ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗಲಿದೆ ದಾವಣಗೆರೆ ರಂಗಕರ್ಮಿಗಳ ಕನಸು

Published 9 ಮಾರ್ಚ್ 2024, 5:21 IST
Last Updated 9 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ದಾವಣಗೆರೆ: ವೃತ್ತಿ ರಂಗಭೂಮಿಯ ತವರೂರು ಎಂದೇ ಹೆಸರಾಗಿರುವ ದಾವಣಗೆರೆಯಲ್ಲಿ ರಂಗಮಂದಿರ ತಲೆ ಎತ್ತಿದೆ. ಇದರ ಜೊತೆಗೆ ಥೀಮ್ ಪಾರ್ಕ್‌ನ ಸೊಬಗನ್ನು ಸವಿಯುವ ಕಾಲ ಬಂದಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ ₹ 5.23 ಕೋಟಿ ವೆಚ್ಚದಲ್ಲಿ ನಗರದ ದೃಶ್ಯಕಲಾ ಕಾಲೇಜಿನ ಒಂದೂವರೆ ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಭವ್ಯವಾದ ಬಯಲು ರಂಗಮಂದಿರ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್ ಅವರು ಮಾರ್ಚ್ 9ರಂದು ಉದ್ಘಾಟಿಸಲಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಪ್ರೊ.ಎಸ್.ವಿ. ಹಲಸೆ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಆಗಿನ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್ ಸೇರಿ ಅನೇಕ ಚಿಂತಕರು ಈ ಥೀಮ್‌ ಪಾರ್ಕ್‌ನ ರೂಪುರೇಷೆ ಸಿದ್ಧಪಡಿಸಿದ್ದು, ಶಿಗ್ಗಾಂವ್‌ನ ರಾಜಹರ್ಷ ಸೊಲಬ್ಬಕ್ಕನವರ್ ತಂಡದ ಶಿಲ್ಪಕಲಾವಿದರ ಕೈಚಳಕ ಇದೆ.

ಗಮನ ಸೆಳೆಯುವ ಥೀಮ್ ಪಾರ್ಕ್: ಥೀಮ್ ಪಾರ್ಕ್‌ನ ಸಿಮೆಂಟ್ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿವೆ. ಇಲ್ಲಿರುವ ಮರಗಳನ್ನು ಉಳಿಸಿಕೊಂಡೇ ಯೋಜನೆ ರೂಪಿಸಲಾಗಿದೆ. ಸ್ಥಳೀಯ ಕಲೆಗಳು, ಸಂಸ್ಕೃತಿ ಹಾಗೂ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲಾಕೃತಿಗಳು ಇಲ್ಲಿವೆ. ಗೋಲಿ, ಚಿನ್ನಿದಾಂಡು, ಕುಂಟೆಬಿಲ್ಲೆ, ಹಗ್ಗ ಜಗ್ಗಾಟ, ಕುಸ್ತಿ, ಟಗರು, ಕೋಳಿ ಕಾಳಗ ಗಮನ ಸೆಳೆಯುತ್ತವೆ.

ದುಗ್ಗಮ್ಮನ (ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ) ಜಾತ್ರೆಯ ಇಡೀ ಚಿತ್ರಣ ಥೀಮ್‌ ಪಾರ್ಕ್‌ನಲ್ಲಿ ಮೈದಳೆದಿದೆ. ಅಲ್ಲದೇ, ದಾವಣಗೆರೆ ಎಂದರೆ ಕುಸ್ತಿಯ ತವರೂರು. ಅದನ್ನು ಬಿಂಬಿಸುವ ಗರಡಿ ಮನೆಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.

ದಾವಣಗೆರೆಯು ಜಾನುವಾರು ಸಂತೆಗೂ ಪ್ರಸಿದ್ಧಿ ಪಡೆದಿದೆ. ಸಂತೆಯ ಪ್ರತಿ ಹಂತದ ಚಿತ್ರಣವನ್ನು ಅತ್ಯದ್ಭುತವಾಗಿ ಕಟ್ಟಿಕೊಡಲಾಗಿದೆ. ದೇಶಿ– ವಿದೇಶಿ ತಳಿಯ ಹಸು– ರಾಸುಗಳ ಸಾಲು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಅಕ್ಷರಶಃ ಜಾನುವಾರು ಸಂತೆಯಲ್ಲಿ ಹೇಗೆ ವ್ಯಾಪಾರ– ವಹಿವಾಟು ನಡೆಯುತ್ತದೆ ಎಂಬುದನ್ನು ಕಟ್ಟಿಕೊಡುವ ನಿಟ್ಟಿನಲ್ಲಿಸಂತೆಯ ಅನಾವರಣವೂ ಆಗಿದೆ. ಮಕ್ಕಳ ಹುಲಿಕುಣಿತ, ತಮಟೆ, ಗೊಂದಲಿಗರು, ಲಂಬಾಣಿ ನೃತ್ಯ, ಜೋಗತಿ ಎಲ್ಲಮ್ಮ, ಜಾನಪದ ಹಾಡುಗಾರರು ಎಲ್ಲವನ್ನೂ ಚಿತ್ರಿಸಲಾಗಿದೆ.

ಬಯಲು ರಂಗಮಂದಿರ ವಿಶೇಷ

ರಂಗ ನಾಟಕಗಳಿಗೆ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. * ಪ್ರೇಕ್ಷಕರು ಕುಳಿತುಕೊಳ್ಳಲು 600 ಆಸನಗಳ ವ್ಯವಸ್ಥೆ * ಮೇಕಪ್ ಕೊಠಡಿ ದಾಸ್ತಾನು ಕೊಠಡಿ ವಿಶ್ರಾಂತಿ ಸ್ಥಳ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಪಾದಚಾರಿ ಮಾರ್ಗ ಮತ್ತು ಶೌಚಾಲಯಗಳ ವ್ಯವಸ್ಥೆ * ವಿಐಪಿ ಲಾಂಜ್ ದಾಸ್ತಾನು ಕೊಠಡಿ ಟಿಕೆಟ್ ಕೌಂಟರ್ ₹25000 ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಿಸಲಾಗಿದೆ.

ಸೊಗಸಾಗಿ ಮೂಡಿಬಂದಿದೆ

‘ಬಯಲು ರಂಗಮಂದಿರ ಥೀಮ್ ಪಾರ್ಕ್ ಸೊಗಸಾಗಿ ಮೂಡಿ ಬಂದಿವೆ. ನೋಡಲು ಖುಷಿ ಆಗುತ್ತದೆ. 2018ರ ಮುನ್ನ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಬಜೆಟ್‌ನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಗೆ ₹3.5 ಕೋಟಿ ತೆಗೆದಿರಿಸಲಾಗಿತ್ತು. ಇದು ನಂತರದಲ್ಲಿ ₹ 6 ಕೋಟಿ ಆಗಿತ್ತು. ಆ ಹಣದಲ್ಲಿ ಅಂದಿನ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ರವೀಂದ್ರ ಮಲ್ಲಾಪುರ ಅವರ ಮನವೊಲಿಸಿ ಇಂಥದ್ದೊಂದು ದೃಶ್ಯಕಾವ್ಯ ನಿರ್ಮಾಣಕ್ಕೆ ಒಪ್ಪಿಸಲಾಯಿತು. ಅಲ್ಲದೆ ಇದಕ್ಕಾಗಿ ದಿವಂಗತ ಸೊಲಬಕ್ಕನವರ್ ಮಾರ್ಗದರ್ಶನದಲ್ಲಿ ರಾಜ್ಯ–ಹೊರರಾಜ್ಯಗಳ ಥೀಮ್ ಪಾರ್ಕ್ ಬಯಲು ರಂಗಮಂದಿರಗಳ ಅಧ್ಯಯನ ಮಾಡಿಬಂದೆವು. ಈ ಯೋಜನೆಗೆ ಅಂದಿನ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಹಲಸೆ ಹಾಗೂ ಸಿಂಡಿಕೇಟ್ ಸದಸ್ಯರು ಆಸಕ್ತಿಯಿಂದ ಕೈಜೋಡಿಸಿದರು. ಕಲಾ ಕಾಲೇಜು ಅಧ್ಯಾಪಕ ವರ್ಗ ಆಸಕ್ತಿ ವಹಿಸಿದ್ದನ್ನು ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಆಡಳಿತ ನನ್ನನ್ನು ಮತ್ತು ಅಂದಿನ ಸಿಂಡಿಕೇಟ್ ಸದಸ್ಯ ಜಯಪ್ರಕಾಶ್ ಕೊಂಡಜ್ಜಿ ಅವರನ್ನು ಯೋಜನೆ ವಿನ್ಯಾಸ ಸಹಾಯಕರನ್ನಾಗಿ ಬಳಸಿಕೊಂಡಿತ್ತು’ ಎಂದು ರಂಗಕರ್ಮಿ ಬಾ.ಮ. ಬಸವರಾಜಯ್ಯ ತಿಳಿಸಿದರು.

ಸಂತೆ ಜಾತ್ರೆಗಳು ಹೇಗಿರುತ್ತದೆ ಎಂಬುದನ್ನು ಯುವ ಪೀಳಿಗೆಗೆ ತಿಳಿಸುವುದಕ್ಕೇ ಈ ಥೀಮ್ ಪಾರ್ಕ್‌ ಅಣಿಗೊಳಿಸಲಾಗಿದೆ. ಇದನ್ನೊಂದು ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶವಿದೆ.
ಪ್ರೊ.ಬಿ.ಡಿ.ಕುಂಬಾರ್, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ
₹5.23 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಹಾಗೂ ರಂಗಮಂದಿರ ನಿರ್ಮಿಸಿದ್ದು ನಿರ್ವಹಣೆಗಾಗಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು.
ವೀರೇಶ್ ಕುಮಾರ್, ಸ್ಮಾರ್ಟ್ ಸಿಟಿ ಎಂ.ಡಿ
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಥೀಮ್ ಪಾರ್ಕ್‌ನ ಒಳಾಂಗಣದ ದೃಶ್ಯಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಥೀಮ್ ಪಾರ್ಕ್‌ನ ಒಳಾಂಗಣದ ದೃಶ್ಯಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ರಂಗಮಂದಿರ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ರಂಗಮಂದಿರ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT