ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಟಿ ಬಸ್‌ಗೆ ಬೇಡಿಕೆ, ಬಸ್ ನಿಲ್ಲಿಸುತ್ತಿಲ್ಲ ಎಂಬ ದೂರು

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಶಾಸಕ
Published 24 ಜೂನ್ 2024, 16:06 IST
Last Updated 24 ಜೂನ್ 2024, 16:06 IST
ಅಕ್ಷರ ಗಾತ್ರ

ಪುತ್ತೂರು: ಸರಿಯಾದ ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬರುತ್ತಿಲ್ಲ. ಬೆಳಿಗ್ಗೆ ತಡವಾಗುತ್ತದೆ. ಸಂಜೆ ಕೆಲವೊಮ್ಮೆ ಮನೆಗೆ ಹೋಗಲು ಬಸ್ ಇರುವುದಿಲ್ಲ. ಬಸ್ ಖಾಲಿ ಇದ್ದರೂ ನಿಲ್ಲಿಸುತ್ತಿಲ್ಲ. ನಾವು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರೂ ಬಸ್ ಇಲ್ಲ ಎಂಬ ಮಾಹಿತಿಯನ್ನೂ ನೀಡುವುದಿಲ್ಲ... ಇದು ಶಾಸಕರ ಮುಂದೆ ವಿದ್ಯಾರ್ಥಿಗಳು ತೋಡಿಕೊಂಡ ಅಳಲು.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಅವರು ಸೋಮವಾರ ಸಂಜೆ ಭೇಟಿ ನೀಡಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಶಾಸಕರ ಮುಂದಿಟ್ಟರು.

ಸುಳ್ಯದಿಂದ ಬರುವ ಬಸ್‌ಗಳು ಸಂಪ್ಯ ತಲುಪುವಾಗ ಜನರಿಂದ ತುಂಬಿಹೋಗುತ್ತದೆ. ನಾವು ಕೈ ಮಾಡಿದರೂ ಬಸ್‌ ನಿಲ್ಲಸುವುದಿಲ್ಲ. ಬಸ್ ನಿಲ್ಲಿಸದೆ ಇದ್ದರೆ ನಮಗೆ ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮಗೆ ಸಿಟಿ ಬಸ್ ವ್ಯವಸ್ಥೆ ಮಾಡಿ ಎಂದು ಸಂಪ್ಯ, ಕಬಕ, ಕೋಡಿಂಬಾಡಿ, ಪುರುಷರಕಟ್ಟೆ ಸೇರಿದಂತೆ ನಗರದಿಂದ 5 ಕಿ.ಮೀ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದರು.

ಈಗಾಗಲೇ ಸಿಟಿ ಬಸ್ ವ್ಯವಸ್ಥೆ ಬಗ್ಗೆ ಆಲೋಚನೆ ಇದೆ. ಕುಂಬ್ರಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡುವ ಮೂಲಕ ಆ ಭಾಗದ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲಾಗಿದೆ. ಸದ್ಯ ಬಸ್ ಕೊರತೆ ಇದೆ. 15 ದಿನದೊಳಗೆ ವ್ಯವಸ್ಥೆ ಸರಿಪಡಿಸುವುದಾಗಿ ಶಾಸಕ ಭರವಸೆ ನೀಡಿದರು.

ಈಗಾಗಲೇ ಪುತ್ತೂರು ಡಿಪೊಕ್ಕೆ ಹೊಸ ಬಸ್‌ ನೀಡುವಂತೆ ಸಚಿವರ ಜತೆ ಮಾತನಾಡುವುದಾಗಿ ತಿಳಿಸಿದರು.

ಖಾಲಿ ಇದ್ದರೂ ಬಸ್ ನಿಲ್ಲಿಸುವುದಿಲ್ಲ: ಕೆಲವೊಮ್ಮೆ ಬಸ್ ಖಾಲಿ ಇದ್ದರೂ ನಮ್ಮನ್ನು ಕಂಡರೆ ಬಸ್‌ ನಿಲ್ಲಿಸದೆ ಹೋಗುತ್ತಾರೆ. ಇದರಿಂದಾಗಿ ನಾವು ಶಾಲೆ ತಲುಪುವಾಗ ತಡವಾಗುತ್ತದೆ. ಬಸ್ ಚಾಲಕರಿಗೆ ಬಸ್ ನಿಲ್ಲಿಸುವಂತೆ ಹೇಳಿ ಎಂದು ವಿದ್ಯಾರ್ಥಿಗಳು ಶಾಸಕರಲ್ಲಿ ಮನವಿ ಮಾಡಿದರು.

ನಿಲ್ಲಿಸದ ಬಸ್ ಯಾವುದು ಎಂದು ಬಸ್‌ನ ಸಂಖ್ಯೆ ನೀಡಿ. ಆ ಬಗ್ಗೆ ನಾನು ವಿಚಾರಿಸುತ್ತೇನೆ ಎಂದರು. ಎಲ್ಲಾ ಚಾಲಕರೂ ವಿದ್ಯಾರ್ಥಿಗಳನ್ನು ಕಂಡರೆ ಬಸ್ ನಿಲ್ಲಿಸುವಂತೆ ಸೂಚನೆ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT