ಭಾನುವಾರ, ಜೂನ್ 13, 2021
23 °C
ಜಿಲ್ಲೆಯಲ್ಲಿ 194 ಮಂದಿಗೆ ಸೋಂಕು: 183 ಜನ ಗುಣಮುಖ

ದಕ್ಷಿಣ ಕನ್ನಡ | ಸಕ್ರಿಯಕ್ಕಿಂತ ಗುಣಮುಖರ ಸಂಖ್ಯೆ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಶನಿವಾರ 194 ಮಂದಿಗೆ ಕೋವಿಡ್‌–19 ದೃಢವಾಗಿದ್ದು, 183 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟು 3,374 ಸಕ್ರಿಯ ಪ್ರಕರಣಗಳಿದ್ದರೆ, 3,487 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ಮತ್ತೆ 194 ಮಂದಿಗೆ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,075 ಕ್ಕೆ ಏರಿಕೆಯಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ 129, ಬಂಟ್ವಾಳದಲ್ಲಿ 15, ಬೆಳ್ತಂಗಡಿಯಲ್ಲಿ 16, ಪುತ್ತೂರಿನಲ್ಲಿ 16, ಸುಳ್ಯದಲ್ಲಿ 5 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, ಬೇರೆ ಜಿಲ್ಲೆಗಳ 11 ಮಂದಿಗೆ ಸೋಂಕು ಖಚಿತವಾಗಿದೆ.

ಕೋವಿಡ್‌–19 ದೃಢವಾಗಿರುವವರ ಪೈಕಿ 98 ಐಎಲ್‌ಐ ಪ್ರಕರಣಗಳಿದ್ದು, 12 ಎಸ್‌ಎಆರ್‌ಐ ಪ್ರಕರಣಗಳಿವೆ. 15 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದು, 69 ಮಂದಿಯ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

183 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶನಿವಾರ 183 ಮಂದಿ ಗುಣಮುಖರಾಗಿದ್ದಾರೆ. ವೆನ್ಲಾಕ್‌, ಖಾಸಗಿ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಸೆಂಟರ್ ಹಾಗೂ ಹೋಂ ಐಸೋಲೇಷನ್‌ನಲ್ಲಿದ್ದ ಇವರ ಗಂಟಲು ದ್ರವದ ಮಾದರಿ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

6 ಮಂದಿಯ ಸಾವು: ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 6 ಮಂದಿ ಮೃತಪಟ್ಟಿದ್ದು, ಅವರಿಗೆ ಕೋವಿಡ್–19 ಇರುವುದು ಶನಿವಾರ ದೃಢವಾಗಿದೆ. ನಗರದ ವೆನ್ಲಾಕ್‌ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಕೋವಿಡ್‌–19 ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಕಾಸರಗೋಡು: 73 ಮಂದಿಗೆ ಕೋವಿಡ್

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 73 ಜನರಿಗೆ ಕೋವಿಡ್– 19 ದೃಢಪಟ್ಟಿದೆ. ಸಂಪರ್ಕದಿಂದ 67 ಜನರಿಗೆ ಹಾಗೂ ಹೊರ ರಾಜ್ಯದಿಂದ ಮೂವರಿಗೆ ಸೋಂಕು ದೃಢವಾಗಿದೆ. 3 ಜನರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. 33 ಜನರು ಗುಣಮುಖರಾಗಿದ್ದಾರೆ.

ಕಾಸರಗೋಡಿನ 41 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಕೋವಿಡ್‌–19 ಇರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು 2,514 ಮಂದಿಗೆ ಸೋಂಕು ದೃಢವಾಗಿದೆ. ಸದ್ಯಕ್ಕೆ 1,411 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮದಾಸ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು