ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಹೆಸರು ಸೇರ್ಪಡೆಗೆ ಕೊನೆ ಕ್ಷಣದಲ್ಲಿ ಸಾವಿರಾರು ಅರ್ಜಿ

Published 10 ಮೇ 2024, 5:45 IST
Last Updated 10 ಮೇ 2024, 5:45 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಅಂತಿಮ ದಿನಾಂಕ ಮೇ 6ರಂದು ಕೊನೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು 3,234 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು 1,593 ಮಂದಿ ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಂತಿಮ ದಿನಾಂಕದವರೆಗೆ ಒಟ್ಟು 20,103 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 2023ರ ಡಿ 30ಕ್ಕೆ ಮುನ್ನ ಅರ್ಜಿ ಸಲ್ಲಿಸಿದ್ದ 16,869 ಮಂದಿಯ ಹೆಸರು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ. ಆ ನಂತರ 3,234 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಎಷ್ಟು ಅರ್ಜಿಗಳು ಸ್ವೀಕೃತಗೊಳ್ಳುತ್ತವೆ ಎಂಬುದರ ಆಧಾರದಲ್ಲಿ ಜಿಲ್ಲೆಯ ಮತದಾರರು ಎಷ್ಟು ಎಂಬುದು ತೀರ್ಮಾನವಾಗಲಿದೆ’ ಎನ್ನುತ್ತವೆ ಚುನಾವಣಾ ಆಯೋಗದ ಮೂಲಗಳು.

‘ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,346 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 2023ರ ಡಿ. 30ಕ್ಕೆ ಮುನ್ನ ಅರ್ಜಿ ಸಲ್ಲಿಸಿದ್ದ6,753 ಮಂದಿಯ ಹೆಸರು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ. ಆ ನಂತರ 1,593 ಮಂದಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಪದವೀಧರರ ಕ್ಷೇತ್ರದ ಮತದಾರರಾಗಲು ವಿಶ್ವವಿದ್ಯಾಲಯದಿಂದ ಪಡೆದ ಪದವಿ ಪ್ರಮಾಣಪತ್ರದ ಜೊತೆ ನಮೂನೆ 18ರಲ್ಲಿ ಅರ್ಜಿ ಸಲ್ಲಿಸಬೇಕು. ಶಿಕ್ಷಕರ ಕ್ಷೇತ್ರದ ಮತದಾರರಾಗಲು ಕಳೆದ ಆರು ವರ್ಷಗಳಲ್ಲಿ ಮೂರು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರಿಂದ ಪಡೆದ ಪ್ರಮಾಣಪತ್ರದ ಜೊತೆ ನಮೂನೆ 19ರಲ್ಲಿ ಸಲ್ಲಿಸಬೇಕು. ಆದರೆ ಕೆಲವರು ಪ್ರಮಾಣಪತ್ರವನ್ನು ಹಾಗೂ ಸೂಕ್ತ ದಾಖಲೆಗಳನ್ನು ಲಗತ್ತಿಸಿರುವುದಿಲ್ಲ. ಅಂತಹವರ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. 

ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಕ್ರಮಬದ್ಧವಾದ ಅರ್ಜಿಗಳಿಗೆ ಆಕ್ಷೇಪ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆ ಬಳಿಕವಷ್ಟೇ ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. 2018ರ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15,494 ಮಂದಿ ಮತದಾರರಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 7,140 ಮತದಾರರಿದ್ದರು. ಈ ಸಲ ಸಲ್ಲಿಕೆಯಾದ ಅರ್ಜಿಗಳಲ್ಲಿ ಯಾವುದೂ ತಿರಸ್ಕಾರಗೊಳ್ಳದೇ ಇದ್ದರೆ, ಈ ಸಲ ಎರಡೂ ಕ್ಷೇತ್ರಗಳಲ್ಲಿ ಜಿಲ್ಲೆಯ ಮತದಾರರ ಸಂಖ್ಯೆ ಜಾಸ್ತಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT