ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ರಷ್ಟು ಹಾಸಿಗೆ ಕಾಯ್ದಿರಿಸಲು ಸೂಚನೆ

ಕೋವಿಡ್‌ 2ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ: ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ
Last Updated 18 ಏಪ್ರಿಲ್ 2021, 4:23 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ 2ನೇ ಅಲೆಯನ್ನು ಎದುರಿಸಲು ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊ ಳ್ಳಬೇಕು. ಸಮರೋಪಾಧಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ಕುರಿತ ಮೇಲ್ವಿಚಾರಣಾ ತಂಡಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಏರುಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಕಾಯ್ದಿರಿಸಬೇಕು. ಇದರೊಂದಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಸೂಚಿಸಿದರು.

ಚಿಕಿತ್ಸೆಗೆ ಬರುವ ಸಾಮಾನ್ಯ ರೋಗಿಗಳು ಲಸಿಕೆ ಪಡೆಯಲು ಶಿಫಾರಸು ಮಾಡುವುದರೊಂದಿಗೆ ಅವರು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಕೋವಿಡ್ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವ ₹800 ಮಾತ್ರ ಪಡೆಯಬೇಕು. ಕೆಲವು ರೋಗಿಗಳಲ್ಲಿ ಈ ಮೊತ್ತ ಭರಿಸಲು ಸಾಧ್ಯವಾಗದೇ ಇದ್ದಲ್ಲಿ ಅಂಥವರ ಗಂಟಲು ದ್ರವದ ಮಾದರಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಬೇಕು ಎಂದು ತಿಳಿಸಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ಅವುಗಳ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡುವಾಗ ಕಡ್ಡಾಯವಾಗಿ ರೋಗದ ಲಕ್ಷಣಗಳ ಬಗ್ಗೆ ನಮೂದಿಸಬೇಕು ಎಂದರು.

ಖಾಸಗಿ ಆಸ್ಪತ್ರೆಗಳು ಪ್ರತಿದಿನ ತಮ್ಮ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಬೆಡ್‌ಗಳು ದೊರಕುವಂತಹ ಮಾಹಿತಿಯನ್ನು ಜಿಲ್ಲಾಡಳಿತ
ದೊಂದಿಗೆ ಹಂಚಿಕೊಳ್ಳಬೇಕು. ಅವುಗಳ ನಿರ್ವಹಣೆ ಮಾಡಲು ಈಗಾಗಲೇ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಈ ಅಧಿಕಾರಿಗಳು ತಮಗೆ ನೀಡಿರುವ ಆಸ್ಪತ್ರೆಗಳ ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಸೋಂಕು ನಿರೋಧಕ ಲಸಿಕೆ ನೀಡುವ ಸಂಖ್ಯೆ ಕಡಿಮೆ ಇದೆ. ಇದನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ರೋಗಿಗಳ ಜೊತೆ ವಿಶ್ವಾಸದೊಂದಿಗೆ ಕೈಗೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ, ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

‘ಸಾವು ಸಂಭವಿಸಿದಂತೆ ಎಚ್ಚರ ವಹಿಸಿ’
ಚಿಕಿತ್ಸೆ ಅಥವಾ ಔಷಧಿ ದೊರಕದೆ ಜಿಲ್ಲೆಯಲ್ಲಿ ಯಾವುದೇ ಸಾವು ಉಂಟಾಗದಂತೆ ಎಚ್ಚರವಹಿಸಬೇಕು. ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಹಾಗೂ ಆಮ್ಲಜನಕದ ಕೊರತೆ ಉಂಟಾದಲ್ಲಿ ಕೂಡಲೇ ಜಿಲ್ಲಾ ಡ್ರಗ್ ಕಂಟ್ರೋಲರ್ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚಿಸಿದರು.

ಚಿಕಿತ್ಸೆಗೆ ಬರಲು ತೊಂದರೆ ಇರುವ ದೂರದ ಸಾಮಾನ್ಯ ರೋಗಿಗಳಿಗೆ ಸಾಧ್ಯವಾದಷ್ಟು ಆರೋಗ್ಯ ಸಂಜೀವಿನಿ ಅಡಿಯಲ್ಲಿ ಆನ್‌ಲೈನ್‌ ಮೂಲಕ ಟೆಲಿಮೆಡಿಸಿನ್‌ಗಳನ್ನು ನೀಡಲು ಮುಂದಾಗಬೇಕು ಎಂದರು.

ಸೋಂಕಿತರನ್ನು ಚಿಕಿತ್ಸೆಗೆ ಕರೆತರಲು ಆಂಬುಲೆನ್ಸ್‌ಗಳು ವ್ಯವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಖಾಸಗಿ ಆಂಬುಲೆನ್ಸ್‌ಗಳು ಸೇರಿದಂತೆ ಅವುಗಳ ಚಾಲಕರ ಮೊಬೈಲ್ ನಂಬರ್‌ಗಳನ್ನು ಕ್ರೋಡೀಕರಿಸಿ ಇಟ್ಟುಕೊಳ್ಳಬೇಕು ಎಂದರು.

ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೊನೆ ಗಳಿಗೆಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗಬಾರದು. ಹೀಗೆ ಮಾಡಿದಲ್ಲಿ ಅಂತಹ ವೈದ್ಯರ ಮೇಲೆ ವೈದ್ಯಕೀಯ ನಿರ್ಲಕ್ಷ್ಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT