ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಮಳಲಿ ಮಸೀದಿ ವಿವಾದ: ವಕ್ಫ್ ಮಂಡಳಿಯಿಂದಲೂ ಕಾನೂನು ಹೋರಾಟ– ನಾಸಿರ್‌

Published 3 ಫೆಬ್ರುವರಿ 2024, 12:29 IST
Last Updated 3 ಫೆಬ್ರುವರಿ 2024, 12:29 IST
ಅಕ್ಷರ ಗಾತ್ರ

ಮಂಗಳೂರು: ‘ತಾಲ್ಲೂಕಿನ ಮಳಲಿ ಜುಮ್ಮಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಿಂದ ದೂರ ಉಳಿದಿದ್ದ ವಕ್ಫ್‌ ಮಂಡಳಿ ಇನ್ನು ತನ್ನನ್ನೂ ಕಕ್ಷಿದಾರರೆಂದು ಪರಿಗಣಿಸುವಂತೆ ಅರ್ಜಿ ಸಲ್ಲಿಸಲಿದೆ. ಈ ಕುರಿತ ಕಾನೂನು ಹೋರಾಟದಲ್ಲಿ ಸೇರಿಕೊಳ್ಳಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್‌ ನಾಸಿರ್‌ ಲಕ್ಕಿಸ್ಟಾರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಮಸೀದಿ ವಕ್ಫ್‌ ಆಸ್ತಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ ಎಂಬುದಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ವಕ್ಫ್‌ ಮಂಡಳಿ ಆಸ್ತಿ ಎಂಬ ಬಗ್ಗೆ ಯಾ ಗೊಂದಲವೂ ಇಲ್ಲ. ಇದು ವಕ್ಫ್‌ ಆಸ್ತಿ ಆಗಿರುವುದರಿಂದ ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ವಕ್ಫ್ ಕಾಯ್ದೆ ಪ್ರಕಾರ ನ್ಯಾಯಾಲಯದ ಬದಲು ವಕ್ಫ್‌ ನ್ಯಾಯಮಂಡಳಿಯಲ್ಲೇ ವಿಚಾರಣೆ ನಡೆಸಬೇಕು ಎಂಬುದು ಮಸೀದಿಯ ಆಡಳಿತ ಮಂಡಳಿಯವರ ಬೇಡಿಕೆಯಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲೇ ವ್ಯಾಜ್ಯ ವಿಚಾರಣೆ ನಡೆಯಲಿ ಎಂದು ಜ.31ಕ್ಕೆ ಹೈಕೋರ್ಟ್‌ ಹೇಳಿದೆ ಅಷ್ಟೇ. ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ಈ ಪ್ರಕರಣ ವಿಚಾರಣೆಯೇ ಆರಂಭವಾಗಿಲ್ಲ’ ಎಂದರು.

‘ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆಗೆ ಸಿದ್ಧ ಇದ್ದೇವೆ. ಇದು ಇಂದು ನಿನ್ನೆ ನಿರ್ಮಾಣವಾದ ಮಸೀದಿಯಲ್ಲ. ಪಹಣಿ ಪತ್ರ ಪದ್ಧತಿ ಜಾರಿಯಾಗುವುದಕ್ಕಿಂತಲೂ ಮುಂಚೆ ಇದ್ದ ‘ಅಡಂಗಲ್‌’ ಎಂಬ ಕಂದಾಯ ದಾಖಲೆಗಳಲ್ಲೇ ಈ ಮಸೀದಿಯ ಉಲ್ಲೇಖ ಇದೆ. ಸಂಶೋಧಕ ದಿ.ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ ‘ವಿದೇಶಿ ಪ್ರವಾಸಿ ಕಂಡ ಅಬ್ಬಕ್ಕ’ ಕೃತಿಯಲ್ಲೂ ಈ ಮಸೀದಿಯ ಕುರಿತ ಉಲ್ಲೇಖ ಇದೆ. ಈ ಮಸೀದಿಗೆ ರಾಜರ ಕಾಲದಿಂದಲೂ ತಸ್ತೀಕ್‌, ಎಣ್ಣೆ, ಆಣೆ, ಪೈಸೆ, ರೂಪಾಯಿ ಸಂದಾಯವಾಗುತ್ತಿದ್ದ ಬಗ್ಗೆಯೂ ನಮ್ಮಲ್ಲಿ ದಾಖಲೆಗಳಿವೆ’ ಎಂದರು.

‘ಸರ್ಕಾರದ ಕಂದಾಯ ಇಲಾಖೆ ಅಧಿಕಾರಿಗಳೇ 2004ರಲ್ಲಿ ಈ ಸರ್ವೇ ನಡೆಸಿದ್ದರು. ಅದರಲ್ಲೂ ಇದು ಮಸೀದಿಗೆ ಸೇರಿದ ಜಾಗ ಎಂದು ಉಲ್ಲೇಖಿಸಿದ್ದಾರೆ. 2014ರಲ್ಲಿ ಮಸೀದಿಯನ್ನು ವಕ್ಫ್‌ ಮಂಡಳಿ ವ್ಯಾಪ್ತಿಗೆ ತರುವ ಪ್ರಕ್ರಿಯೆ ಆರಂಭವಾಗಿತ್ತು. 2016ರಲ್ಲೇ ಈ ಕುರಿತು ಗಜೆಟ್‌ ಅಧಿಸೂಚನೆ ಪ್ರಕಟವಾಗಿದೆ. ಒಂದು ಸಲ ವಕ್ಫ್‌ ಮಂಡಳಿ ಹೆಸರಿನಲ್ಲಿ ನೋಂದಣಿಯಾದ ಆಸ್ತಿಯ ಸದಾ ವಕ್ಫ್‌ ಆಸ್ತಿಯಾಗಿರುತ್ತದೆ’ ಎಂದರು.

‘ಮಳಲಿಯ ಈ ಮಸೀದಿಯಲ್ಲಿ ನಮಾಜ್‌ ನಡೆಸಲು ಜಾಗ ಸಾಕಾಗುತ್ತಿರಲಿಲ್ಲ. ದೊಡ್ಡ ಮಸೀದಿ ನಿರ್ಮಿಸಲು ಹಳೆ ಮಸೀದಿಯನ್ನು 2022 ನ.9ರಂದು ಕೆಡವಿದ್ದೆವು. ಅಲ್ಲಿದ್ದ ಕಾಷ್ಟಶಿಲ್ಪವನ್ನು ನೋಡಿದ ಹೊರಗಿನವರು ಅಲ್ಲಿ ದೇವಸ್ಥಾನ ಇತ್ತೆಂದು ನ್ಯಾಯಾಲಯದಲ್ಲಿ ವಿನಾಕಾರಣ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹಿಂದೆ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಅನೇಕ ಮಸೀದಿಗಳಲ್ಲಿ ಇಲ್ಲಿನ ಸಾಂಪ್ರದಾಯಿಕ ಶೈಲಿಯ ಕಾಷ್ಟಶಿಲ್ಪಗಳಿವೆ. ಇದರಲ್ಲೇನೂ ವಿಶೇಷ ಇಲ್ಲ’ ಎಂದರು.

‘ಮಸೀದಿ ಆಡಳಿತ ಮಂಡಳಿಯು ಊರಿನವರ ಜೊತೆ ಸೌಹಾರ್ದ ಸಂಬಂಧ ಹೊಂದಿದೆ. ಇಲ್ಲಿನ ಮಸೀದಿಯನ್ನು ಕೆಡಹುವುದಕ್ಕೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ಇದೆ. ಆದರೆ ಇಲ್ಲಿ ನಮಾಜ್ ನಡೆಸುವುದಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ. ನಮಾಜ್‌ ಎಂದಿನಂತೆ ಮುಂದುವರಿಯುತ್ತಿದೆ. ’ ಎಂದರು.

‘ಗಲಭೆ ಸೃಷ್ಟಿಸಲು ಹೊರಗಿನವರು ಸಂಚು ರೂಪಿಸಿದ್ದಾರೆ. ಇದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ. ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ಇದು ಮಸೀದಿ ಎಂಬುದಕ್ಕೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ಕಾನೂನು ಹೋರಾಟದಲ್ಲಿ ಅಂತಿಮವಾಗಿ ನಮಗೇ ಜಯ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‌ಮಳಲಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಉಪಾಧ್ಯಕ್ಷ ಎಂ.ಎ ಅಬೂಬಕರ್ ಜಿಲ್ಲಾ ವಕ್ಫ್‌ ಅಧಿಕಾರಿ ಅಬೂಬಕರ್‌, ವಕ್ಫ್‌ ಸಲಹಾ ಸಮಿತಿ ಉಪಾಧ್ಯಕ್ಷ ಎ.ಕೆ.ಜಮಾಲ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT