ಬುಧವಾರ, ಜುಲೈ 6, 2022
21 °C
7 ವರ್ಷಗಳ ಹಿಂದೆ ಲಾಡ್ಜ್‌ನಲ್ಲಿ ಕೂಡಿಹಾಕಿ ದುಷ್ಕೃತ್ಯ

ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ ಏಳು ವರ್ಷ ಕಠಿಣ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ 1 ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ- 1 ನ್ಯಾಯಾಲಯದ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಮಂಗಳೂರು ತಾಲ್ಲೂಕಿನ ಇರ್ಫಾನ್ ಶಿಕ್ಷೆಗೆ ಒಳಗಾದ ಅಪರಾಧಿ. 2014ರಲ್ಲಿ ಈತ ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್‌ನಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇರ್ಫಾನ್ ಸಂತ್ರಸ್ತೆಯ ಪರಿಚಯ ಮಾಡಿಕೊಂಡು, ಪ್ರೀತಿ-ಪ್ರೇಮದ ಹೆಸರಿನಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ. ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. 2014ರ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ, ಚಿಕ್ಕಮಗಳೂರಿನ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಪಾಲಕರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆಗಿನ ಉಳ್ಳಾಲ ಇನ್‌ಸ್ಪೆಕ್ಟರ್ ಸವಿತ್ರ ತೇಜ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್, ಪೂರಕ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಯ ಅಪರಾಧ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.

ನ್ಯಾಯಾಲಯವು ತನಿಖಾಧಿಕಾರಿಗಳು, ಸಾಂದರ್ಭಿಕ ಸಾಕ್ಷಿದಾರರು ಮತ್ತು ವೈದ್ಯಾಧಿಕಾರಿಗಳ ಸಾಕ್ಷ್ಯವನ್ನು ಪರಿಗಣಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ. 15 ಮಂದಿ ಸಾಕ್ಷಿದಾರರ ಹೇಳಿಕೆ ಮತ್ತು 22 ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದ ಮಂಡಿಸಿದ್ದರು.

ಟೋಲ್‌ ಸಿಬ್ಬಂದಿ ಬಂಧನ

ಮಂಗಳೂರು: ಕಾರು ಚಾಲಕಿಗೆ ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಟೋಲ್‌ಗೇಟ್ ಸಿಬ್ಬಂದಿ ಯೋಗೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ನ.27ರ ರಾತ್ರಿ ಸುಮಾರು 9 ಗಂಟೆಗೆ ಸೀಮಾ ರಂಜಿತ್ ಶೆಟ್ಟಿ ಅವರು ತಮ್ಮ ಪತಿಯ ಜೊತೆಗೆ ಕಾರಿನಲ್ಲಿ ಸುರತ್ಕಲ್ ಟೋಲ್‌ ಗೇಟ್ ಬಳಿ ತಲುಪಿದ್ದು, ಎಡಬದಿ ರಸ್ತೆಯಲ್ಲಿ ತೆರಳಲು ಕಾರನ್ನು ತಿರುಗಿಸಿದಾಗ ಟೋಲ್ ಸಿಬ್ಬಂದಿ ಯೋಗೀಶ್ ಕಾರಿಗೆ ಅಡ್ಡ ನಿಂತು, ‘ಈ ರಸ್ತೆಯಲ್ಲಿ ಹೋಗಬಾರದು. ಬಲಬದಿಯ ಗೇಟ್ ಮೂಲಕ ತೆರಳುವಂತೆ’ ಒತ್ತಾಯಿಸಿದ. ಕಾರಿನ ಮುಂದೆ ಕೋನ್‌ಗಳನ್ನು ಅಡ್ಡವಾಗಿ ನಿಲ್ಲಿಸಿದ. 'ಈ ರೀತಿ ಏಕೆ ಮಾಡುತ್ತೀರಿ' ಎಂದು ಸೀಮಾ ರಂಜಿತ್ ಶೆಟ್ಟಿ, ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ 'ಹೊಡೆಯುವ ರೀತಿಯಲ್ಲಿ ಬಂದು ಮೈಗೆ ಕೈ ಹಾಕಲು ಯತ್ನಿಸಿ ಮಾನಹಾನಿ ಮಾಡಿದ ಎನ್ನಲಾಗಿದೆ. ಅಲ್ಲದೆ ತಡೆಯಲು ಮುಂದಾದ ಸೀಮಾ ಅವರ ಪತಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಪೊಲೀಸರು ಆರೋಪಿ ಯೋಗೀಶ್‌ನನ್ನು ಬಂಧಿಸಿದ್ದಾರೆ.

ವಿಮೆ: ವಂಚಿಸಿದ ವಕೀಲ

ಮಂಗಳೂರು: ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಪೋಷಕರಿಗೆ ಸಿಗಬೇಕಾಗಿದ್ದ ವಿಮಾ ಹಣವನ್ನು, ವಕೀಲನೊಬ್ಬ ಅಕ್ರಮವಾಗಿ ತಾನು ಪಡೆದಿದ್ದು, ಈಗ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

2019ರಲ್ಲಿ ಬಜಪೆಯ ಯುವಕ ಶರಣ್, ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಯುವಕನ ಪೋಷಕರು ಪರಿಹಾರಕ್ಕಾಗಿ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಬೇರೆ ಬೇರೆ ದಾಖಲೆಗಳ ಅಗತ್ಯವಿದೆ ಎಂದು ನಂಬಿಸಿದ್ದ ವಕೀಲ, ಖಾಲಿ ಹಾಳೆಯ ಮೇಲೆ ಶರಣ್ ಪೋಷಕರ ಸಹಿ ಪಡೆದಿದ್ದ.

ಎಲ್ಲ ದಾಖಲೆಗಳನ್ನು ಪಡೆದು, ಮೃತ ಶರಣ್ ಅವರ ತಾಯಿ ಶಕುಂತಲಾ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದ. ಪ್ರಕರಣ ಇತ್ಯರ್ಥಗೊಂಡು, ವಿಮಾ ಕಂಪನಿಯು ₹15 ಲಕ್ಷದ ಚೆಕ್ ಅನ್ನು ನೀಡಿತ್ತು. ಚೆಕ್‌ನಲ್ಲಿ ದೋಷವಿದೆ ಎಂದು ನಂಬಿಸಿದ್ದ ವಕೀಲ, ಆ ಚೆಕ್‌ನ ಹಣವನ್ನು ಶಕುಂತಲಾ ಹೆಸರಿನಲ್ಲಿ ತೆರೆದಿದ್ದ ಖಾತೆಗೆ ಜಮಾ ಮಾಡಿದ್ದ. ಶಕುಂತಲಾ ಮೊಬೈಲ್‌ಗೆ ಈ ಸಂದೇಶ ಬಂದಿತ್ತು. ಆದರೆ, ಅವರು ಅದು ಸುಳ್ಳು ಸಂದೇಶ ಎಂದು ನಿರ್ಲಕ್ಷಿಸಿದ್ದರು. ‌

ನಂತರ ಮತ್ತೆ ಎರಡು ಬಾರಿ ಇದೇ ರೀತಿ ಹಣ ವರ್ಗಾವಣೆಯಾದ ಸಂದೇಶ ಬಂದಾಗ ಅನುಮಾನಗೊಂಡ ಅವರು ಬ್ಯಾಂಕ್‌ನಲ್ಲಿ ವಿಚಾರಿಸಿದ್ದಾರೆ. ಆಗ ಈ ಸಂಗತಿ ಅರಿವಿಗೆ ಬಂದಿದೆ. ಬಂದರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ‘ಪೋಷಕರಿಗೆ ಸಂದಾಯವಾಗಬೇಕಾಗಿದ್ದ ಹಣವನ್ನು ತನ್ನ ಖಾತೆಗೆ ವಕೀಲ ವರ್ಗಾವಣೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಗೆ ಶೋಧ ನಡೆಯುತ್ತಿದೆ’ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಸುಟ್ಟು ಕರಕಲಾದ ವಾಹನಗಳು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನ ಎಂಬಲ್ಲಿ ದ್ವಿಚಕ್ರ ವಾಹನದ ಗ್ಯಾರೇಜ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ದುರಸ್ತಿಗೆ ಬಂದ ವಾಹನಗಳು ಸುಟ್ಟು ಕರಕಲಾಗಿವೆ.

ಕಡೇಶಿವಾಲಯ ನಿವಾಸಿ ಚಂದ್ರಶೇಖರ್ ಎಂಬುವರ ಮಾಲೀಕತ್ವದ ಶರವು ಆಟೊ ವರ್ಕ್ಸ್ ಗ್ಯಾರೇಜ್‌ನಲ್ಲಿ ಭಾನುವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿಳಿದ ಸ್ಥಳೀಯ ನಿವಾಸಿಯೊಬ್ಬರು ಘಟನೆಯ ಬಗ್ಗೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ವೇಳೆಗೆ ಬೆಂಕಿ ಇಡೀ ಗ್ಯಾರೇಜ್‌ ಅನ್ನು ಆವರಿಸಿತ್ತು. ದುರಸ್ತಿಗೆ ಬಂದಿದ್ದ ವಾಹನಗಳು ಬೆಂಕಿಗೆ ಆಹುತಿ ಆಗಿದ್ದು, ಅಂದಾಜು ₹ 5 ಲಕ್ಷ ನಷ್ಟ ಸಂಭವಿಸಿದೆ ಎಂದು ಚಂದ್ರಶೇಖರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಾಲ್ವರ ಬಂಧನ

ಉಪ್ಪಿನಂಗಡಿ: ಸಮೀಪದ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಮರದ ದಿಮ್ಮಿ ಸಾಗಾಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದೆ.

ನ್ಯಾಯತರ್ಪು ಗ್ರಾಮದ ನಿವಾಸಿ ಮಹಮ್ಮದ್ ಮನ್ಸೂರ್, ಕಣಿಯೂರು ಗ್ರಾಮದ ನಿವಾಸಿ ಮಹಮ್ಮದ್ ಇರ್ಷಾದ್‌, ಅಬೂಬಕ್ಕರ್ ಸಿದ್ದಿಕ್ ಹಾಗೂ ಉರುವಾಲು ಗ್ರಾಮದ ನಿವಾಸಿ ಅಬ್ದುಲ್ ಸಮದ್ ಬಂಧಿತ ಆರೋಪಿಗಳು. ವಶಪಡಿಸಿಕೊಂಡ ಮರದ ದಿಮ್ಮಿ ಹಾಗೂ ಪಿಕ್‌ಅಪ್‌ ವಾಹನದ ಮೌಲ್ಯ ₹4 ಲಕ್ಷ ಎಂದು ಅಂದಾಜಿಸಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಭರತ್, ಕೆ.ಆರ್. ಅಶೋಕ, ಅರಣ್ಯ ರಕ್ಷಕ ರಾಜೇಶ, ವಿನಯಚಂದ್ರ ಆಳ್ವ, ವಾಹನ ಚಾಲಕ ಕಿಶೋರ್ ಕುಮಾರ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು