ಭಾನುವಾರ, ಸೆಪ್ಟೆಂಬರ್ 19, 2021
31 °C

ಯಕ್ಷಗಾನದ ವಾಲ್ಮೀಕಿ ಬೊಟ್ಟಿಕೆರೆ ಪೂಂಜಾರಿಗೆ ನುಡಿನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯಕ್ಷಗಾನದ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ (67) ಶನಿವಾರ ತಡರಾತ್ರಿ ನಿಧನರಾದರು. ಅವರು ಯಕ್ಷಗಾನದ ಸರ್ವಾಂಗ ಪರಿಣಿತರು. ಪರಂಪರೆಯ ಭಾಗವತರು, ವೇಷಧಾರಿ, ಮದ್ದಲೆವಾದಕರು ಮತ್ತು ಪ್ರಸಂಗಕರ್ತರು. ಬಿ.ಎಸ್ಸಿ ಪದವೀಧರರು.

45 ವರ್ಷ ಪ್ರಧಾನ ಭಾಗವತರಾಗಿದ್ದರು.  ಉಪ್ಪಳ ಮೇಳ, ಮುಂಬೈಯ ಪ್ರಸಿದ್ಧ ಗೀತಾಂಬಿಕ ಮೇಳ, ಪುತ್ತೂರು ಮೇಳ, ಕರ್ನಾಟಕ ಮೇಳ, ಪ್ರಸಕ್ತ 30 ವರ್ಷಗಳಿಂದ ಕಟೀಲು ದೇವಿಯ ಮೇಳಗಳಲ್ಲಿ ಅವರು ಹಾಡಿದ್ದಾರೆ.

ಅವರ ಕುರಿತು ಶಿಕ್ಷಕ ರಾಜೇಂದ್ರ ಭಟ್ ಕೆ. ಹೀಗೆ ಬರೆದಿದ್ದಾರೆ...

ಭಾಗವತ ನಿಜವಾದ ಅರ್ಥದಲ್ಲಿ ರಂಗದ ನಿರ್ದೇಶಕ ಆಗಿರಬೇಕು ಎಂದು ಪ್ರತಿಪಾದನೆ ಮಾಡಿದವರು ಪೂಂಜರು.  ಅದನ್ನು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದವರು. ಮೂರು ಶ್ರುತಿಯಲ್ಲಿ ಕೂಡ ಸುಲಲಿತವಾಗಿ ಮತ್ತು ಏಕ ಪ್ರಕಾರವಾಗಿ ಸಂಚರಿಸುವ, ಎಲ್ಲಾ ಭಾವಗಳನ್ನು ಮತ್ತು ರಸಗಳನ್ನು ಪೋಷಣೆ ಮಾಡುವ, ಸಾಹಿತ್ಯಕ್ಕೆ ಒಂದಿಷ್ಟು ಕೂಡ ಅಪಚಾರ ಮಾಡದೆ ಹಾಡುವ ಮಾಧುರ್ಯದ ಕಂಠ ಅವರದ್ದು. ರಾಗ, ತಾಳ,ಭಾವ ಎಲ್ಲವೂ ಎರಕ ಹೊಯ್ದು ಸಿರಿ ಕಂಠ ಅವರದ್ದು.

32 ಯಕ್ಷಗಾನದ ಪ್ರಸಂಗಳನ್ನು ಬರೆದರು. ಅದರಲ್ಲಿ ಅತೀ ಹೆಚ್ಚು ಪೌರಾಣಿಕ ಪ್ರಸಂಗಗಳು. ಕನ್ನಡ ,ತುಳು ಎರಡೂ ಭಾಷೆಯಲ್ಲಿ ಅವರು ಬರೆದವರು.

ಎವರ್ ಗ್ರೀನ್ ಪ್ರಸಂಗ "ಮಾ ನಿಷಾದ" ಬರೆದವರು ಅವರೇ! ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ......ಎಲ್ಲವೂ ಸೂಪರ್ ಹಿಟ್ ಆಗಿವೆ. ತುಳು ಭಾಷೆಯಲ್ಲಿ ಅವರು ಆರು ಪ್ರಸಂಗಗಳನ್ನು ಬರೆದಿದ್ದಾರೆ.
   
ಅವರು ಬರೆದ ಯಕ್ಷಗಾನ ಪ್ರಸಂಗಗಳೆಲ್ಲವೂ ಗೇಯತೆ ಪ್ರಧಾನ ಆದವು. ಪುರಾಣದ ಆಳವಾದ ಅಧ್ಯಯನ, ಪಾತ್ರಗಳ ಅದ್ಭುತ ಕಲ್ಪನೆ, ಛಂದಸ್ಸು, ಅಲಂಕಾರ ಮತ್ತು ಸಾಹಿತ್ಯ ಪ್ರಜ್ಞೆಗಳು ಮೇಳೈಸಿದ ರಸಪಾಕ ಅವರ ಪ್ರಸಂಗಗಳು. ಅವರು ಸ್ವತಃ ಭಾಗವತರೇ ಆಗಿ ರಂಗದ ನಡೆ ತಿಳಿದಿರುವ ಕಾರಣ ಅವರ ಎಲ್ಲಾ ಪ್ರಸಂಗಗಳು ಕೂಡ ರಂಗದಲ್ಲಿ ವಿಜೃಂಭಿಸಿದವು."ಮಾ ನಿಷಾದ" ಪ್ರಸಂಗದ ಅದ್ಭುತ  ಪದ್ಯಗಳು ಮೌಲ್ಯಯುತವಾಗಿವೆ. ಅನ್ವರ್ಥವಾಗಿ ಅವರಿಗೆ 'ಯಕ್ಷಗಾನದ ವಾಲ್ಮೀಕಿ' ಎಂಬ ಬಿರುದು ಬಂದಿತು.

ಮುದ್ದಣ ಪ್ರಶಸ್ತಿ, ಮುಂಬೈಯ ಯಕ್ಷ ಮಾನಸ ಪ್ರಶಸ್ತಿ, ಅಕಾಡೆಮಿ ಪುಸ್ತಕ ಸಾಹಿತ್ಯ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಕರ್ನೂರು ಪ್ರಶಸ್ತಿ.... ಹೀಗೆ ಸಾಲು ಸಾಲು ಪ್ರಶಸ್ತಿಗಳು ಅವರಿಗೆ ದೊರೆತಿವೆ. ತನ್ನ ಮನೆಯನ್ನೇ ಗುರುಕುಲ ಮಾಡಿ ನೂರಾರು ಶಿಷ್ಯರಿಗೆ ಭಾಗವತಿಕೆಯ ಮತ್ತು ಯಕ್ಷಗಾನ ಸಾಹಿತ್ಯದ ತರಗತಿಯನ್ನು ನಡೆಸಿಕೊಂಡು ಬಂದಿದ್ದರು.

ಅಂತಹ ಯಕ್ಷಗಾನದ ಶಕ ಪುರುಷನಿಗೆ ಕಳೆದ ಅರ್ಧ ವರ್ಷದಿಂದ ತೀವ್ರ ರಕ್ತ ಸಂಬಂಧಿ ಕಾಯಿಲೆ ಬಂದಿದ್ದು ಮಂಗಳೂರಿನ ಖಾಸಗಿ ನರ್ಸಿಂಗ್ ಹೋಂನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

"ನೀವೆಲ್ಲ ವರ್ಕ್ ಫ್ರಮ್ ಹೋಮ್, ನಾನು ವರ್ಕ್ ಫ್ರಮ್ ಹಾಸ್ಪಿಟಲ್!" ಎಂದು ನೋವಿನಲ್ಲಿ ಕೂಡ ನಗಲು ಪ್ರಯತ್ನ ಪಡುತ್ತಿದ್ದರು. ಯಕ್ಷಗಾನದ ವಾಲ್ಮೀಕಿ ಇನ್ನಿಲ್ಲ ಎಂದರೆ ನಂಬುವುದು ಕಷ್ಟ.

ಇದನ್ನೂ ಓದಿ... ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು