ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌–ಇನ್‌ | ಏಕ ಬೆಳೆ ನೆಚ್ಚಿಕೊಳ್ಳದಿರಿ– ಸಮಗ್ರ ಕೃಷಿ ಮೊರೆ ಹೋಗಿರಿ

ದಕ್ಷಿಣ ಕನ್ನಡ: ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಕೃಷಿಕರಿಗೆ ಸಲಹೆ
Published 28 ಜುಲೈ 2023, 0:38 IST
Last Updated 28 ಜುಲೈ 2023, 0:38 IST
ಅಕ್ಷರ ಗಾತ್ರ

ಮಂಗಳೂರು: ‘ಏಕ ಬೆಳೆಯನ್ನೇ ನೆಚ್ಚಿಕೊಳ್ಳದಿರಿ. ಅದರ ಬದಲು ಸಮಗ್ರ ಕೃಷಿ ಮಾಡುವುದು ಹೆಚ್ಚು ಲಾಭದಾಯಕ. ಒಂದು ಬೆಳೆ ಕೈಕೊಟ್ಟರೂ, ಇನ್ನೊಂದು ಬೆಳೆ ಕೈಹಿಡಿಯಲಿದೆ...’

‘ಪ್ರಜಾವಾಣಿ’ ವತಿಯಿಂದ ಇಲ್ಲಿ ಗುರುವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕೃಷಿಕರಿಗೆ ನೀಡಿದ ಸಲಹೆ ಇದು.

ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಎಚ್‌. ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ. ಅವರು ಕೃಷಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.

ಬಂಟ್ವಾಳದ ಕೃಷಿಕ ವಿಶಾಲ್‌ ಅವರ ಪ್ರಶ್ನೆಗೆ ಉತ್ತರಿಸಿದ ಪ್ರವೀಣ್‌ ಕೆ., ‘ತೋಟದ ನಡುವೆ ಕರಿಮೆಣಸು, ಜಾಯಿ ಕಾಯಿ, ಕೊಕ್ಕೊ, ಲವಂಗ ಮುಂತಾದ ಮಿಶ್ರ ಬೆಳೆಗಳನ್ನು ಬೆಳೆಯುವುದು ಲಾಭದಾಯಕ. ಜಿಲ್ಲೆಯ ಅನೇಕ ರೈತರು ಇಂತಹ ಪ್ರಯೋಗದಿಂದ ಯಶಸ್ಸು ಕಂಡಿದ್ದಾರೆ. ಇಲ್ಲಿನ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕರಿಮೆಣಸನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಅದಲ್ಲದೇ ಜಾಯಿಕಾಯಿ ಹಾಗೂ ಲವಂಗವನ್ನು ಮಿಶ್ರ ಬೆಳೆಯಾಗಿ ಬೆಳೆದೂ ಜಿಲ್ಲೆಯಲ್ಲಿ ಉತ್ತಮ ಇಳುವರಿ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ಭತ್ತದ ಗದ್ದೆಯಲ್ಲಿ ಅಂತರ ಬೆಳೆಯಾಗಿ ಹುರುಳಿ, ಅಲಸಂಡೆ, ಹೆಸರು, ಉದ್ದು, ಮೊದಲಾದ ಧಾನ್ಯಗಳನ್ನು ಬೆಳೆಯುವುದು ಲಾಭದಾಯಕ. ಇಲ್ಲೆಯಲ್ಲಿ ಹಿಂದೆ ಈ ಪರಿಪಾಟ ಇತ್ತು. ಭತ್ತದ ಕೃಷಿ ಕೈಹಿಡಿಯದಿದ್ದರೂ ಧಾನ್ಯ ಬೆಳೆಯುವುದು ಲಾಭ ತಂದುಕೊಡಬಹುದು. ಏಕಬೆಳೆಯನ್ನು ನೆಚ್ಚಿಕೊಂಡಿರುವುದೂ ಕೃಷಿಯಲ್ಲಿ ನಷ್ಟ ಅನುಭವಿಸುವುದಕ್ಕೆ ಕಾರಣ’ ಎಂದು ಕೆಂಪೇಗೌಡ ವಿವರಿಸಿದರು.

ಅಡಿಕೆ ತೋಟದಲ್ಲಿ ಹುಲುಸಾಗಿ ಬೆಳೆಯುವ, ಹಳದಿ ಹೂ ಬಿಡುವ ಬಳ್ಳಿಗಳ ನಿರ್ವಹಣೆ ಕುರಿತು ರಯತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರವೀಣ್‌, ‘ಇದೊಂದು ಕಳೆ ಸಸ್ಯ. ಆದರೆ ಇದರಿಂದಲೂ ಕೃಷಿಕರಿಗೆ ಪ್ರಯೊಜನವಿದೆ. ಇದನ್ನು ಕತ್ತರಿಸಿ ಹಸಿರು ಮೇವಿನ ಜೊತೆ ಮಿಶ್ರ ಮಾಡಿ ಜಾನುವಾರುಗಳಿಗೆ ಆಹಾರವಾಗಿ ಬಳಸಬಹುದು. ಬಳ್ಳಿಗಳನ್ನು ಆಗಾಗ ಕತ್ತರಿಸಿ ಮಣ್ಣಿನ ಮೇಲೆ ರಾಶಿ ಹಾಕಿ, ಅದರಿಂದ ಸಾವಯವ ಗೊಬ್ಬರವನ್ನೂ ತಯಾರಿಸಬಹುದು’ ಎಂದರು. 

ಬೆಳೆಗಳ ರೋಗ ಬಾಧೆ, ಸರ್ಕಾರದ ಸವಲತ್ತುಗಳು, ಬೆಳೆಗಳ ಪೋಷಣೆಗೆ ಸಂಬಂಧಿಸಿದಂತೆ  ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೃಷಿಕರ ಪ್ರಶ್ನೆಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು

ಕೆಂಪೇಗೌಡ ಎಚ್‌.
ಕೆಂಪೇಗೌಡ ಎಚ್‌.
ಕೃಷಿಕರ ಪ್ರಶ್ನೆಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ ಹಾಗೂ ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌ ಉತ್ತರಿಸಿದರು
ಕೃಷಿಕರ ಪ್ರಶ್ನೆಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ ಹಾಗೂ ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌ ಉತ್ತರಿಸಿದರು
ಕೃಷಿಕರ ಪ್ರಶ್ನೆಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ ಹಾಗೂ ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌ ಉತ್ತರಿಸಿದರು
ಕೃಷಿಕರ ಪ್ರಶ್ನೆಗಳಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ ಹಾಗೂ ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌ ಉತ್ತರಿಸಿದರು
ಪ್ರವೀಣ್‌ ಕೆ
ಪ್ರವೀಣ್‌ ಕೆ
ಪ್ರವೀಣ್‌ ಕೆ.
ಪ್ರವೀಣ್‌ ಕೆ.

‘ರಸಗೊಬ್ಬರ: ಹೆಚ್ಚುವರಿ ಹಣ ಪಡೆದರೆ ಕ್ರಮ’ ‘ಮುಂಗಾರು ಹಂಗಾಮಿನಲ್ಲಿ ರೈತರು ರಸಗೊಬ್ಬರ ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ವ್ಯಾಪಾರಸ್ಥರು ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಪಡೆದರೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬಹುದು. ಅಂತಹ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕೆಂಪೇಗೌಡ ಎಚ್ ಹೇಳಿದರು. ಕೃಷಿ ಇಲಾಖೆಯಲ್ಲಿ ಗೊಬ್ಬರ ಬೀಜ ದಾಸ್ತಾನು ಇದೆ. ಜಿಲ್ಲೆಯಲ್ಲಿ 9390 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಶೇ 60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹೆಚ್ಚಿನ ರೈತರು ಚಾಪೆ ನೇಜಿಗೆ ಪರಿವರ್ತನೆಯಾಗುತ್ತಿದ್ದಾರೆ. ಇದು ಕಡಿಮೆ ಖರ್ಚಿನಲ್ಲಿ ಸಣ್ಣ ಜಾಗದಲ್ಲೂ ನೇಜಿ ಸಿದ್ಧಪಡಿಸಬಹುದಾದ ಸುಲಭ ವಿಧಾನವಾಗಿದೆ ಎಂದರು. ಸಾರ್ವಜನಿಕರ ಪ್ರಶ್ನೆ ಹಾಗೂ ಉತ್ತರ * ಜಿಲ್ಲೆಯಲ್ಲಿ ಉತ್ತಮ ಇಳುವರಿ ನೀಡುವ ಭತ್ತದ ತಳಿಗಳು ಯಾವುವು? – ಕುಚ್ಚಲಕ್ಕಿ ಹೆಚ್ಚು ಬಳಕೆಯಲ್ಲಿರುವ ಜಿಲ್ಲೆಯಲ್ಲಿ ಎಂಒ4 ತಳಿಯನ್ನು ರೈತರು ಹೆಚ್ಚು ಇಷ್ಟಪಡುತ್ತಾರೆ. ಇದು ಉತ್ತಮ ಇಳುವರಿ ನೀಡುತ್ತದೆ. ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವ ಸಹ್ಯಾದ್ರಿ ಪಂಚಮುಖಿ ತಳಿಯನ್ನು ಪರಿಚಯಿಸಲಾಗಿದ್ದು ಕೆಲವು ರೈತರು ಇದನ್ನು ಬೆಳೆಯುತ್ತಿದ್ದಾರೆ. * ಬೆಳೆ ವಿಮೆ ಮಾಡಿಸುವುದರಿಂದ ಯಾವ ಪ್ರಯೋಜನಗಳು ಇವೆ? – ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡರೆ ಬೆಳೆವಿಮೆ ಅನುಕೂಲ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭತ್ತ ಬೆಳೆಯುತ್ತಾರೆ. ಇಲ್ಲಿ ಸಾಮಾನ್ಯವಾಗಿ ಉತ್ತಮ ಮಳೆಯಾಗುವುದರಿಂದ ಬೆಳೆ ಹಾನಿ ಪ್ರಕರಣ ವಿರಳ. ಸಾಲ ಪಡೆದಿರುವ ರೈತರು ಸಹಜವಾಗಿ ವಿಮೆ (ಫಸಲ್ ಬಿಮಾ ಯೋಜನೆ) ವ್ಯಾಪ್ತಿಗೆ ಸೇರುತ್ತಾರೆ. ಸಾಲ ಪಡೆಯುವ ರೈತರೂ ವಿಮೆ ಬೇಡವೆಂದು ಬಯಸಿದರೆ ಅದರಿಂದ ಹೊರ ಬರಲು ಈಗ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 600ರಷ್ಟು ರೈತರು ಬೆಳೆ ವಿಮೆ ಮಾಡಿಸಿದ್ದಾರೆ. * ರೈತರ ಗುರುತಿನ ಚೀಟಿ (ಎಫ್‌ಐಡಿ) ಜಂಟಿ ಖಾತೆಯಲ್ಲಿದ್ದರೆ ಹೇಗೆ ಪ್ರತ್ಯೇಕಿಸಬೇಕು? – ಗುರುತಿನ ಚೀಟಿ ಮಾಡುವಾಗ ಮಾಹಿತಿ ತಪ್ಪಾಗಿದ್ದರೆ ಜಂಟಿ ಖಾತೆ ಪ್ರತ್ಯೇಕಿಸುವುದಾದರೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಸ್ಥಳೀಯವಾಗಿ ಬದಲಾವಣೆಗೆ ಅವಕಾಶ ಇಲ್ಲವಾಗಿದ್ದು ಅದನ್ನು ಕೇಂದ್ರ ಕಚೇರಿಗೆ ಕಳುಹಿಸಿ ಸರಿಪಡಿಸಬೇಕಾಗುತ್ತದೆ.

ಕೊಳೆರೋಗ– ಪರಿಣಾಮಕಾರಿ ನಿಯಂತ್ರಣ ಹೇಗೆ? ‘ಮಳೆ ಆರಂಭವಾಗುವಾಗಲೇ ಅಡಿಕೆ ಮರಗಳಿಗೆ ಬೋರ್ಡೊ ದ್ರಾವಣ ಸಿಂಪಡಿಸಿ ಕೊಳೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಆದರೆ ಈ ಔಷಧ ಸಿಂಪಡಿಸಿದ ಬಳಿಕ ನಾಲ್ಕು ಗಂಟೆಗಳಾದರೂ ಬಿಸಿಲು ಇರಬೇಕು. ಹಿಂದಿನ ವರ್ಷ ಕೊಳೆರೋಗ ಕಾಣಿಸಿಕೊಂಡ ತೋಟದಲ್ಲಿ ರೋಗಪೀಡಿತ ಹಿಂಗಾರ ಅಡಿಕೆ ಗೊನೆ ಮತ್ತಿತರ ಅವಶೇಷಗಳನ್ನು ಸುಟ್ಟು ನಾಶಪಡಿಸುವ ಮೂಲಕ ರೋಗಬಾಧೆಯನ್ನು ನಿಯಂತ್ರಿಸಬಹುದು. ಇಂತಹ ಅವಶೇಷಗಳಲ್ಲೂ ಕೊಳೆರೋಗಕ್ಕೆ ಕಾರಣವಾಗುವ ರೋಗಾಣುಗಳು ಉಳಿದುಕೊಂಡಿರುತ್ತವೆ. ಮಳೆಗಾಲದಲ್ಲಿ ಅವು ಮತ್ತೆ ಚುರುಕಾಗುತ್ತವೆ. ಮಳೆ ಹನಿಗಳ ಮೂಲಕ ಗಾಳಿಯ ಮೂಲಕ ಅವು ಹರಡುತ್ತವೆ’ ಎಂದು ಪ್ರವೀಣ್‌ ಕೆ. ತಿಳಿಸಿದರು. ಪುತ್ತೂರಿನ ರಾಕೇಶ್‌ ಹಾಗೂ ಕಡಬದ ಸುಜಿತ್‌ ಅವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ವರ್ಷದಲ್ಲಿ 3–4 ಸಲ ಗೊಬ್ಬರ ನೀಡಿ ‘ಮಳೆ ಕಡಿಮೆಯಾದ ಬಳಿಕ ಅಡಿಕೆ ತೋಟಕ್ಕೆ ಗೊಬ್ಬರ ಹಾಕುವುದು ಸೂಕ್ತ. ವರ್ಷದಲ್ಲಿ ಒಂದೇ ಸಲ ಗೊಬ್ಬರ ಹಾಕುವ ಬದಲು ಅದನ್ನೇ ಮೂರು ಬಾರಿ ಹಾಕಿದರೆ ಒಳ್ಳೆಯದು. ಪ್ರತಿ ತಿಂಗಳೂ ಹಾಕಿದರೆ ಇನ್ನೂ ಒಳ್ಳೆಯದು. ಆದರೆ ಇದಕ್ಕೆ ಕೆಲಸಗಾರರಿಗೆ ಕೂಲಿಗೆ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ ಎಂಬ ಕಾರಣಕ್ಕೆ ವರ್ಷದಲ್ಲಿ ಮೂರು ಅಥವಾ ನಾಲ್ಕು ಸಲ ಗೊಬ್ಬರ ಹಾಕುವಂತೆ ನಾವು ಶಿಫಾರಸು ಮಾಡುತ್ತೇವೆ’ ಎಂದು ಪ್ರವೀಣ್‌ ಅವರು ಸಂತೋಷ್‌ ಸವಣೂರು ಅವರ ಪ್ರಶ್ನೆಗೆ ಉತ್ತರಿಸಿದರು.

‘ಅಸಾಂಪ್ರದಾಯಿಕ ಬೆಳೆಗಳಿಗೆ ಉತ್ತೇಜನ’ ರಮೇಶ್‌ ಬೆಳ್ತಂಗಡಿ: ರಂಬುಟಾನ್‌ ಮ್ಯಾಂಗೋಸ್ಟೀನ್‌ ಡ್ರ್ಯಾಗನ್‌ ನಂತಹ ಬೆಳೆ ಬೆಳೆಸಲು ತೋಟಗಾರಿಕಾ ಇಲಾಖೆಯಿಂದ ಸವಲತ್ತು ಸಿಗುತ್ತದೆಯೇ? ಉತ್ತರ: ಅಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದಕ್ಕೆ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಅಡಿ ಉತ್ತೇಜನ ನೀಡಲಾಗುತ್ತಿದೆ. ಸಮೀಪದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ತೆಂಕಮಿಜಾರಿನ ಕೃಷಿಕರೊಬ್ಬರು ಈ ಯೋಜನೆಯ ನೆರವು ಪಡೆದು ರಂಬುಟಾನ್‌ ಬೆಳೆದಿದ್ದಾರೆ.  ಶ್ರೀವತ್ಸ ಭಟ್‌: ಅಡಿಕೆ ತೋಟದಲ್ಲಿ ಕಾಣಿಸಿಕೊಳ್ಳುವ ಆಫ್ರಿಕನ್‌ ಬಸವನಹುಳುಗಳ ಹಾವಳಿಯನ್ನು ನಿಯಂತ್ರಿಸುವುದು ಹೇಗೆ? ಉತ್ತರ: ಒದ್ದೆಗೋಣಿಯನ್ನು ತೋಟದಲ್ಲಿ ಐದಾರು ಕಡೆ ಹಾಕಿ. ಅದರ ಕೆಳಗೆ ಪಪ್ಪಾಯ ಹಣ್ನಿನ ಚೂರುಗಳನ್ನು ಹಾಕಿ. ಕೊಳೆತ ಹಣ್ಣನ್ನೂ ಹಾಕಬಹುದು. ಗೋಣಿಯ ಬಳಿ ಆಫ್ರಿಕನ್‌ ಬಸವನಹುಳುಗಳು ಬರುತ್ತವೆ. ಅವುಗಳನ್ನು ಉಪ್ಪು ನೀರಿನಲ್ಲಿ ಅಥವಾ ಸುಣ್ಣದ ನೀರಿನಲ್ಲಿ ಹಾಕಿದರೆ ಸತ್ತು ಹೋಗುತ್ತವೆ. ದೇವಿಪ್ರಸಾದ್‌ ಕಲ್ಲಾಜೆ: ಜಮೀನಿನ ಆರ್‌ಟಿಸಿಯಲ್ಲಿ ಬೆಳೆಯ ಹೆಸರು ನಮೂದು ಆಗದೇ ಕೆಲವು ರೈತರು ಬೆಳೆ ವಿಮೆ ಸೌಲಭ್ಯ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಉತ್ತರ: ಜಾಗದ ಆರ್‌ಟಿಸಿಯಲ್ಲಿ ಬೆಳೆಯ ಹೆಸರು ನಮೂದಾಗದಿದ್ದರೂ ಬೆಳೆ ವಿಮೆ ಸೌಲಭ್ಯ ಪಡೆಯಬಹುದು. ಇದಕ್ಕೆ ಫಲಾನುಭವಿಗಳು ‘ಮುಂದಿನ ಸರ್ವೇ ಸಮಯದಲ್ಲಿ ಬೆಳೆಯನ್ನು ಆ್ಯಪ್‌ನಲ್ಲಿ ನಮೂದು ಮಾಡುತ್ತೇವೆ’ ಎಂಬ ಘೋಷಣಾಪತ್ರವನ್ನು ಸಲ್ಲಿಸಬೇಕಾಗುತ್ತದೆ. ರಶ್ಮಿ ಕೋಡಿಕಲ್‌: ತಾರಸಿ ತೋಟ ಅತವಾ ಕಿಚನ್ ಗಾರ್ಡನ್‌ ಮಾಡುವುದಕ್ಕೆ ತೋಟಗಾರಿಕಾ ಇಲಾಖೆ ನೆರವು ಒದಗಿಸುತ್ತದೆಯೇ? ಉತ್ತರ: ಈ ಹಿಂದೆ ತೋಟಗಾರಿಕಾ ಇಲಾಖೆಯಿಂದ ಕಿಚನ್‌ ಗಾರ್ಡನ್‌ಗೆ ಉತ್ತೇಜನ ನೀಡಲಾಗುತ್ತಿತ್ತು. ಇದಕ್ಕೆ ತರಬೇತಿ ಹಾಗೂ ಕಿಟ್‌ ಒದಗಿಸುತ್ತಿದ್ದೆವು. ಈಗ ಸರ್ಕಾರ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ. ತಾರಸಿ ತೋಟ ಮಾಡುವ ಆಸಕ್ತಿ ಇರುವ ಹತ್ತಿಪ್ಪತ್ತು ಮಂದಿ ಸೇರಿ ಕೋರಿಕೆ ಸಲ್ಲಿಸಿದರೆ ತೋಟಗಾರಿಕಾ ಇಲಾಖೆಯಿಂದ ತರಬೇತಿ ನೀಡಲು ವ್ಯವಸ್ಥೆ ಮಾಡುತ್ತೇವೆ. ಜಯಂತಿ ಸುಬ್ರಹ್ಮಣ್ಯ: 5 ಸೆಂಟ್ಸ್‌ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು. ಇದಕ್ಕೆ ಸರ್ಕಾರದಿಂದ ಸವಲತ್ತು ಸಿಗುತ್ತದೆಯೇ? ಉತ್ತರ: 5 ಸೆಂಟ್ಸ್‌ ಜಮೀನಿನಲ್ಲಿ ಮಲ್ಲಿಗೆ ಕೃಷಿ ಮಾಡುವುದಕ್ಕೆ ಅಥವಾ ಜೇನು ಸಾಕಣೆಗೆ ತೋಟಗಾರಿಕಾ ಇಲಾಖೆಯು ಸಹಾಯಧನವನ್ನು ನೀಡುತ್ತದೆ. ಸುಬ್ರಹ್ಮಣ್ಯದಂತಹ ಪ್ರದೇಶದಲ್ಲಿ ಜೇನು ಕೃಷಿ ಲಾಭದಾಯಕ. ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನಿಮಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾರೆ. ಸತೀಶ್‌ ಮುಂಡಾಜೆ: ನುಗ್ಗೆ ಬೆಳೆ ದಕ್ಷಿಣ ಕನ್ನಡಕ್ಕೆ ಒಗ್ಗಿಕೊಳ್ಳುತ್ತದೆಯೇ? ಇದರ ಸಸಿಗಳು ಎಲ್ಲಿ ಸಿಗುತ್ತವೆ. ಉತ್ತರ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನುಗ್ಗೆ ಬೆಳೆಯಬಹುದು. ಆದರೆ ಮಳೆಗಾಲದಲ್ಲಿ ಇದರ ಕೊಂಬೆ ಕತ್ತರಿಸಲು ಹೋಗಬೇಡಿ. ನರ್ಸರಿಗಳಲ್ಲಿ ನುಗ್ಗೆ ಸಸಿಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT