ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಎಂಆರ್‌ಪಿಎಲ್‌ನಿಂದ ರಾಸಾಯನಿಕಯುಕ್ತ ನೀರು ಸೋರಿಕೆ; ಸ್ಥಳೀಯರ ದೂರು

Published 26 ಜುಲೈ 2023, 14:23 IST
Last Updated 26 ಜುಲೈ 2023, 14:23 IST
ಅಕ್ಷರ ಗಾತ್ರ

ಮಂಗಳೂರು: ‘ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊ ಕೆಮಿಕಲ್ಸ್‌ (ಎಂಆರ್‌ಪಿಎಲ್‌) ಘಟಕದಿಂದ ರಾಸಾಯನಿಕಯುಕ್ತ ನೀರು ಕುತ್ತೆತ್ತೂರು ಆಸುಪಾಸಿನ ಪರಿಸರದ ಹಳ್ಳಗಳಿಗೆ ಮಂಗಳವಾರ ರಾತ್ರಿ ಸೋರಿಕೆ ಆಗಿದೆ. ಪರಿಸರದಲ್ಲಿ ದುರ್ವಾಸನೆ ಪಸರಿಸಿದ್ದು, ಉಸಿರಾಟ ಸಮಸ್ಯೆ, ವಾಂತಿ, ಕೆಮ್ಮು, ಕಣ್ಣುರಿ, ತಲೆನೋವಿನಂತಹ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿದೆ’ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಆರೋಗ್ಯಾಧಿಕಾರಿಗಳು ಕುತ್ತೆತ್ತೂರಿಗೆ ಬುಧವಾರ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಆರೋಗ್ಯ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಾಸಾಯನಿಕಯುಕ್ತ ತ್ಯಾಜ್ಯನೀರು ಸೇರಿರುವ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿದರು. 

‘ಹಿಂದಿನಿಂದಲೂ ಈ ಪರಿಸರದಲ್ಲಿ ಪದೇ ಪದೇ ದುರ್ವಾಸನೆ ಕಾಣಿಸಿಕೊಳ್ಳುತ್ತದೆ. ಆದರೆ, ಯಾವತ್ತೂ ಅದು ಇಷ್ಟು ತೀವ್ರವಾಗಿರಲಿಲ್ಲ. ಒಂದೂವರೆ ವರ್ಷ ಹಿಂದೊಮ್ಮೆ ಪರಿಸರದಲ್ಲಿ ದುರ್ವಾಸನೆ ಹಬ್ಬಿತ್ತು. ಆದರೆ ಆಗ ಘಾಟು ಇಷ್ಟೊಂದು ದುರ್ವಾಸನೆಯಿಂದ ಕೂಡಿರಲಿಲ್ಲ’ ಎಂದು ಸ್ಥಳೀಯರು ತಿಳಿಸಿದರು.

‘ಮಂಗಳವಾರ ಸಂಜೆ 6ರ ಬಳಿಕ ಪರಿಸರದಲ್ಲಿ ದುರ್ವಾಸನೆ ಬರಲು ಶುರುವಾಯಿತು. ಸುಮಾರು ಒಂದೂವರೆ ಗಂಟೆ ತೀವ್ರ ಘಾಟು ಹಬ್ಬಿ ಉಸಿರಾಡಲೂ ಕಷ್ಟವಾಯಿತು. ನನ್ನ ಎರಡೂವರೆ ವರ್ಷದ ಮಗಳು ಹೃಥ್ವಿ ರಾತ್ರಿ 2 ಗಂಟೆ ಬಳಿಕ ವಾಂತಿ ಮಾಡಲು ಶುರುಮಾಡಿದಳು. ಆರೇಳು ಗಂಟೆಗಳ ಬಳಿಕ ಘಾಟು ಕಡಿಮೆ ಆಯಿತು’ ಎಂದು ಕುತ್ತೆತ್ತೂರು ನಿವಾಸಿ ರಶ್ಮಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ರಾಸಾಯನಿಕಯುಕ್ತ ನೀರು ಹರಿದು ಹೋದ ಹಳ್ಳ ನಮ್ಮ ಮನೆಯಿಂದ 700 ಮೀ ದೂರದಲ್ಲಿದೆ. ಆದರೂ ನಮ್ಮಲ್ಲೂ ಕಣ್ಣುರಿ ತರಿಸುವಷ್ಟು ತೀವ್ರವಾದ ಘಾಟು ಹಬ್ಬಿತ್ತು. ಸುಮಾರು 1 ಕಿ.ಮೀ ವ್ಯಾಪ್ತಿಯ ಜನರು ರಾತ್ರಿ ಇಡೀ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ’ ಎಂದು ಪೆರ್ಮುದೆ ಗ್ರಾಮ ಪಂಚಾಯಿತಿ ಸದಸ್ಯ ಜಾರ್ಜ್‌ ಫರ್ನಾಂಡಿಸ್‌ ದೂರಿದರು.

‘ಎಂಆರ್‌ಪಿಎಲ್‌ ಘಟಕದಿಂದ ತೈಲ ಸೋರಿಕೆ, ದುರ್ವಾಸನೆಯ ಅನಿಲ ಸೋರಿಕೆ ಆಗಾಗ ಆಗುತ್ತಿರುತ್ತದೆ. ಈ ಪರಿಸರದಲ್ಲಿ ಕೃಷಿಯನ್ನೇ ನೆಚ್ಚಿಕೊಂಡ ಅನೇಕ ಕುಟುಂಬಗಳಿವೆ. ಮನುಷ್ಯರಿಗೆ ಮಾತು ಬರುತ್ತದೆ. ಆದರೆ ಜಾನುವಾರುಗಳ ಪಾಡು ನೋಡಲಾಗದು. ಅವುಗಳು ಹುಲ್ಲು ತಿನ್ನುವುದಿಲ್ಲ’ ಎಂದು ಬೇಸರ ತೋಡಿಕೊಂಡರು.

‘ಎಂಆರ್‌ಪಿಎಲ್‌ನಿಂದ ಘಾಟುಯುಕ್ತ ತ್ಯಾಜ್ಯ ನೀರು ಸೋರಿಕೆ ಆದ ಬಗ್ಗೆ ಕುತ್ತೆತ್ತೂರು ನಿವಾಸಿಗಳು ದೂರಿದ್ದಾರೆ. ಸ್ಥಳಕ್ಕೆ ತೆರಳಿ ತ್ಯಾಜ್ಯ ನೀರು ಸೇರಿರುವ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ಬಳಿವಷ್ಟೇ ಅದರಲ್ಲಿ ಅಪಾಯಕಾರಿ ರಾಸಾಯನಿಕಗಳು ಇದ್ದವೆ ಎಂಬುದು ತಿಳಿಯಲಿದೆ’ ಎಂದು ಕೆಎಸ್‌ಪಿಸಿಬಿಯ ಪ್ರಾದೇಶಿಕ ಪರಿಸರ ಅಧಿಕಾರಿ ರವಿ ’ಪ್ರಜಾವಾಣಿ’ಗೆ ತಿಳಿಸಿದರು.

‘ಕುತ್ತೆತ್ತೂರು ಪರಿಸರದ ಏಳು ಮನೆಗಳಿಗೆ ಬುಧವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿದ್ದೇವೆ. ಮಂಗಳವಾರ ರಾತ್ರಿ ಕಣ್ಣುರಿ, ತಲೆನೋವು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ದೂರಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ವರದಿ ಸಲ್ಲಿಸಲಿದ್ದೇವೆ’ ಎಂದು ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಪಂಪ್‌ ಹದಗೆಟ್ಟಿದ್ದರಿಂದ ಸಮಸ್ಯೆ

ಎಂಆರ್‌ಪಿಎಲ್‌ 'ಕಾರ್ಖಾನೆಯಲ್ಲಿ ಇಂಧನ ತೈಲ ಸಂಸ್ಕರಣೆ ವೇಳೆ  ಉತ್ಪತ್ತಿಯಾಗುವ ನಿರುಪಯುಕ್ತ ಅನಿಲಗಳನ್ನು ನೀರಿನ ಮೂಲಕ ಹಾಯಿಸುತ್ತೇವೆ. ಆಗ ತ್ಯಾಜ್ಯ ಅನಿಲಗಳು ನೀರಿನಲ್ಲಿ ಕರಗುತ್ತದೆ. ನಂತರವಷ್ಟೇ ಆ ಅನಿಲವನ್ನು ಚಿಮಣಿ ಮೂಲಕ ಹೊರಬಿಡಲಾಗುತ್ತದೆ. ಅನಿಲದ ಅಂಶಗಳು ಕರಗಿದ ನೀರು ಘಾಟುವಾಸನೆಯಿಂದ ಕೂಡಿರುತ್ತದೆ. ಅದನ್ನು ನೆಲದಡಿಯಲ್ಲಿರುವ ಲೋಹದ ತೊಟ್ಟಿಯಲ್ಲಿ ಸಂಗ್ರಹಿಸಿ ಸಂಸ್ಕರಿಸಿ ಮರುಬಳಕೆ ಮಾಡುತ್ತೇವೆ. ಅನಿಲಗಳು ಕರಗಿರುವ ನೀರನ್ನು ಸಂಸ್ಕರಣಾ ಘಟಕಕ್ಕೆ ಹಾಯಿಸುವ ಪಂಪ್‌ ಹದಗೆಟ್ಟಿದ್ದರಿಂದ ತೊಟ್ಟಿ ಭರ್ತಿಯಾಗಿ ನೀರು ಸೋರಿಕೆ ಆಗಿದೆ. ಆ ನೀರು ಘಾಟು ವಾಸನೆಯಿಂದ ಕೂಡಿರುತ್ತದೆ. ಪಂಪನ್ನು ತಕ್ಷಣವೇ ದುರಸ್ತಿಪಡಿಸಿ ನೀರು ಹೊರಗೆ ಹೋಗದಂತೆ ತಡೆದಿದ್ದೇವೆ’ ಎಂದು ಎಂಆರ್‌ಪಿಎಲ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದಿಲ್ಲ. ಸ್ವಲ್ಪ ಪ್ರಮಾಣದ ಪೆಟ್ರೋಲ್‌ ಸೀಮೆಎಣ್ಣೆ ಡೀಸೆಲ್‌ನಂತಹ ಜಿಡ್ಡಿನ ಅಂಶ ನೀರಿನಲ್ಲಿ ಕರಗಿರುತ್ತದೆ. ದಶಕಗಳಿಂದೀಚೆಗೆ ಇಂಥ ಘಟನೆ ನಡೆದಿದ್ದು ಇದೇ ಮೊದಲು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ತಡೆಯಲು ಸಂಸ್ಥೆಯು ಕ್ರಮಕೈಗೊಳ್ಳಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT