ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಈಜುಕೊಳಕ್ಕೆ ಚಾಲನೆ; ಅಥ್ಲೆಟಿಕ್ಸ್‌ ರಂಜನೆ

2023: ಕ್ರೀಡಾ ಹಿನ್ನೋಟ
Published 28 ಡಿಸೆಂಬರ್ 2023, 7:09 IST
Last Updated 28 ಡಿಸೆಂಬರ್ 2023, 7:09 IST
ಅಕ್ಷರ ಗಾತ್ರ

ಮಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ನಿರಂತರ ಸುದ್ದಿಯಲ್ಲಿತ್ತು. ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ ಕೂಟ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಸಂಚಲನ ಸೃಷ್ಟಿಸಿದರೆ, ಸುಸಜ್ಜಿತ ಈಜುಕೊಳ ಉದ್ಘಾಟನೆಗೊಂಡ ಎಮ್ಮೆಕೆರೆ ಮೈದಾನದ ಆವರಣದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಉಡುಪಿಯಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿವಿ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು ಕಬಡ್ಡ ಪ್ರಿಯರನ್ನು ರೋಮಾಂಚನಗೊಳಿಸಿತು.

ಮಂಗಳೂರಿನ ಮೊಗವೀರ ವ್ಯವಸ್ಥಾಪನಾ ಮಂಡಳಿ ಮತ್ತು ಯಾಂತ್ರಿಕ ಬೋಟ್ ಮಾಲೀಕರ ಸಂಘದ ಸಹಯೋಗದಲ್ಲಿ ರಾಜ್ಯ ಮತ್ತು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಗಳು ಲೋಕನಾಥ ಬೋಳಾರ್ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ ಜೂನಿಯರ್ ಮತ್ತು ಯೂತ್ ಅಥ್ಲೆಟಿಕ್ಸ್‌ನ ನಾಲ್ಕು ದಿನವೂ ದಾಖಲೆಗಳು ನಿರ್ಮಾಣವಾದವು. ಒಟ್ಟು 18 ದಾಖಲೆಗಳಿಗೆ ಸಾಕ್ಷಿಯಾದ ಕೂಟದಲ್ಲಿ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ತಂಡದವರು ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಎಮ್ಮೆಕೆರೆ ಮೈದಾನದಲ್ಲಿ ನಿರ್ಮಿಸಿರುವ ಈಜುಕೊಳವನ್ನು ನವೆಂಬರ್‌ನಲ್ಲಿ ಉದ್ಘಾಟಿಸಲಾಯಿತು. ಉದ್ಘಾಟನೆಯ ಅಂಗವಾಗಿ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ ನಡೆದಿತ್ತು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ ಸಂಸ್ಥೆ ಆಯೋಜಿಸಿದ್ದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದ ಸಮಗ್ರ ಚಾಂಪಿಯನ್ ಪಟ್ಟ ಆಳ್ವಾಸ್ ಸಂಸ್ಥೆಗೆ ಲಭಿಸಿತ್ತು. ಸ್ವರಾಜ್ಯ ಮೈದಾನದಲ್ಲಿ ನಡೆದ ಕೂಟದದಲ್ಲಿ ಒಟ್ಟು 10 ದಾಖಲೆಗಳನ್ನು ಆತಿಥೇಯ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದರು.

ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿರುವ ಆರು ಮಂದಿ ಕನ್ನಡಿಗರು ದಕ್ಷಿಣ ಕನ್ನಡ ಜಿಲ್ಲೆಯ 3 ಕಾಲೇಜುಗಳ ವಿದ್ಯಾರ್ಥಿಗಳು. ಜೈಪುರ್ ಪಿಂಕ್‌ ಪ್ಯಾಂಥರ್ಸ್ ತಂಡದಲ್ಲಿ ಅಭಿಷೇಕ್‌, ಶಶಾಂಕ್‌ ಬಿ, ಬೆಂಗಳೂರು ಬುಲ್ಸ್‌ನಲ್ಲಿ ರಕ್ಷಿತ್ ಪೂಜಾರಿ, ಪಟ್ನಾ ಪೈರೇಟ್ಸ್‌ನಲ್ಲಿ ರಂಜಿತ್ ನಾಯ್ಕ್‌, ಬೆಂಗಾಳ್‌ ವಾರಿಯರ್ಸ್‌ನಲ್ಲಿ ವಿಶ್ವಾಸ್‌ ಎಸ್‌ ಮತ್ತು ಯು.ಪಿ.ಯೋಧಾದ ಗಗನ್ ಗೌಡ ಇದ್ದಾರೆ.

ರೋಲರ್ ಸ್ಕೇಟಿಂಗ್ ಮಿಂಚು:

ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಹಾಗೂ ಮುಂಚೂರಿನ ನಾರ್ದರ್ನ್‌ ಸ್ಕೈ ಲೇಔಟ್‌ನಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್‌ ಸಂಸ್ಥೆಗಳು ಆಯೋಜಿಸಿದ್ದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ದಕ್ಷಿಣ ಕನ್ನಡ ರನ್ನರ್ ಅಪ್ ಆಯಿತು. ಜಿಲ್ಲೆಯ ಮುಹಮ್ಮದ್ ಶಾಮಿಲ್ ಅರ್ಷದ್‌, ಡಾಷೆಲ್ ಅಮಾಂಡ ಇದರಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ಫಿಡೆ ರೇಟೆಡ್ ಅಖಿಲ ಭಾರತ ಚೆಸ್ ಟೂರ್ನಿಯಲ್ಲಿ ಎ.ಆಗಸ್ಟಿನ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಈಜು ಸ್ಪರ್ಧೆಯ ಬ್ಯಾಕ್ ಸ್ಟ್ರೋಕ್ ಸ್ಪರ್ಧೆ –ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಈಜು ಸ್ಪರ್ಧೆಯ ಬ್ಯಾಕ್ ಸ್ಟ್ರೋಕ್ ಸ್ಪರ್ಧೆ –ಪ್ರಜಾವಾಣಿ ಚಿತ್ರ

ದಸರಾ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್‌, ಪುತ್ತೂರಿನಲ್ಲಿ ನಡೆದ ಹೈಸ್ಕೂಲ್‌ ವಿದ್ಯಾರ್ಥಿಗಳ ರಾಜ್ಯ ಅಥ್ಲೆಟಿಕ್ಸ್‌, ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ರಾಜ್ಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಗಳು, ವೈದ್ಯರ ಕ್ರಿಕೆಟ್ ಟೂರ್ನಿಗಳೂ ನೆನಪಿನಲ್ಲಿ ಉಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT