ಬೆಲೆ ಏರಿಕೆ: ಸಿಗುವುದೇ ತಾತ್ಕಾಲಿಕ ಬ್ರೇಕ್?

ಮಂಗಳೂರು: ಕೇಂದ್ರ–ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದರಿಂದ ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇದು ಕೋವಿಡ್ ತಲ್ಲಣ ಮತ್ತು ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನರಿಗೆ ‘ಟಾನಿಕ್’ ದೊರೆತಂತಾಗಿದೆ. ಅದರ ಬೆನ್ನಲ್ಲೇ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ತುಸು ಇಳಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಕ್ರಮವಾಗಿ ₹13.29 ಮತ್ತು ₹19.42 ಇಳಿಕೆಯಾಗಿದೆ. ಪ್ರಸ್ತುತ ಲೀಟರ್ ಪೆಟ್ರೋಲ್‌ಗೆ ₹99.76, ಡೀಸೆಲ್‌ಗೆ ₹84.24 ದರ ಇದೆ. ಮಂಗಳೂರಿನಲ್ಲಿಯೇ ಕಚ್ಚಾತೈಲವನ್ನು ಸಂಸ್ಕರಿಸುವ ಎಂಆರ್‌ಪಿಎಲ್ (ಮಂಗಳೂರು ರಿಫೈನರೀಸ್ ಅಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್) ಕಾರ್ಖಾನೆ ಇರುವುದರಿಂದ ಇತರ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯಲ್ಲಿ ದರ ತುಸು ಅಗ್ಗ.
ತೈಲ ಉತ್ಪನ್ನಗಳ ಬೆಲೆ ಸತತವಾಗಿ ಏರಿದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮುಖ್ಯವಾಗಿ ಹೊರ ಜಿಲ್ಲೆಗಳಿಂದ ಬರುವ ತರಕಾರಿಗಳ ದರ ಸಾಗಣೆ ವೆಚ್ಚದ ನೆಪದಲ್ಲಿ ಭಾರೀ ಪ್ರಮಾಣದಲ್ಲಿ ತುಟ್ಟಿಯಾಗಿದೆ. ವಾರದ ಹಿಂದೆ ಟೊಮೆಟೊ ಮತ್ತು ಈರುಳ್ಳಿ ದರ ₹ 60ರಿಂದ ₹ 70ಕ್ಕೆ ಏರಿಕೆಯಾಗಿತ್ತು. ಇನ್ನು ಹಣ್ಣುಗಳು, ಹೂ, ಈರುಳ್ಳಿ, ಸಂಬಾರ ಪದಾರ್ಥ, ಮೀನು, ಮಾಂಸ, ಮೊಟ್ಟೆ ಹೀಗೆ ದಿನಬಳಕೆಯ ಎಲ್ಲ ವಸ್ತುಗಳ ಬೆಲೆ ಕೈಗೆಟುಕದ ಸ್ಥಿತಿಗೆ ತಲುಪಿವೆ. ಇದೀಗ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾದ ಕಾರಣ ಮತ್ತೆ ಅಗತ್ಯ ವಸ್ತುಗಳ ದರ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಗ್ರಾಹಕರದ್ದು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹವಾದುದು. ಈ ಒಂದು ನಿರ್ಣಯದಿಂದ ದೇಶದ ವಿವಿಧ ಕ್ಷೇತ್ರಗಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ನಿಯಂತ್ರಣಕ್ಕೆ ಬರಲಿದೆ. ಕೇಂದ್ರ ಸರ್ಕಾರ ರೈತರ ಬದುಕನ್ನು ಇನ್ನಷ್ಟು ಉತ್ತಮಗೊಳಿಸಬೇಕು. ಕೃಷಿಗೆ ಲಾಭದಾಯಕವಾಗುವಂತಹ ಕ್ರಮಗಳನ್ನು ಸರ್ಕಾರ ಪ್ರಕಟಿಸಬೇಕು’ ಎಂದು ಒತ್ತಾಯಿಸುತ್ತಾರೆ ಕೃಷಿಕರಾಗಿರುವ ವಿದ್ಯಾನಂದ.
‘ಇಂಧನ ದರದ ಸತತ ಏರಿಕೆಯಿಂದ ಜನಸಾಮಾನ್ಯರ ಬದುಕು ಹೈರಾಣಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪ ಮಟ್ಟಿನ ತೆರಿಗೆ ಕಡಿತ ಗೊಳಿಸುವ ಮೂಲಕ ದರ ಇಳಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಇದು ಜನರ ಕಣ್ಣೊರೆಸುವ ತಂತ್ರವಾಗದೆ, ಬೆಲೆ ಮೇಲೆ ಹಿಡಿತ ಸಾಧಿಸಿ ಸರ್ಕಾರವು ಜನರ ಬವಣೆ ನೀಗಿಸಲು ಮುಂದಾಗಬೇಕು’ ಎಂದು ಒತ್ತಾಯಿಸುತ್ತಾರೆ ಮಂಗಳೂರಿನ ನಿವಾಸಿ ಪ್ರವೀಣ್.
‘ಡೀಸೆಲ್ ದರ ಏರಿಕೆಯಿಂದ ಕೃಷಿ ಚಟುವಟಿಕೆಗೆ ಬಳಸುವ ಟಿಲ್ಲರ್, ಟ್ರ್ಯಾಕ್ಟರ್, ರೋಟರ್ ಯಂತ್ರದ ಬಾಡಿಗೆ ಭಾರೀ ಏರಿಕೆಯಾಗಿದೆ. ಡೀಸೆಲ್ ದರ ಇನ್ನೂ ಕಡಿಮೆಯಾಗಬೇಕು. ಡೀಸೆಲ್ ಬೆಲೆ ಇಳಿಕೆಯಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮತ್ತೆ ಡೀಸೆಲ್ ಬೆಲೆ ಏರಿಕೆ ಆಗದಂತೆ ಸರ್ಕಾರ ಗಮನ ಹರಿಸಬೇಕು. ಜತೆಗೆ ಟಿಲ್ಲರ್, ಟ್ರ್ಯಾಕ್ಟರ್, ರೋಟರ್ ಬಾಡಿಗೆ ದರ ಕಡಿಮೆಯಾಗಬೇಕು’ ಎಂಬುದು ಕೃಷಿಕ ಬಾಲಕೃಷ್ಣ ಬಂಗೇರ ಅವರ ಅಭಿಪ್ರಾಯ.
‘ಇಂಧನ ದರ ಇಳಿಕೆಯಾದ ಬಳಿಕ ತರಕಾರಿ, ಹಣ್ಣಿನ ದರದಲ್ಲಿ ಸ್ವಲ್ಪ ಏರಿಳಿತವಾಗಿದೆ. ಮಲೆನಾಡು ಮತ್ತು ಬಯಲುಸೀಮೆ ಭಾಗದಲ್ಲಿ ಈ ವರ್ಷ ಅಕಾಲಿಕವಾಗಿ ಮಳೆಯಾಗುತ್ತಿರುವುದರಿಂದ ತರಕಾರಿ ದರ ದುಬಾರಿಯಾಗಿದೆ. ಡೀಸೆಲ್ ದರ ಸ್ವಲ್ಪ ಅಗ್ಗವಾದ ಕಾರಣ ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು’ ಎನ್ನುತ್ತಾರೆ ತರಕಾರಿ, ಹಣ್ಣಿನ ವ್ಯಾಪಾರಿ ಅಬ್ದುಲ್ ಸಲಾಂ.
ಇಂಧನ ದರವನ್ನು ತಿಂಗಳ ಹಿಂದೆಯೇ ಇಳಿಕೆ ಮಾಡಿದ್ದರೆ ಜನರಿಗೆ ಹೊರೆ ತಪ್ಪುತ್ತಿತ್ತು. ಇಷ್ಟೊಂದು ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರಲಿಲ್ಲ.
ಹರಿಪ್ರಸಾದ್, ಮಂಗಳೂರು
ತೈಲ ಬೆಲೆ ಏರಿಕೆಗೆ ಅಂತರರಾಷ್ಟ್ರೀಯ ಏರಿಳಿತದತ್ತ ಸರ್ಕಾರ ಬೊಟ್ಟು ಮಾಡುವುದು ಸರಿಯಲ್ಲ. ಜನರ ಕಷ್ಟವನ್ನೂ ನೋಡಬೇಕು.
ನಿತೇಶ್ ಕುಮಾರ್, ಕೃಷಿಕ
ಅಗತ್ಯ ಕೆಲಸಕ್ಕಾಗಿ ನಿತ್ಯ ದ್ವಿಚಕ್ರ ವಾಹನದಲ್ಲಿ ಓಡಾಡಲು ₹100 ಪೆಟ್ರೋಲ್ ಬೇಕು. ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮತ್ತಷ್ಟು ಇಳಿಕೆಯಾಗಬಹುದು.
ಸತೀಶ್, ಖಾಸಗಿ ಸಂಸ್ಥೆ ಉದ್ಯೋಗಿ
ಪೆಟ್ರೋಲ್, ಡೀಸೆಲ್ ದರ ಇಳಿಕೆಯಾದರೂ ಅಗತ್ಯ ವಸ್ತುಗಳ ಬೆಲೆ ಇನ್ನೂ ಇಳಿಕೆ ಕಂಡು ಬಂದಿಲ್ಲ. ಈ ಬಗ್ಗೆಯೂ ಸರ್ಕಾರ, ಅಧಿಕಾರಿಗಳು ಗಮನ ಹರಿಸಬೇಕು.
ಹರೀಶ್, ಗ್ರಾಹಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.