ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಯಾ ಯೋಜನೆ | ಫೆ. ಅಂತ್ಯಕ್ಕೆ ಶೇ 90ರಷ್ಟು ಪ್ರಗತಿ ಸಾಧಿಸಿ‌: ಜಿಲ್ಲಾಧಿಕಾರಿ

Published 18 ಜನವರಿ 2024, 7:39 IST
Last Updated 18 ಜನವರಿ 2024, 7:39 IST
ಅಕ್ಷರ ಗಾತ್ರ

ದಾವಣಗೆರೆ: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಉಪ ಯೋಜನೆಯಡಿ 2023-24ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಗೆ ₹402 ಕೋಟಿ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ಫೆಬ್ರುವರಿ ಅಂತ್ಯಕ್ಕೆ ಶೇ 90ರಷ್ಟು ಪ್ರಗತಿ ಸಾಧಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎಸ್‍ಸಿಪಿ, ಟಿಎಸ್‍ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್‍ಸಿಪಿಯಡಿ ಕೇಂದ್ರ ವಲಯದಡಿ ಪ್ರಸಕ್ತ ಸಾಲಿನಲ್ಲಿ ₹ 82.29 ಕೋಟಿ, ರಾಜ್ಯವಲಯದ ಅಡಿ ₹136.6 ಕೋಟಿ ಹಾಗೂ ಜಿಲ್ಲಾ ವಲಯದಡಿ ₹30.30 ಕೋಟಿ ಸೇರಿ ₹ 249.20 ಕೋಟಿಗೆ ಕ್ರಿಯಾ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ ಇಲ್ಲಿಯವರೆಗೆ ₹134.28 ಕೋಟಿ ಬಿಡುಗಡೆಯಾಗಿ ₹99.17 ಕೋಟಿ ವೆಚ್ಚವಾಗಿದ್ದು, ಶೇ 73.86 ರಷ್ಟು ಪ್ರಗತಿಯಾಗಿದೆ’ ಎಂದರು.

‘ಟಿಎಸ್‍ಪಿ ಯೋಜನೆಯಡಿ ಕೇಂದ್ರ ವಲಯ ₹62.46 ಕೋಟಿ, ರಾಜ್ಯವಲಯದಿಂದ ₹70.49 ಕೋಟಿ ಹಾಗೂ ಜಿಲ್ಲಾ ವಲಯದಿಂದ ₹19.96 ಕೋಟಿ ಸೇರಿ ₹152.93 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದಿಸಲಾಗಿದೆ. ಇದರಲ್ಲಿ ₹83.46 ಕೋಟಿ ಬಿಡುಗಡೆಯಾಗಿದ್ದು, ₹66.09 ಕೋಟಿ ವೆಚ್ಚ ಮಾಡಿದ್ದು, ಶೇ 79.18ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಿದರು.

‘ಶೇ 75ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳು ಮಾರ್ಚ್ ಅಂತ್ಯದವರೆಗೆ ಕಾಯದೆ ಫೆಬ್ರುವರಿಯಲ್ಲಿ ಪ್ರಗತಿ ಸಾಧಿಸಬೇಕು. ಕಾಮಗಾರಿಗಳನ್ನು ಕೈಗೊಳ್ಳುವಾಗ ಜನರಿಗೆ ಅನುಕೂಲವಾಗುವ ಜೊತೆಗೆ ಬಹಳ ದಿನಗಳವರೆಗೆ ಬಾಳಿಕೆ ಬರಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು’ ಎಂದರು.

‘ಜಲಸಂಪನ್ಮೂಲ ಇಲಾಖೆಯಿಂದ ಎಸ್‍ಸಿಪಿಯಡಿ ₹34 ಕೋಟಿ ಮತ್ತು ಟಿಎಸ್‍ಪಿಯಡಿ ₹17 ಕೋಟಿ ಇದ್ದು, ಶೂನ್ಯ ಸಾಧನೆ ಮಾಡಲಾಗಿದೆ. ಸಿಸಿ ರಸ್ತೆ, ಸಮುದಾಯ ಭವನ, ಚೆಕ್ ಡ್ಯಾಂ ಕಾಮಗಾರಿ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಯವರು ಜಲಸಂಪನ್ಮೂಲ ಇಲಾಖೆಯಿಂದ ನೀರಾವರಿ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು’ ಎಂದು ತಿಳಿಸಿದರು.

ರೇಷ್ಮೆ ಬೆಳೆಗೆ ಆದ್ಯತೆ ನೀಡಿ:

‘ಜಿಲ್ಲೆಯಲ್ಲಿ 610 ರೇಷ್ಮೆ ಬೆಳೆಯುವ ರೈತರಿದ್ದು, ಇನ್ನೂ ಹೆಚ್ಚಿನ ರೈತರು ರೇಷ್ಮೆ ಬೆಳೆಯುವಂತೆ ಕ್ಷೇತ್ರ ಭೇಟಿಯ ಮೂಲಕ ಪ್ರೋತ್ಸಾಹಿಸುವ ಕೆಲಸವನ್ನು ಇಲಾಖೆ ಮಾಡಬೇಕು. ರೇಷ್ಮೆ ರೀಲಿಂಗ್ ಮಷಿನ್ ತರಿಸುವ ಮೂಲಕ ಮಾರುಕಟ್ಟೆ ಒದಗಿಸುವ ಜೊತೆಗೆ ರೇಷ್ಮೆ ಬೆಳೆ ಬೆಳೆಯಲು ಖಾತರಿಯಡಿ ಅವರಿಗೆ ಬೇಕಾದ ಸೌಕರ್ಯ ಕಲ್ಪಿಸಲು ಮುಂದಾಗಬೇಕು’  ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್.ಸಿ.ಪಿ. ಟಿಎಸ್‍ಪಿಯಡಿ ಟಿ.ಸಿ ಅಳವಡಿಕೆ
‘ಬೆಸ್ಕಾಂನಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿಯಡಿ ರೈತರು ಸ್ವಂತವಾಗಿ ಕೊಳವೆಬಾವಿ ಕೊರೆಯಿಸಿದಾಗ ವಿದ್ಯುತ್ ಸಂಪರ್ಕ ಪಡೆದವರಿಗೆ ಟಿಸಿಯನ್ನು ಅಳವಡಿಸಿಕೊಡಲಾಗುತ್ತದೆ. ಪ್ರತಿ ಘಟಕಕ್ಕೆ ₹1.5 ಲಕ್ಷ ಪ್ರತಿ ರೈತರಿಗೆ ವೆಚ್ಚ ಮಾಡಲಾಗುತ್ತದೆ. ಈ ವರ್ಷ ಜಿಲ್ಲೆಯಲ್ಲಿ 15 ಎಸ್‍ಸಿಪಿ 6 ಟಿಎಸ್‍ಪಿ ಗುರಿ ನೀಡಲಾಗಿರುತ್ತದೆ ಎಂದು ಬೆಸ್ಕಾಂ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ‘ಯೋಜನೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಡಿ.ಸಿ. ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT