ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ: ಶರಣ್‌ ಪಂಪ್‌ವೆಲ್‌

Published 21 ಸೆಪ್ಟೆಂಬರ್ 2023, 10:05 IST
Last Updated 21 ಸೆಪ್ಟೆಂಬರ್ 2023, 10:05 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿ ಟಿಕೆಟ್‌ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ. ಆಕೆ ನಮ್ಮ ಸಂಘಟನೆಯ ಸದಸ್ಯೆ ಅಲ್ಲ’ ಎಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಆಕೆ ಉತ್ತಮ ಭಾಷಣ ಮಾಡುತ್ತಿದ್ದರು. ಆ ಕಾರಣಕ್ಕೆ ಬಜರಂಗ ದಳದ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದು ನಿಜ. ಅವರು ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ಆಗಲಿ. ನಮ್ಮ ಸಂಘಟನೆ ಇಂತಹ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಇಂತಹ ಪ್ರಕರಣಗಳು ಮರುಕಳಿಸಬಾರದು. ಈ ಪ‍್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದರು.

‘ಈ ವಂಚನೆ ಪ್ರಕರಣದ ಬಗ್ಗೆ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ಎರಡು ತಿಂಗಳ ಹಿಂದೆ ನನ್ನ ಗಮನಕ್ಕೆ ತಂದಿದ್ದು ನಿಜ. ನೀವು ತಪ್ಪು ಮಾಡಿಲ್ಲವಾದರೆ ತಲೆಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ಹೇಳಿದ್ದೆ’ ಎಂದರು.

ವಿಎಚ್‌ಪಿಗೆ 60 ವರ್ಷ: ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆ

‘ವಿಶ್ವ ಹಿಂದೂ ಪರಿಷತ್‌ಗೆ 2024ಕ್ಕೆ 60 ವರ್ಷ ತುಂಬಲಿರುವ ಪ್ರಯುಕ್ತ ಬಜರಂಗದಳವು ಇದೇ 25ರಿಂದ ರಾಜ್ಯದಾದ್ಯಂತ 'ಶೌರ್ಯ ಜಾಗರಣ ರಥಯಾತ್ರೆ"ಯನ್ನು ಹಮ್ಮಿಕೊಳ್ಳಲಿದೆ’ ಎಂದು ಶರಣ್‌ ಪಂಪ್‌ವೆಲ್‌ ತಿಳಿಸಿದರು.

‘ಎರಡೂವರೆ ಸಾವಿರ ವರ್ಷಗಳಿಂದಲೂ ನಮ್ಮ ರಾಷ್ಟ್ರದ ಮೇಲೆ ಪರಕೀಯರಿಂದ ದಾಳಿಗಳು ನಡೆಯುತ್ತಾ ಬಂದಿವೆ. ಅವುಗಳೆಲ್ಲವನ್ನು ಎದುರಿಸಿ ಸನಾತನ ಧರ್ಮವನ್ನು ಸಂರಕ್ಷಿಸುವಲ್ಲಿ ಲಕ್ಷಾಂತರ ವೀರ ಪರಾಕ್ರಮಿಗಳು ಬಲಿದಾನ ಮಾಡಿದ್ದಾರೆ. ಇಂದಿನ ಯುವ ಪೀಳಿಗೆಯು ಈ ಬಲಿದಾನಗಳನ್ನು ಸ್ಮರಿಸುವಂತೆ ಮಾಡಲು ಈ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ರಾಜ್ಯದಲ್ಲಿ ಬಜರಂಗ ದಳದ 2000 ಶಾಖೆಗಳಿವೆ. ಇದನ್ನು 2024ರ ವೇಳೆಗೆ 5 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯಿಂದ , ದುಶ್ಚಟಗಳಿಂದ ಮುಕ್ತಿ ಪಡೆದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಯುವಪೀಳಿಗೆಯನ್ನು ಪ್ರೇರೇಪಿಸುವುದೂ ಈ ರಥಯಾತ್ರೆಯ ಉದ್ದೇಶ. ಲವ್ ಜಿಹಾದ್‌, ಮತಾಂತರ ಹಾಗೂ ಗೋಹತ್ಯೆ ತಡೆಯ ಬಗ್ಗೆಯೂ ಜಾಗೃತಿ ಮೂಡಿಸಲಿದ್ದೇವೆ’ ಎಂದರು.

‘ಚಿತ್ರದುರ್ಗದಲ್ಲಿ ಇದೇ 25ರಂದು ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ದಾವಣಗೆರೆ, ಶಿವಮೊಗ್ಗ, ಸಾಗರ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾ‍ಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಕೊಡಗು, ಸುಳ್ಯ, ಪುತ್ತೂರು, ಮಂಗಳೂರು, ಮೂಲಕ ಸಾಗುವ ಈ ಯಾತ್ರೆಯು ಉಡುಪಿಯಲ್ಲಿ ಅ.10ರಂದು ಸಮಾರೋಪಗೊಳ್ಳಲಿದೆ. ಆ ಪ್ರಯುಕ್ತ ಹಿಂದೂ ಸಮಾಜೋತ್ಸವವನ್ನು ಏರ್ಪಡಿಸಲಿದ್ದು, 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ರಥಯಾತ್ರೆಯು ಅ. 6ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯವನ್ನು ಪ್ರವೇಶಿಸಲಿದೆ. ಅ. 7ರಂದು ಪುತ್ತೂರಿನಲ್ಲಿ, ಅ. 9ರಂದು ಮಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಿದ್ದೇವೆ’ ಎಂದು ತಿಳಿಸಿದರು.

‘2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ ಈ ರಥಯಾತ್ರೆಗೂ ಸಂಬಂಧ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ.ಪುರುಷೋತ್ತಮ, ವಿಭಾಗ ಸಂಯೋಜಕ ಭುಜಂಗ ಕುಲಾಲ್‌, ಜಿಲ್ಲಾ ಸಂಚಾಲಕ ನವೀನ್‌ ಮೂಡುಶೆಡ್ಡೆ, ವಿಭಾಗ ಸಹಸಂಚಾಲಕ ಪುನೀತ್‌ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT