರ್ಥರು ಎಂಬುದನ್ನು ನೋಡಿಕೊಂಡು ಅಂತಹ ಅಭ್ಯರ್ಥಿಯನ್ನು ಶಿಕ್ಷಕರು ಬೆಂಬಲಿಸುತ್ತಾರೆ. ನಾನು 25 ವರ್ಷಗಳಿಂದ ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಈ ಕ್ಷೇತ್ರದ ಮತದಾರರಿಗೆ ನನ್ನ ಪರಿಚಯ ಚೆನ್ನಾಗಿ ಇದೆ. ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬ ಕುರಿತ ಸ್ಪಷ್ಟತೆ ಅವರಲ್ಲಿದೆ. ಹಾಗಾಗಿ ಈ ಸಲ ಶಿಕ್ಷಕರು ಈ ಸಲ ನನ್ನನ್ನು ಬೆಂಬಲಿಸುವ ವಿಶ್ವಾಸ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT