ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾನ ಮಾಡಿ; ಬದಲಾವಣೆಗೆ ಕೈಜೋಡಿಸಿ | ದ.ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಅಪಾರ್ಟ್‌ಮೆಂಟ್‌ನಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸಲಹೆ
Published 1 ಏಪ್ರಿಲ್ 2024, 5:37 IST
Last Updated 1 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ಮಂಗಳೂರು: ದೇಶದಲ್ಲಿ ಆಗಿರುವ ಅನೇಕ ಬದಲಾವಣೆಗಳಲ್ಲಿ ಸುಶಿಕ್ಷಿತರು, ನಗರವಾಸಿಗಳು ಮತ್ತು ಮಧ್ಯಮ ವರ್ಗದವರ ಪಾತ್ರ ಮಹತ್ವ‌ದ್ದಾಗಿದ್ದು ಮತದಾನದಲ್ಲಿ ಪಾಲ್ಗೊಂಡು ಬದಲಾವಣೆಗೆ ಕೈಜೋಡಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಲಹೆ ನೀಡಿದರು.

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ನಗರದ ಕೆನೊಪಿ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವವು ಅತ್ಯುತ್ತಮ ಆಡಳಿತ ವ್ಯವಸ್ಥೆ ಎಂದು ಹೇಳಲಾಗದು. ಆದರೆ ಸದ್ಯ ಇರುವುದರಲ್ಲಿ ಉತ್ತಮ ಪರ್ಯಾಯ ವ್ಯವಸ್ಥೆ ಇದಾಗಿದೆ ಎಂದರು.

ಮಾನವನ ಇತಿಹಾಸದಲ್ಲಿ ಹಲವು ಬಗೆಯ ಆಡಳಿತ ವ್ಯವಸ್ಥೆಯನ್ನು ಪ್ರಯೋಗ ಮಾಡಿನೋಡಿದ್ದು ಪ್ರಜಾಪ್ರಭುತ್ವ ಉತ್ತಮ ಮಾರ್ಗ ಎಂದು ತಿಳಿಯಲಾಗಿದೆ. ಈ ಆಡಳಿತ ವ್ಯವಸ್ಥೆಯ ಬಗ್ಗೆ ಜನರಿಗೆ ಅನೇಕ ಬಗೆಯ ದೂರುಗಳು ಇವೆ. ಉತ್ತಮಪಡಿಸಲು ಸಲಹೆಗಳು ಕೂಡ ಬರುತ್ತಿವೆ. ಜನಬಲದ ಮೂಲಕ ಅದನ್ನು ಸಾಧಿಸಬಹುದಾಗಿದೆ ಎಂದು ಅವರು ಹೇಳಿದರು.

ಮತದಾನದ ಹಕ್ಕು ಹಂತಹಂತವಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಬೆಳೆದು ಬಂದಿದ್ದು ಎಲ್ಲರಿಗೂ ಈ ಹಕ್ಕು ನೀಡಿದಾಗ ಅನೇಕ ಸಂದೇಹಗಳು ಇದ್ದವು. ಆದರೂ ಅದು ಯಶಸ್ಸು ಕಂಡಿದೆ. ಈಗ ಶಾಂತಿಯುತ, ಪ್ರಜಾಪ್ರಭುತ್ವ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿದೆ. ಬೇರೆ ದೇಶಗಳಲ್ಲಿ ಈ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳು ಇವೆ ಎಂದ ಅವರು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಕಡಿಮೆ ಮತದಾನ ಆಗುತ್ತದೆ. ರಾಜ್ಯಕ್ಕೆ ಅತಿಹೆಚ್ಚು ಆದಾಯ ನೀಡುವ ಬೆಂಗಳೂರಿಗರು ಆ ಹಣವನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವ ಯೋಜನೆಗಳನ್ನು ಜಾರಿಗೆ ತರುವ ವ್ಯವಸ್ಥೆಯಲ್ಲಿ ಪಾಲುದಾರರಾಗುವುದಿಲ್ಲ ಎಂಬುದು ಬೇಸರದ ವಿಷಯ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಮಾತನಾಡಿ ಚುಣಾವಣೆಗೆ ಸಂಬಂಧಪಟ್ಟು ಅನೇಕ ಆ್ಯಪ್‌ಗಳು ಇದ್ದು ಅವುಗಳನ್ನು ಬಳಸಿಕೊಂಡು ಮತದಾನದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಮತದಾನದ ಪ್ರಮಾಣ ಹೆಚ್ಚಿಸಲು ಎಲ್ಲರೂ ನೆರವಾಗಬೇಕು ಎಂದರು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ಹಾಗೂ ಉಪ ಆಯುಕ್ತ ಗಿರೀಶ್ ನಂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT