ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಬಾಗಿಲು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ

ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದ ನಳಿನ್ ಕುಮಾರ್ ಕಟೀಲ್ ವ್ಯಂಗ್ಯ
Last Updated 28 ಜನವರಿ 2023, 6:22 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ವಲಸಿಗರಾಗಿರುವ ಸಿದ್ದರಾಮಯ್ಯ ಅವರಿಗೆ ಬಿಜೆಪಿಗೆ ಬಂದಿರುವ ವಲಸಿಗರ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಆರ್‌ಎಂಸಿ ಲಿಂಕ್ ರಸ್ತೆ ಬಳಿ ಬೂತ್ ವಿಜಯ ಅಭಿಯಾನಕ್ಕೆ ಮತದಾರರ ಮನೆಗೆ ಸ್ಟಿಕ್ಕರ್ ಅಂಟಿಸುವ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಡಿಎಸ್ ಅನ್ನು ಮುಗಿಸಿ ಎಚ್‌.ಡಿ. ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಸಿದ್ದರಾಮಯ್ಯ ಇನ್ನೊಬ್ಬರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ಜೆಡಿಎಸ್‌ ಬಳಿಕ ಈಗ ಕಾಂಗ್ರೆಸ್ ಅನ್ನು ಮುಗಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದವರ ಬಗ್ಗೆ ಪ್ರತಿಕ್ರಿಯೆ ನೀಡಿದ ಕಟೀಲು, ‘ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಏನು ಕಡಿಮೆ ಮಾಡಿದ್ದೇವೆ. ಅವರ ಜೊತೆ ನಾವು ಇದ್ದೇವೆ. ಕಾಂಗ್ರೆಸ್‌ನಿಂದ ಪಕ್ಷದಿಂದ ಯಾರ‍್ಯಾರು ಬಿಜೆಪಿಗೆ ಬರಲಿದ್ದಾರೆ ಎಂದು ಸ್ಪಲ್ಪ ದಿನ ಕಾದು ನೋಡಿ. ಕಾಂಗ್ರೆಸ್ ಮನೆ ಖಾಲಿ ಆಗಲಿದ್ದು, ಬಾಗಿಲು ಮುಚ್ಚಿಕೊಂಡು ಹೋಗಲಿದೆ’ ಎಂದು ವ್ಯಂಗ್ಯವಾಡಿದರು.

‘ದಲಿತ ಮುಖ್ಯಮಂತ್ರಿ ಚರ್ಚೆ ಹುಟ್ಟುಹಾಕಿದ್ದು ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ ಅವರನ್ನು ಸೋಲಿಸಿ ದಲಿತರಿಗೆ ಮುಖ್ಯಮಂತ್ರಿ ಸಿಗದಂತೆ ಮಟ್ಟ ಹಾಕಿದ್ದು ಅವರೇ’ ಎಂದು ಪ್ರಶ್ನೆಯೊಂದಕ್ಕೆ ಕುಟುಕಿದರು.

ಚುನಾವಣೆಯಲ್ಲಿ ಬಿಜೆಪಿ ಸೀಮಿತ ಮೀರಿ ಹಣ ವ್ಯಯಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿ ಕಟೀಲು, ‘ಅದು ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿಯದ್ದಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಚುನಾವಣೆ ವೆಚ್ಚ ನೋಡಿ ನಮಗೆ ಹಾಗೆ ಹೇಳಿರಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್.ಜಗದೀಶ್, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮುಖಂಡರಾದ ಜೇಷ್ಠ ಪಡಿವಾಳ್, ಕೆ.ಶಿವಲಿಂಗಪ್ಪ, ಯಶವಂತರಾವ್ ಜಾಧವ್, ಸುಧಾಜಯರುದ್ರೇಶ್, ಎಸ್.ಟಿ. ವೀರೇಶ್, ಬಿ.ಜಿ.ಅಜಯ್‍ಕುಮಾರ್, ಬಿ.ಎಂ. ಸತೀಶ್, ದೇವರಮನೆ ಶಿವಕುಮಾರ್, ರಮೇಶ್‍ನಾಯ್ಕ, ಎಚ್.ಪಿ.ವಿಶ್ವಾಸ್, ಎಸ್.ಎಲ್. ಆನಂದಪ್ಪ, ಆನಂದರಾವ್ ಶಿಂಧೆ, ಎಲ್. ಶಿವಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ಕಿಶೋರ್‌ಕುಮಾರ್, ವಿಜಯ್‍ಕುಮಾರ್, ರಾಕೇಶ್, ರಾಜು ನೀಲಗುಂದ, ಸಂಗನಗೌಡ್ರು, ಕೆ.ಎನ್. ಹನುಮಂತಪ್ಪ, ಬಿ.ಟಿ.ಸಿದ್ದಪ್ಪ, ಶ್ಯಾಮ್ ಇದ್ದರು.

‘ಫೆ.5ರವರೆಗೆ ವಿಜಯ ಸಂಕಲ್ಪ ಅಭಿಯಾನ’

‘ರಾಜ್ಯದಲ್ಲಿ ಫೆ. 5ರವರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದ್ದು, ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತ ಕರಪತ್ರ ಹಂಚಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆ ಮನೆ ಮನೆಗಳಿಗೆ ತೆರಳಿ ಬಿಜೆಪಿಯೇ ಭರವಸೆ ಸ್ಟಿಕ್ಕರ್ ಅಂಟಿಸುವ ಜತೆ ಗೋಡೆ ಬರಹ ಬರೆಯುವ ಅಭಿಯಾನ ನಡೆಸುತ್ತಿದ್ದೇವೆ’ ಎಂದು ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಬೂತ್ ವಿಜಯ ಅಭಿಯಾನವೂ ಅಭೂತಪೂರ್ವ ಯಶಸ್ಸು ಕಂಡಿದ್ದು, 20 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾಕುವ ಕಾರ್ಯಕ್ರಮ ನಡೆಸಲಾಗಿದೆ. ಅಲ್ಲದೇ 42 ಸಾವಿರ ಕಡೆಗಳಲ್ಲಿ ಪೇಜ್ ಬೂತ್ ಸಮಿತಿಗಳನ್ನು ಮಾಡಲಾಗಿದೆ’ ಎಂದು ಹೇಳಿದರು.

ಕೋಟ್..

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಟ್ಟಾಗಿ ಎದುರಿಸಲಿದ್ದೇವೆ.
ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT