ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ವೇಳೆ ಕುಸಿದು ಬಿದ್ದ ವೈದ್ಯಕೀಯ ವಿದ್ಯಾರ್ಥಿನಿ

ಪ್ರತಿಭಟನೆ ವಾಪಸ್ ‍ಪಡೆಯದಿದ್ದರೆ ಬಂಧಿಸುವ ಬೆದರಿಕೆ
Last Updated 30 ಜೂನ್ 2020, 8:45 IST
ಅಕ್ಷರ ಗಾತ್ರ

ದಾವಣಗೆರೆ: ಹದಿನಾರು ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆಗೆ ಒತ್ತಾಯಿಸಿ ನಗರದ ಜೆ.ಜೆ.ಎಂ.ಎಂ.ಸಿ ಜೂನಿಯರ್‌ ಡಾಕ್ಟರ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬರು ಕುಸಿದುಬಿದ್ದರು.

ಇಲ್ಲಿನ ಜಯದೇವ ವೃತ್ತದಲ್ಲಿ ಸೋಮವಾರದಿಂದಲೇ ಪ್ರತಿಭಟನೆ ಆರಂಭಿಸಿದ್ದ ವಿದ್ಯಾರ್ಥಿಗಳು, ಮಂಗಳವಾರವೂ ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದರು. ಆ ವೇಳೆ ವಿದ್ಯಾರ್ಥಿನಿ ಪೂಜಾ ಕಾಮತ್ ತಲೆಸುತ್ತು ಬಂದು ಬಿದ್ದರು. ತಕ್ಷಣ ಅಲ್ಲಿದ್ದ ವಿದ್ಯಾರ್ಥಿಗಳು ನೀರು ಕುಡಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ನಾಗರಾಜು, ಡಿಎಚ್ಒ ಡಾ. ರಾಘವೇಂದ್ರಸ್ವಾಮಿ, ತಹಶೀಲ್ಧಾರ್ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೂ ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆ ವಾಪಸ್ ಪಡೆಯದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ಬಂಧನದ ಭೀತಿಯಲ್ಲಿದ್ದಾರೆ.

‘16 ತಿಂಗಳಿನಿಂದ ಶಿಷ್ಯವೇತನ ಬಂದಿಲ್ಲ. ಮಧ್ಯಮವರ್ಗದ ಕುಟುಂಬದಿಂದ ನಮಗೆ ಕಾಲೇಜಿಗೆ ಶುಲ್ಕ, ಪುಸ್ತಕಗಳನ್ನು ಕೊಳ್ಳಲು ಹಣವಿಲ್ಲದೇ ತೊಂದರೆಯಾಗಿದೆ. ಸರ್ಕಾರಿ ಖೋಟಾದಡಿ ಪ್ರವೇಶ ಶುಲ್ಕ ಕಡಿಮೆ ಪಡೆಯುವುದರಿಂದ ಶಿಷ್ಯ ವೇತನವನ್ನು ನೀಡಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಕೇಳಲು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ನಿಮ್ಮ ಸಮಸ್ಯೆ ಬಗೆಹರಿಸುವ ಸಂಬಂಧ ಮುಖ್ಯಮಂತ್ರಿಗೆ ಈಗಾಗಲೇ ಭೇಟಿ ಮಾಡಿಸಿದ್ದೇನೆ. ಆಸ್ಪತ್ರೆಯ ಆಡಳಿತ ಮಂಡಳಿಯವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸಂಸದರು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಜಿಲ್ಲಾಡಳಿತ ನಿಮ್ಮ ಜೊತೆಯಲ್ಲಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ‘ವಿಳಂಬವಾದರೂ ಶಿಷ್ಯವೇತನ ಬಂದೇ ಬರುತ್ತದೆ. ನಿಮ್ಮ ಪ್ರತಿಭಟನೆಯಿಂದ ಸಾಮಾನ್ಯ ಜನರಿಗೆ ತಪ್ಪು ಸಂದೇಶ ಹೋಗಬಾರದು. ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಮಣಿಯದ ವಿದ್ಯಾರ್ಥಿಗಳು ಲಿಖಿತವಾಗಿ ಕೊಡಿ ಎಂದು ಪಟ್ಟುಹಿಡಿದರು. ಮಧ್ಯಪ್ರವೇಶಿಸಿದ ಎಸ್‌ಪಿ ಹನುಮಂತರಾಯ ಪ್ರತಿಭಟನೆ ವಾಪಸ್ ಪಡೆಯದಿದ್ದರೆ ಕಾನೂನು ಜಾರಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಆದರೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT