ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ | ಲೈಸನ್ಸ್: ಅಲೆದಾಟ ತಪ್ಪಿಸಲು ಆನ್‌ಲೈನ್ ಸೇವೆ

Published 25 ಜನವರಿ 2024, 5:23 IST
Last Updated 25 ಜನವರಿ 2024, 5:23 IST
ಅಕ್ಷರ ಗಾತ್ರ

ಮಂಗಳೂರು: ಸೆಪ್ಟೆಂಬರ್‌ ತಿಂಗಳಿನಿಂದ ಸಾರಥಿ ಸೇವೆಯನ್ನು ಸಂಪೂರ್ಣ ಡಿಜಿಟಲ್ ಮಾಡಲಾಗಿದೆ. ಚಾಲನಾ ಪರವಾನಗಿ, ನವೀಕರಣಕ್ಕೆ ಸಂಬಂಧಿಸಿ ಸಾರ್ವಜನಿಕರು  ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಅಲೆದಾಡಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಸೇವೆ ಪಡೆದುಕೊಳ್ಳಬಹುದು (ಫೋಟೊ ತೆಗೆಯುವುದು ಮತ್ತು ಸಹಿ ಹಾಕುವುದನ್ನು ಹೊರತು ಪಡಿಸಿ)ಎಂದು ಮಂಗಳೂರಿನ ಹಿರಿಯ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ ಹೇಳಿದರು.

‘ಪ್ರಜಾವಾಣಿ’ ಪತ್ರಿಕಾ ಕಚೇರಿಯಲ್ಲಿ ಬುಧವಾರ ನಡೆದ ಫೋನ್‌– ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ಚಾಲನಾ ಪರವಾನಗಿಗೆ ಸಂಬಂಧಿಸಿ https://parivahan.gov.in ಇಲ್ಲಿ ನೋಂದಾಯಿಸಿಕೊಳ್ಳಬಹುದು. ಪ್ರಾದೇಶಿಕ ಸಾರಿಗೆ ಇಲಾಖೆಯು ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಸ್ಮಾರ್ಟ್‌ ಕಾರ್ಡ್ ನೇರವಾಗಿ ಅರ್ಜಿದಾರನ ಮನೆಗೆ ತಲುಪುತ್ತದೆ. ಇದಕ್ಕೆ ಸಂಬಂಧಿಸಿ ಅರ್ಜಿದಾರನ ಮೊಬೈಲ್ ಫೋನ್‌ಗೆ ಸಂದೇಶ ಬರುತ್ತದೆ. ಅದನ್ನು ಟ್ರ್ಯಾಕ್ ಕೂಡ ಮಾಡಬಹುದು ಎಂದರು.

ಲಾರಿ ಮತ್ತಿತರ ಭಾರೀ ವಾಹನ ಚಾಲನಾ ಪರವಾನಗಿ ನವೀಕರಿಸುವವರು ಮುಡಿಪುವಿನಲ್ಲಿರುವ ಭಾರೀ ವಾಹನಗಳ ಚಾಲನಾ ತರಬೇತಿ ಕೇಂದ್ರದಲ್ಲಿ (ಹೆವಿ ಡ್ರೈವಿಂಗ್ ಸ್ಕೂಲ್) ಒಂದು ದಿನದ ಪುನಶ್ಚೇತನ ತರಬೇತಿಯಲ್ಲಿ ಭಾಗವಹಿಸುವುದು ಕಡ್ಡಾಯ. ಶಿವಮೊಗ್ಗ ವಿಭಾಗದ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದವರು ಭಾರೀ ವಾಹನಗಳ ಚಾಲನಾ ಪರವಾನಗಿ ನವೀಕರಿಸುವ ಪೂರ್ವದಲ್ಲಿ ಮುಡಿಪು ತರಬೇತಿ ಕೇಂದ್ರಕ್ಕೆ ಬಂದು ತರಬೇತಿಯಲ್ಲಿ ಭಾಗವಹಿಸಬೇಕಾಗುತ್ತದೆ. ಇಲ್ಲಿ ಅವರಿಗೆ ತಜ್ಞರೊಂದಿಗೆ ಸಂವಾದದ ಜೊತೆಗೆ ಚಾಲನಾ ನಿಯಮಗಳು, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ, ತರಬೇತಿಯಲ್ಲಿ ಭಾಗವಹಿಸಿದ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರ ಇದ್ದಾಗ ಮಾತ್ರ ಅವರು ಸಂಬಂಧಿತ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲನಾ ಪರವಾನಗಿ ನವೀಕರಿಸಿಕೊಳ್ಳಲು ಅರ್ಹತೆ ಪಡೆಯುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧೆಡೆಗಳಿಂದ ಸಾರ್ವಜನಿಕರು ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಸಾರ್ವಜನಿಕರು ಕೇಳಿದ ಪ್ರಶ್ನೆ ಮತ್ತು ಆರ್‌ಟಿಒ ಅವರು ನೀಡಿದ ಉತ್ತರದ ಆಯ್ದ ಭಾಗ ಇಲ್ಲಿದೆ:

ಸಾರಿಗೆ ಅದಾಲತ್ ನಡೆಯುತ್ತಿಲ್ಲ. ಯಾವಾಗಿನಿಂದ ಪುನರಾರಂಭ ಮಾಡುತ್ತೀರಿ? –ಜಯಪ್ರಕಾಶ್ ಎಕ್ಕೂರು

ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿದವರು ಸರಿಯಾಗಿ ವಾಹನ ಚಾಲನೆ ಮಾಡದಿದ್ದರೂ, ಅವರಿಗೆ ಲೈಸೆನ್ಸ್ ಸಿಗುತ್ತದೆ ಎಂಬ ಆರೋಪ ಇದೆ. ನಾನು ಮಂಗಳೂರು ಕಚೇರಿಗೆ ಬಂದು ಒಂದೂವರೆ ತಿಂಗಳಾಯಿತು. ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದು, ಸದ್ಯದಲ್ಲಿ ಸಾರಿಗೆ ಅದಾಲತ್ ನಡೆಸಲಾಗುವುದು. ಮುಡಿಪುವಿನಲ್ಲಿ ಅಟೊಮೆಟೆಡ್ ಡ್ರೈವಿಂಗ್ ಟ್ರ್ಯಾಕ್ ಸಿದ್ಧವಾಗುತ್ತಿದೆ. ಇನ್ನು ಮುಂದೆ ಅಲ್ಲಿಯೇ ವಾಹನ ಚಾಲನೆ ಪರೀಕ್ಷೆ ನಡೆಯುತ್ತದೆ. ಸದ್ಯ ಅಲ್ಲಿ ಸೆನ್ಸರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಸಿಸಿಟಿವಿ ಕ್ಯಾಮೆರಾ ಕೂಡ ಇರುತ್ತದೆ. ಎಲ್ಲವೂ ಡಿಜಿಟಲ್ ಆಗುವುದರಿಂದ ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ.

ಸದಾನಂದ ಪೂಜಾರಿ ಪಡಂಗಡಿ ಚಾಲನಾ ಪರವಾನಗಿ ನವೀಕರಣದ ವೇಳೆ ಅಂಚೆ ವೆಚ್ಚವೆಂದು ₹60 ಪಡೆಯುತ್ತಾರೆ. ಆದರೆ, ಅಂಚೆ ಮೂಲಕ ಸ್ಮಾರ್ಟ್‌ ಕಾರ್ಡ್ ಸರಿಯಾಗಿ ಬರುತ್ತಿಲ್ಲ. ನಾವು ಕಚೇರಿಗೆ ಬಂದು ಕಾರ್ಡ್ ಪಡೆದುಕೊಳ್ಳುವ ಸಂದರ್ಭ ಬಂತು. –ಜಯಕೃಷ್ಣನ್ ಕೊಟ್ಟಾರಚೌಕಿ,

ತಾಂತ್ರಿಕ ಸಮಸ್ಯೆಯಿಂದ ಕೆಲದಿನ ತೊಡಕಾಗಿತ್ತು. ಈಗ ಸರಿಯಾಗಿದ್ದು, ಅಂಚೆ ಮೂಲಕವೇ ಕಾರ್ಡ್ ಮನೆಗೆ ತಲುಪುತ್ತದೆ.

ಖಾಸಗಿ ಬಸ್‌ಗಳು ಕೆಲವೊಮ್ಮೆ ದಿಢೀರ್‌ ಆಗಿ ನಿರ್ದಿಷ್ಟ ಮಾರ್ಗದಲ್ಲಿ ಸಂಚಾರ ರದ್ದುಗೊಳಿಸುತ್ತವೆ. ಇದರಿಂದ ಬಸ್‌ ಅನ್ನೇ ಅವಲಂಬಿಸಿ ನಿತ್ಯ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತದೆ. –ವೆಂಕಟರಮಣ ಪೂಣಚ್ಚ

– ಈ ಬಗ್ಗೆ ಪರಿಶೀಲಿಸಿ, ಕ್ರಮವಹಿಸಲಾಗುವುದು.

ಗ್ರಾಮೀಣ ಭಾಗದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ತೊಂದರೆಯಾಗುತ್ತಿದೆ. ನಂಬರ್‌ ಪ್ಲೇಟ್ ಅಳವಡಿಸಲು ವಾಹನಗಳನ್ನು ತೆಗೆದುಕೊಂಡು ಮಂಗಳೂರಿಗೆ ಬರಬೇಕಾಗುತ್ತದೆ. ನಮ್ಮ ವಿಳಾಸಕ್ಕೆ ನಂಬರ್ ಪ್ಲೇಟ್ ಅನ್ನು ಅಂಚೆ ಮೂಲಕ ಪಡೆಯುವ ಅವಕಾಶ ಇಲ್ಲದೆ ಸಮಸ್ಯೆಯಾಗುತ್ತಿದೆ. –ರಮೇಶ್ ಬೆಳ್ತಂಗಡಿ

–ಈ ಸಮಸ್ಯೆಯನ್ನು ಸಾರಿಗೆ ಆಯುಕ್ತರ ಗಮನಕ್ಕೆ ತಂದು ಪರಿಹರಿಸಲಾಗುವುದು.

ಚಾಲನಾ ಪರವಾನಗಿ ಕ್ಯಾಂಪ್ ಮಾಡಬಹುದೇ ?– ಅಬ್ದುಲ್ ತಯ್ಯೂಬ್ ಬೆಂಗ್ರೆ

– ಚಾಲನಾ ಪರವನಾಗಿ ಅಗತ್ಯ ಇದ್ದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್‌ಎಲ್‌ಆರ್‌ (ಕಲಿಕಾ ಪರವಾನಗಿ) ಅನ್ನು ಆನ್‌ಲೈನ್ ಮೂಲಕ ಪಡೆಯಬಹುದು. ಡಿಎಲ್‌ಗೆ (ಚಾಲನಾ ಪರವಾನಗಿ) ಸಹಿ ಹಾಕಲು, ಫೋಟೊ ತೆಗೆಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರಬೇಕಾಗುತ್ತದೆ.

ಆರ್‌ಟಿಒ ಕಚೇರಿಯಲ್ಲಿ ಏಜೆಂಟ್‌ಗಳ ಕಾಟ ಹೆಚ್ಚಾಗಿದೆ ಎನ್ನುವ ಆರೋಪ ಇದೆ. ಇದಕ್ಕೆ ಕ್ರಮವಹಿಸಬೇಕು. ಸಾಕಷ್ಟು ಸ್ಕ್ರ್ಯಾಪ್ ವಾಹನಗಳು ಇವೆ, ಯಾವ ರೀತಿಯ ಕ್ರಮ ಕೈಗೊಳ್ಳುತ್ತಿದ್ದೀರಿ?–ಜಿ.ಕೆ. ಭಟ್

– ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ 15 ವರ್ಷಕ್ಕೆ ಸ್ಕ್ರ್ಯಾಪ್ (ಗುಜರಿಗೆ) ಮಾಡಲಾಗುತ್ತದೆ. ಖಾಸಗಿ ವಾಹನಗಳಿಗೆ ಈ ನಿಮಯ ಇಲ್ಲ.

ಎಚ್ಎಸ್‌ಆರ್‌ಪಿ ಜನರಿಗೆ ದುಬಾರಿಯಾಗುತ್ತಿದೆ. ಅಲ್ಲದೆ, ಈಗಾಗಲೇ ಪೊಲೀಸರ ಬಳಿ ಇರುವ ಆ್ಯಪ್‌ನಲ್ಲಿ ವಾಹನ ನೋಂದಣಿ ಸಂಖ್ಯೆ ಹಾಕಿದರೆ, ಎಲ್ಲ ವಿವರಗಳು ಸಿಗುತ್ತವೆ. ಮತ್ತೆ ಈ ಹೊಸ ವ್ಯವಸ್ಥೆ ಯಾಕೆ ಬೇಕು?–ಶಶಿಧರ್ ಶೆಟ್ಟಿ

– ಎಚ್‌ಎಸ್‌ಆರ್‌ಪಿ, ಇದು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ವ್ಯವಸ್ಥೆ. https://transport.karnataka.gov.in/ ಅಥವಾ https://www.siam.in/ ಈ ವೆಬ್‌ಸೈಟ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದನ್ನು ಅಳವಡಿಸಿರುವ ವಾಹನಗಳ ನಂಬರ್ ಪ್ಲೇಟ್ ಮೇಲೆ ಲೇಸರ್ ಕೋಡ್ ಇರುತ್ತದೆ. ಇದು ಇಲಾಖೆಯ ವಾಹನ ಡಾಟಾ ಬೇಸ್ ಪೋರ್ಟಲ್‌ಗೆ ಲಿಂಕ್ ಆಗಿರುತ್ತದೆ. ವಾಹನದ ಕೋಡ್ ಸ್ಕ್ಯಾನ್ ಮಾಡಿದರೆ, ಎಲ್ಲ ವಿವರಗಳು ಸಿಗುತ್ತವೆ. ವಾಹನ ಸುರಕ್ಷತೆ ದೃಷ್ಟಿಯಿಂದ ಇದನ್ನು ಸರ್ಕಾರ ಜಾರಿಗೊಳಿಸಿದೆ.

ಬಂಟ್ವಾಳದ ಕೆಲವು ಭಾಗಗಳಿಗೆ ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲ. ಇಲ್ಲಿ ಬಸ್ ಸಂಚಾರ ತೀರಾ ಅಗತ್ಯ ಇದೆ.–ಉಮರ್ ಬಂಟ್ವಾಳ

– ಹೊಸ ಬಸ್‌ ಮಾರ್ಗಗಳಿಗೆ ಅನುಮತಿ (ಪರ್ಮಿಟ್‌) ನೀಡಲು ಅವಕಾಶ ಇಲ್ಲ. ನೀವು ಪ್ರಸ್ತಾಪಿಸಿರುವ ವಿಷಯವನ್ನು ಪರಿಶೀಲಿಸಲಾಗುವುದು.

ಖಾಸಗಿ ಬಸ್‌ನವರು ಪೂರ್ವಸೂಚನೆ ಇಲ್ಲದೆ ಟ್ರಿಪ್ ರದ್ದುಗೊಳಿಸುತ್ತಾರೆ. ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಒಂದೊಂದು ಬಸ್‌ನಲ್ಲಿ ಒಂದು ರೀತಿಯ ದರ ಇದೆ. ಟಿಕೆಟ್ ಸರಿಯಾಗಿ ಕೊಡುವುದಿಲ್ಲ. –ಜೆರಾಲ್ಡ್ ಟವರ್ಸ್

– ನೀವು ನೀಡಿರುವ ಮಾಹಿತಿಯನ್ನು ಆಧರಿಸಿ, ನಿರ್ದಿಷ್ಟ ಮಾರ್ಗದಲ್ಲಿ ಈ ರೀತಿ ಆಗುತ್ತಿದೆಯೇ ಎಂದು ಪರಿಶೀಲಿಸಿ, ಕ್ರಮ ವಹಿಸಲಾಗುವುದು.

ವಿಮೆ ನವೀಕರಣದ ವೇಳೆ ವಿಮಾ ಕಂಪನಿಯವರು ವಿಳಂಬ ಮಾಡುತ್ತಾರೆ. ಇದರ ಬಗ್ಗೆ ಕ್ರಮವಾಗಬೇಕು. ವಿಳಂಬವಾದರೆ ಕಂಪನಿಗೆ ದಂಡ ವಿಧಿಸಬೇಕು. –ಸುರೇಶ್ ಉಡುಪ

– ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

ಈ ಹಿಂದೆ ಸಾರಿಗೆ ಅದಾಲತ್ ನಡೆಯುತ್ತಿತ್ತು. ಈಗ ಯಾಕೆ ನಡೆಯುತ್ತಿಲ್ಲ?– ಅಶೋಕ್ ಭಟ್ ಮೂಲ್ಕಿ

– ಸಾರಿಗೆ ಅದಾಲತ್ ಅನ್ನು ಸದ್ಯದಲ್ಲಿ ಪ್ರಾರಂಭಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT