ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಗೆ ಕಾರ್ಯಕರ್ತರೇ ನಿಜವಾದ ಶಕ್ತಿ’

ಎಸ್.ಎ. ರವೀಂದ್ರನಾಥ್ ಅಮೃತ ಮಹೋತ್ಸವ ಮಕ್ಕಳ ಕ್ರೀಡಾಂಗಣದ ಉದ್ಘಾಟನೆ
Last Updated 28 ನವೆಂಬರ್ 2020, 6:11 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿಗೆ ಕಾರ್ಯಕರ್ತರೇ ನಿಜವಾದ ಶಕ್ತಿ. ನರೇಂದ್ರ ಮೋದಿ ಪ್ರಧಾನಿಯಾಗಲು 70 ವರ್ಷಗಳ ಕಾರ್ಯಕರ್ತರ ಶ್ರಮ ಹಾಗೂ ಬಲಿದಾನವಿದೆ ಎಂದುರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಸಹ ಕಾರ್ಯವಾಹ ಪಟ್ಟಾಭಿರಾಮ್ ಅಭಿಪ್ರಾಯಪಟ್ಟರು.

ಇಲ್ಲಿನ ಸೋಮೇಶ್ವರ ವಿದ್ಯಾಲಯದಲ್ಲಿ ನಿರ್ಮಿಸಿರುವ ಎಸ್.ಎ. ರವೀಂದ್ರನಾಥ್ ಅಮೃತ ಮಹೋತ್ಸವ ಮಕ್ಕಳ ಕ್ರೀಡಾಂಗಣದ ಉದ್ಘಾಟನೆ ಹಾಗೂ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭದಲ್ಲಿ ಶಿವನ ಪುತ್ಥಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಠೇವಣಿ ಉಳಿದಿರುವುದನ್ನೇ ಸಂಭ್ರಮಿಸುವಂತಹ ಕಾಲವೊಂದಿತ್ತು. ಪಂಚಾಯಿತಿಗಳ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯವಿಲ್ಲದಿದ್ದರೂ ಪಕ್ಷದ ಬಾವುಟ ಹಿಡಿದು, ಸಂಘಟನೆ ಮಾಡಿದ ಕಾರ್ಯಕರ್ತರಿಂದಾಗಿ ಇಂದು ಪಕ್ಷ ಉಳಿದು ಬೆಳೆದಿದೆ. ನೆಹರೂ ಮತ್ತು ಇಂದಿರಾಗಾಂಧಿ ಕಾಲದಲ್ಲಿ ಇದ್ದಂತಹ ಬಲಿಷ್ಠ ಕಾಂಗ್ರೆಸ್ ಅನ್ನು ಎದುರಿಸಿ ಪಕ್ಷ ಕಟ್ಟಿರುವುದು ಸಾಮಾನ್ಯವಲ್ಲ’ ಎಂದರು.

‘ಹಿಂದುತ್ವವೆಂದರೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ. ಇಲ್ಲಿ ವಿಭಜನೆಯಾಗಲು ಅವಕಾಶವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಹಿಂದುತ್ವದಲ್ಲೇ ಜಾತಿ ಹಾಗೂ ಪಂಗಡ ಹಾಗೂ ವರ್ಗಗಳ ಹೆಸರಿನಲ್ಲಿ ವಿಂಗಡಣೆ ಆಗುತ್ತಿರುವುದು ನಾವು ಕಾಣುತ್ತಿದ್ದೇವೆ.ಧರ್ಮ ದೇಶದ ಬೆನ್ನು ಮೂಳೆ ಇದ್ದ ಹಾಗೆ. ಬೇರೆಯವರಿಗೆ ಒಳಿತನ್ನು ಮಾಡುವುದೇ ಧರ್ಮ. ಜನರಿಗೆ ಪಾಪ-ಪುಣ್ಯಗಳ, ಧರ್ಮ- ಅಧರ್ಮಗಳ ಪ್ರಜ್ಞೆಯನ್ನು ಉದ್ದೀಪನ
ಗೊಳಿಸುವ ಕೆಲಸ ಹೆಚ್ಚಾಗಬೇಕು’ ಎಂದು ನುಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಎಸ್.ಎ.ರವೀಂದ್ರನಾಥ್‍ ಅವರು ರಾಜಕೀಯವಾಗಿ ಅಧಿಕಾರದ ಉತ್ತುಂಗಕ್ಕೆ ಏರಿದ್ದರೂ ಜನರೊಂದಿಗೆ ಎಷ್ಟು ನಿಕಟವಾಗಿ ಸಂಬಂಧವನ್ನು ಹೊಂದಿದ್ದಾರೆ. ಎಂತಹ ಗಂಭೀರ ಸನ್ನಿವೇಶಗಳಿದ್ದರೂ ತಮ್ಮ ಹಾಸ್ಯ ಸ್ವಭಾವದಿಂದ ಸಮಸ್ಯೆಗಳನ್ನು ಬಗೆಹರಿಸಬಲ್ಲ ಚಾಣಾಕ್ಷತೆ ಅವರಲ್ಲಿದೆ’ ಎಂದರು.

ಅಭಿನಂದನೆ ಸ್ವೀಕರಿಸಿದ ಎಸ್‌.ಎ.ರವೀಂದ್ರನಾಥ್ ಮಾತನಾಡಿ, ‘ರಾಜಕಾರಣದಲ್ಲಿ 3 ದಶಕಗಳ ಕಾಲ ಶಾಸಕರಾಗಿ, ಸಚಿವನಾಗಿ ಅಧಿಕಾರವನ್ನು ಅನುಭವಿಸಿದ್ದೇನೆ. ಆದರೆ ಅಧಿಕಾರವನ್ನು ಯಾವತ್ತೂ ಸ್ವಾರ್ಥಕ್ಕಾಗಿ, ಲಾಭದ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಿಲ್ಲ. ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸಿ ಸ್ಥಾನಮಾನ ನೀಡುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ’ ಎಂದರು.

ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್‍ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾಂಗಣದ ಆವರಣದಲ್ಲಿರುವ ಭಾರತಮಾತೆಯ ಭಾವಚಿತ್ರವನ್ನು ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾಮಿ ನೆರವೇರಿಸಿದರು. ರವೀಂದ್ರನಾಥ್ ಅವರ ಜೀವನದ ಪ್ರಮುಖ ಘಟನೆಗಳನ್ನು ದಾಖಲಿಸಿರುವ ಪುಸ್ತಕದ ಮುಖಪುಟವನ್ನು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಬಿಡುಗಡೆ ಮಾಡಿದರು.ಸೋಮೇಶ್ವರ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಆರ್.ಅಶೋಕರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಬಿ.ಜಿ.ಅಜಯ್‍ಕುಮಾರ್, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಎನ್. ಹನುಮಂತನಾಯ್ಕ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯಶಿಕ್ಷಕಿಯರಾದ ಎನ್. ಪ್ರಭಾವತಿ ಮತ್ತು ಪಿ.ಎಚ್. ವೀಣಾ, ಡಿಡಿಪಿಐ ಪರಮೇಶ್ವರಪ್ಪ, ಬಿಇಓ ಸಿದ್ಧಪ್ಪ, ಯಲ್ಲಮ್ಮ ರಕ್ಷಣಾ ವೇದಿಕೆಯ ಶಿವಕುಮಾರ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT