ಶುಕ್ರವಾರ, ಜನವರಿ 27, 2023
27 °C
ಜೆ.ಎಚ್‌. ಪಟೇಲ್‌ ಬಡಾವಣೆ: ಕೆಎಸ್‌ಸಿಎ ಮೈದಾನ

ಪ್ರಥಮದರ್ಜೆ ಕ್ರಿಕೆಟ್‌ಗೆ ತಯಾರಾಗುತ್ತಿದೆ ಸುಸಜ್ಜಿತ ಅಂಕಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ ರಣಜಿ ಸೇರಿದಂತೆ ಎಲ್ಲ ರೀತಿಯ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಿಗೆ ದಾವಣಗೆರೆ ಇನ್ನುಮುಂದೆ ಆತಿಥ್ಯ ವಹಿಸಲಿದೆ. ಅದಕ್ಕೆ ಅಗತ್ಯವಿರುವ ತಯಾರಿಗಳು ಇಲ್ಲಿನ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ನಡೆಯುತ್ತಿವೆ.

ನಗರವೂ ಸೇರಿದಂತೆ ಜಿಲ್ಲೆಯ ಕ್ರಿಕೆಟ್‌ ಪ್ರೇಮಿಗಳು ಹಾಗೂ ಯುವ ಆಟಗಾರರು ಬಹು ವರ್ಷಗಳಿಂದ ಕಂಡಿದ್ದ ಸುಸಜ್ಜಿತ ಕ್ರಿಕೆಟ್‌ ಮೈದಾನದ ಕನಸು ನನಸಾಗುವ ದಿನಗಳು ಸಮೀಪಿಸಿವೆ.

ಐದು ವರ್ಷಗಳ ಹಿಂದೆ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ)ದ ಅಧ್ಯಕ್ಷರಾಗಿದ್ದ ರಾಮಚಂದ್ರಪ್ಪ, ಆಯುಕ್ತ ಆದಪ್ಪ ಅವರ ಸಹಕಾರದೊಂದಿಗೆ ಕ್ರಿಕೆಟ್‌ಗಾಗಿ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ 8 ಎಕರೆ 31 ಗುಂಟೆ ಜಮೀನು ಮಂಜೂರು ಮಾಡಿಸಿದ್ದರು. ಅಲ್ಲೇ ಈಗ ಮೈದಾನ ತಲೆ ಎತ್ತುತ್ತಿದೆ.

ಕೆಎಸ್‌ಸಿಎ ಕಾರ್ಯದರ್ಶಿ, ಐಪಿಎಲ್‌ ಮಾಜಿ ಚೇರ್‌ಮನ್‌ ಬ್ರಿಜೇಶ್‌ ಪಟೇಲ್ ಅವರು ರಾಜ್ಯದ ವಿವಿಧೆಡೆ ಪ್ರಥಮದರ್ಜೆ ಟರ್ಫ್‌ ಮೈದಾನದ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಅದರಂತೆ ಕೆಎಸ್‌ಸಿಎ ದಾವಣಗೆರೆಯ ಮೈದಾನವನ್ನು ₹ 1 ಕೋಟಿ ವೆಚ್ಚದಲ್ಲಿ  ಅಭಿವೃದ್ಧಿಪಡಿಸಲು ಮುಂದಾಗಿದೆ.

‘ಸಮೀಕ್ಷೆ ಕಾರ್ಯ ನಡೆದು, ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 8 ತಿಂಗಳು ಬೇಕು. ಮಧ್ಯೆ ಮಳೆಗಾಲ ಬರುವುದರಿಂದ ಆ ಸಮಯದಲ್ಲಿ ಕಾಮಗಾರಿ ನಿಧಾನಗೊಳ್ಳುತ್ತದೆ. 2023ರ ಅಂತ್ಯಕ್ಕೆ ಮೈದಾನ ಸಂಪೂರ್ಣ ಸಿದ್ಧವಾಗಲಿದೆ’ ಎಂದು ಕೆಎಸ್‌ಸಿಎ ತುಮಕೂರು ವಲಯ ಸಂಚಾಲಕ ಕೆ.ಶಶಿಧರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈಗ ಸಾಮಾನ್ಯ ಮೈದಾನ ಇದೆ. ಕಾಂಪೌಂಡ್‌ ನಿರ್ಮಿಸಲಾಗಿದೆ. ಪೆವಿಲಿಯನ್‌ ನಿರ್ಮಾಣ ಆಗಬೇಕಿದ್ದು, ಮಾರ್ಚ್‌ ಒಳಗೆ ಮುಗಿಸಬಹುದು. ಟರ್ಫ್‌ ಪಿಚ್‌ ಸಿದ್ಧಪಡಿಸುವಿಕೆ, ಮೈದಾನದಲ್ಲಿ ಹುಲ್ಲು ಹಾಸು ಅಳವಡಿಸುವ ಕೆಲಸಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಿವರ ನೀಡಿದರು.

2024ರ ಜನವರಿ ವೇಳೆಗೆ ಇಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ನಡೆಸಬಹುದಾಗಿದೆ. ಆರಂಭದಲ್ಲಿ ನಿತ್ಯದ ಅಭ್ಯಾಸಕ್ಕೆ ಸೌಲಭ್ಯವಿರುವುದಿಲ್ಲ. ನಂತರದ ದಿನಗಳಲ್ಲಿ ಅಭ್ಯಾಸಕ್ಕಾಗಿ ನೆಟ್ಸ್‌ಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು. ಪಂದ್ಯ ನಡೆದಾಗ ಪ್ರೇಕ್ಷಕರ ತಾತ್ಕಾಲಿಕ ಗ್ಯಾಲರಿ ಸಿದ್ಧಪಡಿಸಿಕೊಳ್ಳಲು ಅವಕಾಶ ಇದೆ ಎಂದರು.

ಐದು ವರ್ಷಗಳ ಹಿಂದೆಯೇ ಮಂಜೂರಾಗಿದ್ದ ಈ ಜಮೀನಿನಲ್ಲಿ ಎರಡು ವರ್ಷಗಳ ಹಿಂದೆಯೇ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಯೋಜನೆ ರೂಪುರೇಷೆ ಅಂತಿಮ ಹಂತಕ್ಕೆ ಬರುವ ಹೊತ್ತಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಒಂದೂವರೆ ವರ್ಷ ಕೊರೊನಾ ಭೀತಿ ಇದ್ದಿದ್ದರಿಂದ ಯಾವುದೇ ಕೆಲಸಗಳು ಆಗಿರಲಿಲ್ಲ. ಈಗ ಜನಜೀವನ ಸಹಜ ಸ್ಥಿತಿಗೆ ಮರಳಿದ್ದರಿಂದ ಮತ್ತೆ ಟರ್ಫ್‌ ವ್ಯವಸ್ಥೆಯಿರುವ ಮೈದಾನದ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. ಇನ್ನೊಂದು ವರ್ಷದಲ್ಲಿ ಕ್ರಿಕೆಟ್‌ ಪಂದ್ಯಗಳಿಗೆ ಮೈದಾನ ಪೂರ್ಣ ಪ್ರಮಾಣದಲ್ಲಿ ಅಣಿಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಐಪಿಎಲ್‌, ಅಂತರರಾಷ್ಟ್ರೀಯ ಪಂದ್ಯ ಕಷ್ಟ

ದಾವಣಗೆರೆಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳನ್ನು ಆಯೋಜಿಸುವುದು ಕಷ್ಟ.

ಆ ಹಂತದ ಪಂದ್ಯಗಳನ್ನು ಆಯೋಜಿಸಲು ವಿಮಾನ ನಿಲ್ದಾಣ ಬೇಕು. 500–600 ಜನ ಉಳಿದುಕೊಳ್ಳುವಷ್ಟು ವ್ಯವಸ್ಥೆ ಇರುವ ಪಂಚತಾರಾ ಹೋಟೆಲ್‌ಗಳು ಇರಬೇಕು. ಫ್ಲಡ್‌ ಲೈಟ್ಸ್‌ ವ್ಯವಸ್ಥೆ ಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ಈ ಮೈದಾನ ಸಣ್ಣದು. ಕ್ರಿಕೆಟ್‌ ಪಂದ್ಯಗಳಿಗೆ ಮಾತ್ರ ಸಾಕಾಗುತ್ತದೆ. ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದರೆ ನಿರ್ವಹಿಸುವಷ್ಟು ಇಲ್ಲಿ ಸ್ಥಳಾವಕಾಶವಿಲ್ಲ ಎಂದು ಕೆ. ಶಶಿಧರ್‌ ಮಾಹಿತಿ ನೀಡಿದರು.

ಪ್ರಥಮದರ್ಜೆ ಕ್ರಿಕೆಟ್‌ ಪಂದ್ಯಗಳಿಗೆ ಅವಕಾಶ ನೀಡುವುದರಿಂದ ಇಲ್ಲಿ ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲಿವೆ. ಹಗಲು ಹೊತ್ತಿನಲ್ಲಿ ರಣಜಿ ಅಲ್ಲದೇ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಪಂದ್ಯಗಳನ್ನೂ ಆಯೋಜಿಸಬಹುದು ಎಂದರು.

ಶೀಘ್ರ ಆರಂಭಿಸಿ

ದಾವಣಗೆರೆಯಲ್ಲಿ ಒಂದು ಕಡೆ ಹೊರತುಪಡಿಸಿ ಮಿಕ್ಕ ಕಡೆ ಮ್ಯಾಟಿಂಗ್‌ ಪಿಚ್‌ನ ವ್ಯವಸ್ಥೆ ಇದೆ. ಮ್ಯಾಟಿಂಗ್‌ ಮೇಲೆ ಆಟವಾಡಿ ಬೇರೆ ಕಡೆ ಪಂದ್ಯಗಳಿಗೆ ತೆರಳುವ ಇಲ್ಲಿನ ಪ್ರತಿಭೆಗಳಿಗೆ ಟರ್ಫ್‌ ಪಿಚ್‌ಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅಂತೆಯೇ ಟರ್ಫ್‌ ಪಿಚ್‌ ಬೇಗ ಆಗಬೇಕು. ಕೆಎಸ್‌ಸಿಎ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಮೈದಾನದಲ್ಲಿ ಮ್ಯಾಚ್‌ಗಳನ್ನು ಮಾತ್ರ ನಡೆಸದೇ ಅಭ್ಯಾಸಕ್ಕೂ ಅವಕಾಶ ಮಾಡಿಕೊಡಬೇಕು. ಆಗ ಸ್ಥಳೀಯ ಪ್ರತಿಭೆಗಳಿಗೆ ಉಪಯೋಗವಾಗಲಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಕೆ.ಎನ್‌. ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು