ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಫಟ್ಟಗಳು ಒಂದು ಪ್ರೇಮ ಕಥನ: 9 ಭಾಷೆಗಳಲ್ಲಿ ಡಾ.ಗಾಡ್ಗೀಳರ ಆತ್ಮಚರಿತ್ರೆ

Published 5 ಜೂನ್ 2023, 4:43 IST
Last Updated 5 ಜೂನ್ 2023, 4:43 IST
ಅಕ್ಷರ ಗಾತ್ರ

ಮಂಗಳೂರು: ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಅವರ ಆತ್ಮಚರಿತ್ರೆಯು ಪ್ರಕಟಣೆಗೆ ಸಿದ್ಧವಾಗುತ್ತಿದ್ದು, ಏಕಕಾಲದಲ್ಲಿ ಕನ್ನಡವೂ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಇದು ಸದ್ಯದಲ್ಲಿ ಪ್ರಕಟ ವಾಗಲಿದೆ.

ಕನ್ನಡದಲ್ಲಿ ‘ಪಶ್ಚಿಮಫಟ್ಟಗಳು; ಒಂದು ಪ್ರೇಮ ಕಥನ’ ಹೆಸರಿನಲ್ಲಿ ಪ್ರಕಟವಾಗಲಿರುವ ಈ ಕೃತಿಯು ಸುಮಾರು 250 ಪುಟಗಳನ್ನು ಹೊಂದಿದೆ. ಡಾ. ಗಾಡ್ಗೀಳ್ ಅವರು ಇಂಗ್ಲಿಷ್‌ನಲ್ಲಿ ತಮ್ಮ ಆತ್ಮ ಚರಿತ್ರೆಯನ್ನು ಬರೆದಿದ್ದು, ಮರಾಠಿ, ಕೊಂಕಣಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ ಮತ್ತು ಹಿಂದಿ ಭಾಷೆಗಳಿಗೆ ಅನುವಾದ ಕಾರ್ಯ ನಡೆಯುತ್ತಿದೆ.

‘ಗಾಡ್ಗೀಳ್ ಅವರ ಆತ್ಮಚರಿತ್ರೆಯು ಪ್ರಕೃತಿಯೊಂದಿಗೆ ಅವರ ಗಾಢವಾದ ಸಂಬಂಧ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅವರ ಅಚಲ ಬದ್ಧತೆಯ ಚಿತ್ರಣವನ್ನು ಒಳಗೊಂಡಿದೆ. ಅವರ ಆತ್ಮಚರಿತ್ರೆಯು ಭಾರತದ ಪರಿಸರ ಪರಂಪರೆಯನ್ನು ಸಂರಕ್ಷಿಸಲು ಓದುಗರನ್ನು ಪ್ರೇರೇಪಿಸುತ್ತದೆ. ಇದು ಪರಿಸರ ಪ್ರೇಮಿಗಳು, ಸಂರಕ್ಷಣಾ ಉತ್ಸಾಹಿಗಳು, ವಿಜ್ಞಾನಿಗಳು ಮತ್ತು ಭಾರತದ ನೈಸರ್ಗಿಕ ಪರಂಪರೆಯ ತಿಳಿವಳಿಕೆಯನ್ನು ಬಯಸುವವರಿಗೆ ಮಾರ್ಗದರ್ಶನ ನೀಡುವಂತಿದೆ. ಅವರ ಆತ್ಮಚರಿತ್ರೆಯು ಪರಿಸರ  ಕೋಶವನ್ನು ಓದಿದ ಅನುಭವ ನೀಡಲಿದೆ’ ಎನ್ನುತ್ತಾರೆ ಕೃತಿಯನ್ನು ಕನ್ನಡಕ್ಕೆ ಅನುವಾದಿಸುತ್ತಿರುವ ಪರಿಸರ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ. ದೇವಿಪ್ರಸಾದ್ ಅವರು.

‘ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಆಕರ್ಷಿತರಾದವರು. ಆದಿವಾಸಿಗಳು, ರೈತರು, ಕುರುಬರು, ಪಶುಸಂಗೋಪಕರು ಮತ್ತು ಮೀನುಗಾರರ ಜೊತೆ ಬೆರೆತು ಕೆಲಸ ಮಾಡಿ ಅವರ ಸಹಕಾರದೊಂದಿಗೆ ಮೂಲಭೂತ ಮತ್ತು ಆನ್ವಯಿಕ ಸಂಶೋಧನೆಯಲ್ಲಿ ತೊಡಗಿದವರು. ಜನತಾ ಜೀವವೈವಿಧ್ಯ ದಾಖಲಾತಿಗಳ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದವರು. ಅವರು ಈ ಎಲ್ಲ ಅನುಭವ ಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ’ ಎನ್ನುವ ಡಾ. ದೇವಿಪ್ರಸಾದ್ ಅವರು, ‘ಪಶ್ಚಿಮ ಘಟ್ಟಗಳ  ಅಭಿವೃದ್ಧಿಯ ಮೌಲ್ಯಮಾಪನ ಕಾರ್ಯಕ್ರಮ, ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಅಧ್ಯಯನ ಮತ್ತು ಜನತಾ ಜೀವವೈವಿಧ್ಯ ದಾಖಲಾತಿ ಯೋಜನೆಗಳಲ್ಲಿ ಗಾಡ್ಗೀಳ್ ಅವರ ಜತೆ 15 ವರ್ಷ ಕೆಲಸ ಮಾಡಿದ ಅನುಭವವು, ಕೃತಿ ಅನುವಾದಕ್ಕೆ ಸಹಕಾರಿಯಾಯಿತು’ ಎನ್ನುತ್ತಾರೆ.

ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ವರದಿಯ (ಗಾಡ್ಗೀಳ್ ವರದಿ) ಪೂರ್ಣ ವಿವರಗಳನ್ನು ಈ ಕೃತಿ ನೀಡುತ್ತದೆ. ಕನ್ನಡ ಅನುವಾದದ ಕೃತಿಯನ್ನು ಮಂಗಳೂರಿನ ಆಕೃತಿ ಆಶಯ ಪ್ರಕಾಶನವೂ ಇಂಗ್ಲಿಷ್ ಕೃತಿಯನ್ನು ಪೆಂಗ್ವಿನ್ ಪಬ್ಲಿಕೇಷನ್ಸ್ ಪ್ರಕಟಿಸಲಿವೆ.

‘ಪರಿಸರ ಕಥನಕ್ಕೆ ಮೀಸಲು’

ಗಾಡ್ಗೀಳ್ ಅವರ ಆತ್ಮಚರಿತ್ರೆಯಲ್ಲಿ ಶೇ 10ರಷ್ಟು ವಿವರಗಳು ಮಾತ್ರ ಅವರ ಬಗ್ಗೆ ವಿವರ ಇವೆ. ಇನ್ನುಳಿದ ಎಲ್ಲ ಕಥನಗಳು ಪರಿಸರಕ್ಕೆ ಮೀಸಲಾಗಿವೆ. ಪರಿಸರದ ನಡುವೆ ಕೆಲಸ ಮಾಡುವಾಗ ಅವರಿಗೆ ವಿಜ್ಞಾನಿಗಳೊಂದಿಗೆ ಇರುವಷ್ಟೇ ಆಪ್ತತೆಯ ಖುಷಿ ನೆಲಮೂಲದ ಜ್ಞಾನ  ಹೊಂದಿರುವ ಗ್ರಾಮೀಣ ಜನರ ಜನರೊಟ್ಟಿಗೆ ಬೆರೆವಾಗಲೂ ಇರುತ್ತದೆ ಎಂಬ ಸಂಗತಿ ಕೃತಿಯುದ್ದಕ್ಕೂ ಅನುಭವಕ್ಕೆ ಬರುತ್ತದೆ ಎಂದು ಡಾ. ದೇವಿಪ್ರಸಾದ್ ವಿವರಿಸಿದರು.

ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೇ ಪರಿಸರ ಕಾನೂನುಗಳನ್ನು ರೂಪಿಸಲಾಗಿದೆ. ಪ್ರಸ್ತುತ ಇರುವ ಕಾನೂನು ಬದಲಾಗಬೇಕು. ಸ್ಥಳೀಯರ ಅಭಿಪ್ರಾಯ ಆಧರಿಸಿ ಕಾನೂನು ರೂಪುಗೊಳ್ಳಬೇಕು ಎಂದು ಅವರು ಪ್ರತಿಪಾದಿಸುತ್ತಾರೆ ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT