ಶನಿವಾರ, ಮೇ 15, 2021
26 °C

ಕಾಂಗ್ರೆಸ್‌ನಿಂದ ‘ಏರ್‌ಪೋರ್ಟ್ ಉಳಿಸಿ’ ಚಳವಳಿ: ಐವನ್ ಡಿಸೋಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಗತಿ ಕುಂಠಿತ ವಿರೋಧಿಸಿ, ‘ಏರ್‌ಪೋರ್ಟ್ ಉಳಿಸಿ’ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚು ಇದೆ. ಆದರೆ, ಗೋ ಏರ್ ಕಂಪನಿಯು ಮುಂಬೈ ಮತ್ತು ಬೇರೆ ಪ್ರದೇಶಗಳಿಗೆ ವಿಮಾನ ಸಂಚಾರಕ್ಕೆ ಮುಂದೆ ಬಂದರೂ ಅದು ಇನ್ನೂ ಕಾರ್ಯಗತವಾಗಿಲ್ಲ. ಮಂಗಳೂರು-ಮೈಸೂರು ಮಧ್ಯೆ ವಿಮಾನ ಸಂಚಾರ ಶುರುವಾದರೂ ಈಗ ಸ್ಥಗಿತಗೊಂಡಿದೆ. ಮಂಗಳೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಾನ್ಯತೆ ಪಡೆದು 16 ವರ್ಷಗಳಾದರೂ ಗಲ್ಫ್ ರಾಷ್ಟ್ರಗಳಿಗೆ ಬಿಟ್ಟು ಬೇರೆ ವಿಮಾನ ಸಂಚಾರ ವ್ಯವಸ್ಥೆಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ವಿಫಲವಾಗಿದೆ. ಪ್ರಯಾಣಿಕರ ಸಂಖ್ಯೆಯನ್ನು ನೆಪವಾಗಿಟ್ಟುಕೊಂಡು ಒಂದೊಂದೇ ವಿಮಾನ ಸಂಚಾರವನ್ನು ಕಡಿಮೆಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಮಂಗಳೂರು-ದೆಹಲಿ ನಡುವೆ ಸ್ಪೈಸ್‍ಜೆಟ್ ಹಾಗೂ ಇಂಡಿಗೊ ವಿಮಾನ ಸಂಚಾರ ಪ್ರಾರಂಭವಾಗಿತ್ತು. ದೆಹಲಿಗೆ ತೆರಳುವ ವಿಮಾನದ ವೇಳೆಯನ್ನು ಬೆಳಗ್ಗೆ 7.30ರ ಬದಲಿಗೆ ರಾತ್ರಿ 11.30ಕ್ಕೆ ಬದಲಾಯಿಸಲಾಗಿದೆ. ದೆಹಲಿ ಸಂಚಾರದ ಅವಧಿ 3 ಗಂಟೆ ಆಗಿದ್ದು, ನಸುಕಿನ 2.30 ಗಂಟೆಗೆ ಅಲ್ಲಿಗೆ ತಲುಪುತ್ತದೆ. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ 11.30ಕ್ಕೆ ವಿಮಾನ ಸಂಚಾರದ ಸಮಯ ನಿಗದಿಪಡಿಸಲಾಗಿದೆ. ಅಷ್ಟು ಹೊತ್ತಿನಲ್ಲಿ ಪ್ರಯಾಣಿಕರು ಎಲ್ಲಿಗೆ ತೆರಳಬೇಕು. ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಯನ್ನು ಬದಲಾಯಿಸಿರುವ ಹಿಂದಿನ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

ಮಂಗಳೂರು ವಿಮಾನ ನಿಲ್ದಾಣವು ಜನಪರ ನಿಲ್ದಾಣವಾಗಿ ರೂಪುಗೊಳ್ಳಲು ವಿಫಲವಾಗಿದೆ. ನಿಲ್ದಾಣದಲ್ಲಿ ಪ್ರವಾಸೋದ್ಯಮ, ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಾಹಿತಿ ಕೇಂದ್ರದ ಲಭ್ಯತೆ ಇಲ್ಲ. ವಿಮಾನ ನಿಲ್ದಾಣದ ವಿಸ್ತರಣೆ ಕಾಮಗಾರಿ ಕುಂಠಿತಗೊಂಡು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ‘2 ಎರೊಬ್ರಿಡ್ಜ್‌’ ಸ್ಥಾಪಿಸಲು ಮೂರು ವರ್ಷಗಳಿಂದ ಸಾಧ್ಯವಾಗಿಲ್ಲ. ಉಡಾನ್ ಸ್ಕೀಮ್ ನಿಯಮದಂತೆ ಉಡುಪಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬಹುದು. ಆದರೆ, ಇದರಲ್ಲಿ ಸಂಸದರ ರಾಜಕೀಯ ಇಚ್ಛಾಶಕ್ತಿ ಎದ್ದು ಕಾಣುತ್ತದೆ ಎಂದು ಹೇಳಿದರು.

ಫಲಕಕ್ಕೆ ಮಸಿ ಬಳಿಯುವ ಎಚ್ಚರಿಕೆ
ಗುತ್ತಿಗೆ ಒಪ್ಪಂದ ಉಲ್ಲಂಘಿಸಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಅದಾನಿ ಏರ್‌ಪೋರ್ಟ್‌’ ಎಂದು ನಾಮಕರಣ ಮಾಡಿದ್ದು, ಅದನ್ನು ತೆರವುಗೊಳಿಸದಿದ್ದರೆ, ಆ ಫಲಕಕ್ಕೆ ಮಸಿ ಬಳಿಯಲಾಗುವುದು ಎಂದು ಐವನ್ ಡಿಸೋಜಾ ಎಚ್ಚರಿಸಿದರು.

ಜನರ ತೆರಿಗೆ ಹಣದಿಂದ ನಿರ್ಮಾಣವಾದ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸುವ ಅಧಿಕಾರ ಅದಾನಿ ಕಂಪನಿಗೆ ಇಲ್ಲ. 15 ದಿನಗಳಲ್ಲಿ ಈ ಹೆಸರನ್ನು ತೆಗೆಯದಿದ್ದರೆ, ಫಲಕಕ್ಕೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಪ್ರಮುಖರಾದ ಲುಕ್ಮಾನ್, ಶಾಹುಲ್ ಹಮೀದ್, ಎ.ಸಿ.ವಿನಯರಾಜ್, ಭಾಸ್ಕರ ರಾವ್, ಸೂರಜ್‍ಪಾಲ್, ಸೋಹಾನ್, ಶುಭೋದಯ ಆಳ್ವ, ವಿವೇಕ್‍ರಾಜ್, ಅಲಿಸ್ಟಕ್ ಡಿಕುನ್ನ, ಅಪ್ಪಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು