ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ 17 ಬಿಲಿಯನ್ ಹೂಡಿಕೆ ನಿರೀಕ್ಷೆ: ರಂಗಸ್ವಾಮಿ

4.50 ಲಕ್ಷ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಲು ಅವಕಾಶ: ಬಿ.ಇ. ರಂಗಸ್ವಾಮಿ
Published 20 ಮೇ 2024, 13:59 IST
Last Updated 20 ಮೇ 2024, 13:59 IST
ಅಕ್ಷರ ಗಾತ್ರ

ದಾವಣಗೆರೆ: ‘ಕೃತಕ ಬುದ್ಧಿಮತ್ತೆಯು ಈಗ ಬಹು ಚರ್ಚಿತ ವಿಷಯವಾಗಿದ್ದು, ಇದರ ಕ್ರಾಂತಿಯನ್ನು ಆಲಕ್ಷಿಸುವಂತಿಲ್ಲ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ದೊಡ್ಡ ಮೊತ್ತದ ಹೂಡಿಕೆಯ ಮಾಡಲು ಮುಂಚೂಣಿಯಲ್ಲಿದ್ದು, ಭಾರತದಲ್ಲಿ 2027ರ ವೇಳೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸುಮಾರು 17 ಬಿಲಿಯನ್ (₹17,000 ಕೋಟಿ) ಹೂಡಿಕೆಯಾಗುವ ಯೋಜನೆ ಇದೆ’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಬಿ.ಇ. ರಂಗಸ್ವಾಮಿ ಹೇಳಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್ ಹೈಟೆಕ್ ಎಜುಕೇಷನ್ ವಾಣಿಜ್ಯ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ‘ಪ್ರಜ್ಞಾ’ 'ಕೃತಕ ಬುದ್ಧಿಮತ್ತೆ ಉದ್ಭವ ಹಾಗೂ ಅವಕಾಶಗಳ ರೂಪಾಂತರ' ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘1956ರಲ್ಲೇ ಕೆಲ ವಿಜ್ಞಾನಿಗಳು ಸಭೆ ಸೇರಿ ಯಂತ್ರಗಳೇ ಮಾನವ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಕೃತಕ ಬುದ್ಧಿಮತ್ತೆಯ ಅನ್ವೇಷಣೆ ಬಗ್ಗೆ ಚರ್ಚಿಸಿದ್ದರು. ಇದು ಈಗ ಅನುಷ್ಠಾನಕ್ಕೆ ಬರುತ್ತಿದ್ದು, ಇದರಿಂದಾಗಿ ಮಾನವ ಉದ್ಯೋಗಗಳಿಗೆ ಸಂಚಕಾರ ಬರುತ್ತದೆ ಎಂಬ ಆತಂಕವಿದ್ದರೂ ಇದನ್ನೇ ಬಳಸಿ ಹೊಸ ಆವಿಷ್ಕಾರದ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶವಿದೆ. ಭವಿಷ್ಯದಲ್ಲಿ ನಮ್ಮ ದೇಶದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ಕಾರ್ಯನಿರ್ವಹಿಸಬಹುದಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ವಿಶ್ವದಲ್ಲಿ ಕೃತಕ ಬುದ್ಧಿಮತ್ತೆ ಕುರಿತು 41 ಲಕ್ಷ ಪ್ರಕಟಣೆಗಳು ಹೊರಬಂದಿದ್ದರೆ, ಅವುಗಳಲ್ಲಿ ಭಾರತದಲ್ಲೇ ಸುಮಾರು 13 ಲಕ್ಷ ಪ್ರಕಟಣೆಗಳು ಬಂದಿವೆ. ಕೈಗಾರಿಕೆ, ಕೃಷಿ ಅಲ್ಲದೇ ಅಡುಗೆ ಮನೆಯೊಳಗೂ ಕೃತಕ ಬುದ್ಧಿಮತ್ತೆಯ ಉಪಯೋಗ ಬರುವ ಕಾಲ ಸನ್ನಿಹಿತವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಈಗಾಗಲೇ ಇದರ ಬಳಕೆಯಾಗುತ್ತಿದೆ. ಪ್ರಪಂಚದ 33 ದೇಶಗಳ ಸುಮಾರು 13 ಲಕ್ಷ ರೋಗಿಗಳು ಬೆಂಗಳೂರು, ಚೆನ್ನೈನಂತಹ ನಗರಗಳ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಸಹಾಯದಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದಾರೆ’ ಎಂದರು.

‘ಮುಂದಿನ ವರ್ಷದ ವೇಳೆಗೆ ಕೃತಕ ಬುದ್ಧಿಮತ್ತೆ ಶಿಕ್ಷಣದಲ್ಲೂ ಪ್ರಧಾನ ವಿಷಯವಾಗಬಹುದು. ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಕೃತಕ ಬುದ್ಧಿಮತ್ತೆಯ ಕ್ಷೇತ್ರದ ತಜ್ಞ ಎಂಜಿನಿಯರ್‌ಗಳ ಸಂಖ್ಯೆ ಕಡಿಮೆ ಇದ್ದು, ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಅಲ್ಲದೇ ಸಾಮಾನ್ಯ ಪದವಿಯಲ್ಲೂ ಕೃತಕ ಬುದ್ಧಿಮತ್ತೆಯ ಶಿಕ್ಷಣದ ಅಗತ್ಯವಿದೆ’ ಎಂದು ಕಾಲೇಜಿನ ಛೇರ್ಮನ್ ಅಥಣಿ ಎಸ್.ವೀರಣ್ಣ ಹೇಳಿದರು.

‘ವಾಣಿಜ್ಯೋದ್ಯಮ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಅವಕಾಶಗಳ ಕುರಿತು ಕಾಲೇಜಿನ ನಿರ್ದೇಶಕ ಸ್ವಾಮಿ ತ್ರಿಭುವಾನಂದ ಎಚ್.ವಿ. ಅವರು ತಿಳಿಸಿದರು.

ಪ್ರಾಂಶುಪಾಲ ಬಿ. ವೀರಪ್ಪ ಮಾತನಾಡಿ, ‘ಗಣಿತದಲ್ಲೂ ಉತ್ತಮ ತಿಳಿವಳಿಕೆ ಇದ್ದಲ್ಲಿ ಮಾತ್ರ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಸಾಧ್ಯ ಎಂದರು.

ವಿದ್ಯಾರ್ಥಿಗಳು 50ಕ್ಕೂ ಹೆಚ್ಚು ಪ್ರಬಂಧಗಳನ್ನು ವಿದ್ಯಾರ್ಥಿಗಳು ಮಂಡಿಸಿದರು. ಮಂಜುನಾಥ್ ಬಿ.ಬಿ., ಶ್ವೇತಾ ಬಿ.ವಿ., ಲತಾ ಒ.ಎಚ್, ನಾಗರಾಜ ಎಂ.ಎಸ್., ಜ್ಞಾನೇಶ್ವರ ಸುಳಕೆ, ಕಾಂಚನಾ ಟಿ.ಎಸ್., ನಿಶಾರಾಣಿ ಡಿ.ಪಿ., ಮಂಜುಳಾ ಎ.ಎನ್., ನರೇಂದ್ರ ಡಿ.ಆರ್. ವಿಚಾರ ಸಂಕಿರಣದ ಸಹಯೋಜಕರಾಗಿದ್ದರು.

ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ವಿಭಾಗದ ಶಿವಶಂಕರನಾಯಕ್ ಆಧುನಿಕ ನೀರಾವರಿ ವಿಧಾನ ಬಗ್ಗೆ, ಸ್ತ್ರೀಶಕ್ತಿ ಸಂಘದ ಸುಜಾತ ಅವರಗೊಳ್ಳ ಅವರು ಕೃಷಿ ತೋಟಗಾರಿಕೆಯಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ರೋಬೋಟ್ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ರೋಬೋಟ್ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT