ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಗೆ ಕುಟುಂಬದಷ್ಟೇ ಮುಖ್ಯ ಆರೋಗ್ಯ

ಮಹಿಳೆಯರ ಆರೋಗ್ಯಪೂರ್ಣ ಬದುಕಿಗೆ ವೈದ್ಯರ ಸಲಹೆ
Last Updated 7 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಮಂಗಳೂರು: ಕುಟುಂಬ ನಿರ್ವಹಣೆ, ದೈನಂದಿನ ಜಂಜಾಟಗಳು, ವೃತ್ತಿ ಒತ್ತಡದ ನಡುವೆ ಮಹಿಳೆ ಸ್ವ ಆರೋಗ್ಯದ ಕಾಳಜಿಯನ್ನು ನಿರ್ಲಕ್ಷಿಸುತ್ತಾಳೆ. ಬದುಕಿನ ಹಲವಾರು ಹಂತಗಳನ್ನು ದಾಟುತ್ತಲೇ ಎದುರಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಆಕೆಯ ಆಂತರ್ಯವನ್ನು ಘಾಸಿಗೊಳಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮಹಿಳೆಯರು ಕುಟುಂಬದಷ್ಟೇ ಮಹತ್ವವನ್ನು ತಮ್ಮ ಆರೋಗ್ಯಕ್ಕೂ ನೀಡಬೇಕು ಎನ್ನುತ್ತಾರೆ ವೈದ್ಯರು.

ಇಲ್ಲಿನ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸಮೀನಾ, ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ. ಪ್ರೌಢಾವಸ್ಥೆ, ಸಂತಾನೋತ್ಪತ್ತಿಯ ಹಂತ ಮತ್ತು ಋತುಬಂಧ ಇಂತಹ ಪರಿವರ್ತನೆಯ ಸಂದರ್ಭಗಳಲ್ಲಿ ಆಕೆಯ ದೇಹ ಹಲವಾರು ರೀತಿಯಲ್ಲಿ ಹಾನಿಗೊಳಗಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

ಗರ್ಭಾವಸ್ಥೆಗೆ ಸಂಬಂಧಿಸಿದ ಸಂಕೀರ್ಣ ತೊಂದರೆಗಳು: ಪದೇ ಪದೇ ಸೋಂಕುಗಳಿಗೆ ತುತ್ತಾಗುವ ಮಹಿಳೆಯರಲ್ಲಿ ಎಕ್ಟೋಪಿಕ್ ಗರ್ಭಾವಸ್ಥೆ (ಗರ್ಭಾಶಯದ ಹೊರಗೆ ಅಂಡಾಣು ಫಲಿಸುವುದು) ಕಂಡುಬರುತ್ತದೆ. ಶೀಘ್ರವಾಗಿ ಚಿಕಿತ್ಸೆ ನೀಡದಿದ್ದರೆ ಇದು ಜೀವಕ್ಕೆ ಅಪಾಯ ತರಬಹುದು.

ಗರ್ಭಾವಸ್ಥೆಯಲ್ಲಿ ಪೋಷಕಾಂಶ ಕೊರತೆ: ಇದು ತಾಯಂದಿರಲ್ಲಿ ರಕ್ತಹೀನತೆಗೆ ದಾರಿಯಾಗಬಹುದು. ಗರ್ಭಾಶಯದ ಒಳಗಿನ ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಉಂಟು ಮಾಡಬಹುದು. ಉತ್ತಮ ಪೋಷಕಾಂಶ ಸೇವಿಸುವುದು ಮತ್ತು ಸಾಕಷ್ಟು ವಿಶ್ರಾಂತಿಯನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ತೆಗೆದುಕೊಳ್ಳುವುದು ಮುಖ್ಯವಾಗಿದೆ.

ಗರ್ಭಾವಸ್ಥೆಯ ಅವಧಿಯಲ್ಲಿ ಚಯಾಪಚಯದ ತೊಂದರೆಗಳು: ಈ ತೊಂದರೆ ಸಾಮಾನ್ಯವಾಗಿ ಕಂಡುಬರುತ್ತದೆ. ತಾಯಿಯಾಗುವವರ ವಯಸ್ಸು ಹೆಚ್ಚಾಗಿರುವುದು (35 ವರ್ಷಗಳ ನಂತರ) ಮತ್ತು ಒತ್ತಡದ ಜೀವನ ಶೈಲಿ ಇದಕ್ಕೆ ಮುಖ್ಯ ಕಾರಣ. ಉದ್ಯೋಗಿಯಾಗಿರುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಹೆರಿಗೆ ಸಂಬಂಧಿತ ಆರೋಗ್ಯ ತೊಂದರೆಗಳು: ಪ್ರಸವ ನಂತರದ ರಕ್ತಸ್ರಾವವು (ಮಗುವಿನ ಹೆರಿಗೆ ಆದ ತಕ್ಷಣ ಹೆಚ್ಚಾಗುವ ರಕ್ತಸ್ರಾವ) ಜೀವಕ್ಕೆ ಅಪಾಯವೊಡ್ಡುವ ಸಂಕೀರ್ಣ ತೊಂದರೆಯಾಗಿದೆ. ಉತ್ತಮ ಆರೈಕೆ ನೀಡುವ ಆಸ್ಪತ್ರೆಗಳಲ್ಲಿ ತಕ್ಷಣವೇ ಚಿಕಿತ್ಸೆ ನೀಡಬೇಕು.

ಸೊಂಟದ ಭಾಗದ ಸೋಂಕು: ಯೋನಿಯಲ್ಲಿ ಬಿಳಿ ಸೆರಗಿನ ಸ್ರಾವ ಹೆಚ್ಚಾಗಿರುವ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಮೂತ್ರ ಮಾರ್ಗದ ಸೋಂಕು ಅಥವಾ ಸೊಂಟದ ಭಾಗದಲ್ಲಿ ಉರಿಯೂತದ ರೋಗಕ್ಕೆ ದಾರಿಯಾಗಬಹುದು. ವೈಯಕ್ತಿಕ ನೈರ್ಮಲ್ಯ ಉಳಿಸಿಕೊಳ್ಳುವುದು ಮುಖ್ಯ.

ಗರ್ಭಾಶಯ ಮತ್ತು ಅಂಡಾಶಯದಲ್ಲಿನ ಗಡ್ಡೆಗಳು: ಫೈಬ್ರಾಯ್ಡ್, ಗರ್ಭಾಶಯ ಮತ್ತು ಕೆಲವು ಮಹಿಳೆಯರಲ್ಲಿ ಕ್ಯಾನ್ಸರೇತರ ಅಂಡಾಶಯದ ಚೀಲಗಳ ತೊಂದರೆ ಇದಾಗಿದೆ. ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಅಥವಾ ಹೆಚ್ಚು ನೋವು ಕಂಡುಬರುತ್ತದೆ. ಇದಕ್ಕೆ ಅಗತ್ಯವಿದ್ದಲ್ಲಿ ಶಸ್ತ್ರಕ್ರಿಯೆ ಅವಶ್ಯಕವಿರುತ್ತದೆ.

ಋತುಬಂಧದ ನಂತರದ ಲಕ್ಷಣಗಳು: ಋತುಸ್ರಾವ ನಿಲ್ಲುವಂತಹ ಕೊನೆಯ ವರ್ಷಗಳಲ್ಲಿ ಸಾಮಾನ್ಯವಾಗಿ ಹಾಟ್‍ಫ್ಲಾಷ್‍ಗಳು (ಮುಖ, ಕುತ್ತಿಗೆ ಮತ್ತು ದೇಹದ ಮೇಲ್ಭಾಗ ಬಿಸಿಯಾಗುವುದು), ದೇಹದ ನೋವು, ನಿದ್ರೆಯ ಕೊರತೆ ಮತ್ತು ಕಿರಿಕಿರಿಗಳು ಕಂಡುಬರುತ್ತವೆ. ರೋಗಿಗಳಿಗೆ ವೈದ್ಯಕೀಯ ಸಲಹೆ ಮತ್ತು ಬೆಂಬಲ ನೀಡುವಂತಹ ಚಿಕಿತ್ಸೆಯನ್ನು ಕೊಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT