ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಿಪು | ಯಕ್ಷಗಾನ ಕಾಲಮಿತಿಯಿಂದ ಪರಂಪರೆಗೆ ಧಕ್ಕೆ: ಚೆನ್ನಪ್ಪ ಗೌಡ

Published 14 ಮೇ 2024, 15:41 IST
Last Updated 14 ಮೇ 2024, 15:41 IST
ಅಕ್ಷರ ಗಾತ್ರ

ಮುಡಿಪು: ‘ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನದಲ್ಲಿ ಪಾತ್ರಗಳನ್ನು ಸಾವಧಾನವಾಗಿ, ಭಾವಪ್ರಧಾನವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತಿತ್ತು. ಪ್ರಸಂಗದ ನಡೆಯನ್ನು ಕ್ರಮಬದ್ಧವಾಗಿ ನಿರೂಪಿಸಲು ಸಾಧ್ಯವಾಗುತ್ತಿತ್ತು. ಕಾಲಮಿತಿಯ ಪ್ರದರ್ಶನದಲ್ಲಿ ಪಾತ್ರಗಳು ಬಂದಷ್ಟೇ ವೇಗದಲ್ಲಿ ನಿರ್ಗಮಿಸುತ್ತವೆ. ಹಾಗಾಗಿ ಯಕ್ಷಗಾನದ ಮೂಲ ಸೌಂದರ್ಯ ಮತ್ತು ಪರಂಪರೆಗೆ ಧಕ್ಕೆಯಾಗುತ್ತಿದೆ’ ಎಂದು ಯಕ್ಷಗಾನ ಕಲಾವಿದ ಚೆನ್ನಪ್ಪ ಗೌಡ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ‌‌ ಸರಣಿ 4 ಕಾರ್ಯಕ್ರಮದಲ್ಲಿ ಯಕ್ಷಪಯಣದ ಅನುಭವವನ್ನು ಅವರು ಹಂಚಿಕೊಂಡರು.

‘ಅಂದಿನ ರಂಗಸ್ಥಳವೆಂದರೆ ಅಡಿಕೆ ಮರದ ಕಂಬ, ಅದರ ಮೇಲೆ ಹಾಸಿದ ಮಡಲು, ಆಚೀಚೆ ಎರಡು ದೊಂದಿ ಅಥವಾ ಗ್ಯಾಸ್‌ಲೈಟ್‌ ತೂಗು ಹಾಕಲಾಗುತ್ತಿತ್ತು. ಆದರೆ, ಆ ಕಾಲದ ಕಲಾವಿದರಿಗೆ ಕುಣಿತದಲ್ಲಿ ಉದಾಸೀನ ಇರಲಿಲ್ಲ. ನಾವೆಲ್ಲ ಹಿರಿಯರ ಕುಣಿತ, ವೇಷವನ್ನು ನೋಡಿಯೇ ಕಲಿತದ್ದು. ಪ್ರತ್ಯೇಕ ಯಕ್ಷ ಶಿಕ್ಷಣ ಇರಲಿಲ್ಲ. ಪ್ರೇಕ್ಷಕರೂ ಕೋಡಂಗಿ ವೇಷ ಬರುವಾಗಲೇ ಇರುತ್ತಿದ್ದರು. ಆಟ ಪೂರ್ತಿ ಮುಗಿದೇ ಹೊರಡುತ್ತಿದ್ದರು. ಮರುದಿನ ನಾನು ಮತ್ತು ಪೆರುವಡಿ ನಾರಾಯಣ ಭಟ್ಟರು ನಡೆದುಕೊಂಡು ಹೋಗುತ್ತಿದ್ದರೆ ಗೂಡಂಗಡಿಯವರು ಕೂಡ ಕರೆದು ನಿನ್ನೆಯ ಪಾಪಣ್ಣ ಮತ್ತು ಗುಣಸುಂದರಿ ನಿಮ್ಮಿಬ್ಬರದು ಅದ್ಭುತ ಎನ್ನುತ್ತಿದ್ದರು. ಈಗ ಕಲಾವಿದ– ಪ್ರೇಕ್ಷಕರ ನಡುವೆ ಈ ಬಾಂಧವ್ಯ ಎಲ್ಲಿದೆ?’ ಎಂದರು.

‘ದೇವಿ ಮಹಾತ್ಮೆಯಲ್ಲಿ ರಕ್ತಬೀಜಾಸುರ ಹೊರತುಪಡಿಸಿ ಎಲ್ಲಾ ಪಾತ್ರಗಳನ್ನೂ ಮಾಡಿದ್ದೇನೆ. ಆದರೆ, ಹೆಚ್ಚು ಮಾಡಿದ್ದು ಸ್ತ್ರಿ ವೇಷವನ್ನೆ. ಪಾತಾಳರು ನನಗೆ ಪ್ರೇರಣೆ, ಮಾದರಿ. ಕುಟ್ಯಪ್ಪು, ಚಂದ್ರಗಿರಿ ಅಂಬು, ಶೇಣಿ, ಹೊಸಹಿತ್ಲು, ಬಣ್ಣದ ಮಾಲಿಂಗರಂಥ ಪ್ರತಿಭಾವಂತ ಕಲಾವಿದರ ಜತೆಗೆ ವೇಷ ಮಾಡಿದ್ದೇನೆಂಬ ಸಂತೋಷ ನನ್ನದು. ಕುರಿಯ ವಿಠಲ ಶಾಸ್ತ್ರಿ, ಅಗರಿ, ಬಲಿಪ ಭಾಗವತರ ನಿಷ್ಠೆ, ಯಕ್ಷಗಾನದ ಪ್ರೀತಿ ನಮಗೆ ಆದರ್ಶ’ ಎಂದರು.

ಯಕ್ಷಗಾನ ಅಧ್ಯಯನ ಕೇಂದ್ರದ‌ ನಿರ್ದೇಶಕ ಧನಂಜಯ ಕುಂಬ್ಳೆ ಮಾತನಾಡಿ, 94 ವರ್ಷದ ಚೆನ್ನಪ್ಪ ಗೌಡರದ್ದು ಏಳು ದಶಕಗಳ ಯಕ್ಷಗಾನ ಸೇವೆ. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಅಪಾರ. ಮೂಲತಃ ಕನ್ಯಾನದವರಾದ ಅವರು 14ನೇ ವಯಸ್ಸಿನಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿ ಕೂಡ್ಲು, ಧರ್ಮಸ್ಥಳ, ಮೂಲ್ಕಿ, ಕೊಲ್ಲೂರು, ಬಪ್ಪನಾಡು, ನಂದಾವರ, ಅರುವ, ಪೇಜಾವರ, ಇಡಗುಂಜಿ, ಕಟೀಲು ಮೇಳಗಳಲ್ಲಿ ಕಲಾವಿದರಾಗಿ, ಆಯಾ ಮೇಳಗಳಲ್ಲಿ ಪ್ರಧಾನ ವೇಷಧಾರಿಯಾಗಿದ್ದವರು. ಅವರ ಗುಣಸುಂದರಿ, ದೇವಿ, ದಾಕ್ಷಾಯಿನಿ, ದ್ರೌಪದಿ, ದೇಯಿ, ಕಿನ್ನಿದಾರು ಮೊದಲಾದ ಪಾತ್ರಗಳು ಜನಪ್ರಿಯವಾದವು. ಚೆನ್ನಪ್ಪ ಗೌಡರು ಹೆಚ್ಚು ಪ್ರಸಿದ್ಧಿಗೆ ಬಾರದ ಯಕ್ಷಗಾನದ ಅಪ್ಪಟ ಪ್ರತಿಭೆ ಎಂದು ಹೇಳಿದರು.

ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಚೆನ್ನಪ್ಪ ಗೌಡ ಅವರನ್ನು ಅಭಿನಂದಿಸಲಾಯಿತು.

ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಸತೀಶ್ ಕೊಣಾಜೆ, ಸಿಬ್ಬಂದಿ‌ ಸ್ವಾತಿ ರಾವ್, ಯಕ್ಷಮಂಗಳ ವಿದ್ಯಾರ್ಥಿ ಅಭಿರಾಮ್, ಯಕ್ಷಗಾನ ಕಲಾವಿದರಾದ ಅಶ್ವಥ್ ಮಂಜನಾಡಿ, ವಿವಿಧ ಪೀಠಗಳ ಸಂಶೋಧನಾ ಸಹಾಯಕರಾದ‌ ಯತೀಶ್, ದಿಲೀಪ್, ಪ್ರಸಾದ್, ಸಿಬ್ಬಂದಿ ಸರಿತಾ, ಪ್ರಸಾದ್, ಕಿರಣ್ ಭಾಗವಹಿಸಿದ್ದರು. ಕನ್ನಡ ಅಧ್ಯಯನ ವಿಭಾಗದ ಚಂದ್ರಶೇಖರ್ ಎಂ.ಬಿ.ಅವರು ದಾಖಲೀಕರಣದಲ್ಲಿ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT