ದಾವಣಗೆರೆ: ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದಕ್ಕೂ ಮುನ್ನವೇ ಮದುವೆ ಮಾಡಲು ಮುಂದಾಗಿದ್ದ ಪಾಲಕರ ಪ್ರಯತ್ನವನ್ನು ವಿಫಲಗೊಳಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದು ವರ್ಷದ ಅವಧಿಯಲ್ಲಿ 68 ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ.

2024ರ ಏಪ್ರಿಲ್ನಿಂದ 2025ರ ಮಾರ್ಚ್ ಅಂತ್ಯದವರೆಗೆ ಮಕ್ಕಳ ಸಹಾಯವಾಣಿಗೆ ಬಂದ ದೂರುಗಳ ಆಧಾರದ ಮೇರೆಗೆ ಘಟಕವು ಕಾರ್ಯಪ್ರವೃತ್ತವಾಗಿ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಈ ಪ್ರಯತ್ನವನ್ನು ಮೀರಿ ನಡೆದ 7 ಬಾಲ್ಯವಿವಾಹಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲ್ಯವಿವಾಹ ಮಾಡಿದ ಬಳಿಕ ಸಿಕ್ಕ ಮಾಹಿತಿ ಆಧರಿಸಿ ಪರಿಶೀಲಿಸಿದ ಅಧಿಕಾರಿಗಳು, ಹುಡುಗಿಯ ಪಾಲಕರು, ವರ ಹಾಗೂ ಆತನ ಪಾಲಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮದುವೆಗೆ ಆಹ್ವಾನ ಪತ್ರಿಕೆ ಸಿದ್ಧಪಡಿಸಿ, ಛತ್ರವನ್ನು ಕಾಯ್ದಿರಿಸಿದ್ದ 2 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಹುಡುಗಿಯ 18 ವರ್ಷ ತುಂಬುವ ಮುನ್ನ ವಿವಾಹ ಮಾಡಿದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

2030ರ ವೇಳೆಗೆ ದೇಶವನ್ನು ‘ಬಾಲ್ಯವಿವಾಹ ಮುಕ್ತ’ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರ, ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ. ಈ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದ್ದು, ಮಕ್ಕಳ ಸಹಾಯವಾಣಿ 1098ಗೆ ಹೆಚ್ಚು ದೂರುಗಳು ಬರುತ್ತಿವೆ. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿಯರೇ ಹೆಚ್ಚಾಗಿ ಬಾಲ್ಯವಿವಾಹದ ಪಿಡುಗಿಗೆ ಸಿಲುಕುತ್ತಿದ್ದಾರೆ.

‘ತಂದೆ ಅಥವಾ ತಾಯಿಯ ಪೈಕಿ ಒಬ್ಬರೊಂದಿಗೆ (ಏಕ ಪಾಲಕ) ಬೆಳೆಯುತ್ತಿರುವ ಬಾಲಕಿಯರ ಮೇಲೆ ಬಾಲ್ಯವಿವಾಹದ ಒತ್ತಡ ಹೆಚ್ಚಾಗಿದೆ. ಇಂತಹ ಬಾಲಕಿಯರಿಗೆ ಆಶ್ರಯ ಕಲ್ಪಿಸಿದ ಸಂಬಂಧಿಕರು, ಜವಾಬ್ದಾರಿ ಕಳೆದುಕೊಳ್ಳುವ ಧಾವಂತದಲ್ಲಿ ಬಾಲ್ಯವಿವಾಹ ಮಾಡುತ್ತಿದ್ದಾರೆ. ಬಡತನ ಮತ್ತು ಅರಿವಿನ ಕೊರತೆಯ ಕಾರಣಕ್ಕೂ ಕೆಲ ಪಾಲಕರು ಬಾಲ್ಯವಿವಾಹಕ್ಕೆ ಮುಂದಾಗಿದ್ದು ಗಮನಕ್ಕೆ ಬಂದಿದೆ. ಬಾಲ್ಯದಲ್ಲೇ ಅರಳುವ ಪ್ರೇಮ ಪ್ರಕರಣಗಳೂ ವಯೋಮಿತಿಯೊಳಗಿನ ವಿವಾಹಕ್ಕೆ ಕಾರಣವಾಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ತಿಳಿಸಿದ್ದಾರೆ.

ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿಯೇ ಬಾಲ್ಯವಿವಾಹಗಳನ್ನು ಹೆಚ್ಚು ತಡೆಯಲಾಗಿದೆ. ಈ ಎರಡೂ ತಾಲ್ಲೂಕುಗಳು ಭೌಗೋಳಿಕವಾಗಿ ದೊಡ್ಡವಿದ್ದು, ಹೆಚ್ಚು ಜನಸಂಖ್ಯೆ ಹೊಂದಿವೆ. ಜನರಲ್ಲಿ ಈ ಸಂಬಂಧ ಅರಿವು ಇರುವುದೂ ಇದಕ್ಕೆ ಕಾರಣ. ಶಿಶು ಅಭಿವೃದ್ಧಿ ಅಧಿಕಾರಿ (ಸಿಡಿಪಿಒ) ಹಾಗೂ ಮಕ್ಕಳ ಕಲ್ಯಾಣ ಸಮಿತಿ ತ್ವರಿತವಾಗಿ ಸ್ಪಂದಿಸಿರುವ ಸಾಧ್ಯತೆಯೂ ತಡೆಗೆ ಕಾರಣ. ಬಾಲ್ಯವಿವಾಹ ತಡೆ ಕ್ರಮವು ಕಡಿಮೆ ದಾಖಲಾಗಿರುವ ತಾಲ್ಲೂಕುಗಳಲ್ಲಿ ಅರಿವಿನ ಕೊರತೆ ಇರುವ ಅನುಮಾನ ವ್ಯಕ್ತವಾಗಿದೆ.

‘18 ವರ್ಷ ತುಂಬುವುದಕ್ಕೂ ಮುನ್ನ ವಿವಾಹವಾದ ಬಾಲಕಿಯರು ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ಸಿಲುಕುತ್ತಾರೆ. ಕೌಟುಂಬಿಕ ಹೊರೆಯನ್ನು ತಾಳಲಾರದೇ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಖಿನ್ನತೆಗೆ ಜಾರುವ ಅಪಾಯವೂ ಇದೆ. ವಿವಾಹಕ್ಕೂ ಮುನ್ನ ಪಾಲಕರು ಆಲೋಚಿಸಬೇಕು. ಬಾಲ್ಯವಿವಾಹದ ಕುರಿತು ಪ್ರತಿಯೊಬ್ಬರೂ ಸಹಾಯವಾಣಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡುತ್ತಾರೆ ಕವಿತಾ.

ಬಾಲ್ಯವಿವಾಹ ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ

-ಟಿ.ಎನ್.ಕವಿತಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.