ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ: ರಾಜೇಶ್ ಭಟ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

Last Updated 18 ಆಗಸ್ಟ್ 2022, 12:34 IST
ಅಕ್ಷರ ಗಾತ್ರ

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ವಕೀಲ ಕೆ.ಎಸ್‌.ಎನ್‌. ರಾಜೇಶ್‌ ಭಟ್‌ ವಿರುದ್ಧ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ರಾಜೇಶ್ ಭಟ್‌ ಅವರು ಕರಂಗಲ್ಪಾಡಿಯಲ್ಲಿರುವ ತಮ್ಮ ಕಚೇರಿಯಲ್ಲಿ, ತರಬೇತಿಗಾಗಿ ಸೇರಿದ್ದ ತನ್ನನ್ನು ಸೆ.25ರಂದು ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಅಕ್ಟೋಬರ್‌ 18ರಂದು ವಿದ್ಯಾರ್ಥಿನಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

‘ರಾಜೇಶ್‌ ಭಟ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಆಕೆ ತಪ್ಪಿಸಿಕೊಂಡು ಹೋಗಿದ್ದರು. ಆರೋಪಿಯು ಆಕೆಗೆ ಜೀವ ಬೆದರಿಕೆ ಹಾಕಿದ್ದಲ್ಲದೆ, ಈ ವಿಚಾರವನ್ನು ಮುಕ್ತಾಯಗೊಳಿಸುವಂತೆ ಒತ್ತಾಯಪೂರ್ವಕವಾಗಿ ಮಂಗಳೂರಿನ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಹೆಸರಲ್ಲಿ ಪತ್ರ ಬರೆಯಿಸಿಕೊಂಡು, ಸಹಿ ಪಡೆದಿದ್ದಾನೆ. ಸಾಕ್ಷಿದಾರರಿಂದ ಕೂಡ ಒತ್ತಾಯದಿಂದ ಪತ್ರಕ್ಕೆ ಸಹಿ ಪಡೆದಿದ್ದಾನೆ’ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

‘ಆರೋಪಿಯು ನ್ಯಾಯಾಲಯಕ್ಕೆ ಶರಣಾಗಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದು, ಈತನಿಗೆ ಎರಡನೇ ಆರೋಪಿ ಅನಂತ ಭಟ್, ಮೂರನೇ ಆರೋಪಿ ಅಚ್ಯುತ್ ಭಟ್ ನೆರವು ನೀಡಿದ್ದಾರೆ. ಮೂವರು ಕೂಡ ಶಿಕ್ಷಾರ್ಹ ಅಪರಾಧವೆಸಗಿದ್ದಾರೆ’ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಅಂದಿನ ಎಸಿಪಿ ರಂಜಿತ್ ಬಂಡಾರು ಅವರಿಗೆ ವಹಿಸಿದ್ದರು. ಅವರ ವರ್ಗಾವಣೆ ನಂತರ ಬಂದ ಎಸಿಪಿ ದಿನಕರ ಶೆಟ್ಟಿ ತನಿಖೆ ಮುಂದುವರಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT