ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ವಿಶ್ವ ಹೃದಯ ದಿನದ ವಾಕಥಾನ್‌ಗೆ ನಟಿ ಅದಿತಿ ಪ್ರಭುದೇವ್ ಚಾಲನೆ

Published : 29 ಸೆಪ್ಟೆಂಬರ್ 2024, 5:20 IST
Last Updated : 29 ಸೆಪ್ಟೆಂಬರ್ 2024, 5:20 IST
ಫಾಲೋ ಮಾಡಿ
Comments

ದಾವಣಗೆರೆ: ವಿಶ್ವ ಹೃದಯ ದಿನದ ಅಂಗವಾಗಿ‌ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ವತಿಯಿಂದ ನಗರದಲ್ಲಿ ಭಾನುವಾರ ವಾಕಥಾನ್ ನಡೆಯಿತು. ನಟಿ ಅದಿತಿ ಪ್ರಭುದೇವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಾಕಥಾನ್ ಗೆ ಚಾಲನೆ ನೀಡಿದರು.

ಮೋತಿ ವೀರಪ್ಪ ಕಾಲೇಜು ಸಮೀಪದಿಂದ ಹೊರಟ ವಾಕಥಾನ್ ಗುಂಡಿ ವೃತ್ತ, ವಿದ್ಯಾರ್ಥಿ ಭವನ, ಜಯದೇವ ವೃತ್ತ, ಗಾಂಧಿ ವೃತ್ತ, ಎವಿಕೆ ಕಾಲೇಜು ರಸ್ತೆ, ರಾಮ್ ಅಂಡ ಕೋ ವೃತ್ತದ ಮೂಲಕ ಸಾಗಿ ಎಸ್ಎಸ್ಐಎಂಎಸ್ ಆಸ್ಪತ್ರೆ ಆವರಣ ತಲುಪಿತು. ನಗರದ ವಿವಿಧ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು.

‘ಸದೃಢ ದೇಹಕ್ಕೆ ಹೃದಯದ ಆರೋಗ್ಯ ತೀರಾ ಮುಖ್ಯ. ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಾಯಿಸಿಕೊಂಡು ಇರುವಷ್ಟು ದಿನ ಖುಷಿಯಾಗಿ ಬದುಕಬೇಕು. ನಗುನಗುತ್ತ ಜೀವನ ನಡೆಸಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಕೆಟ್ಟ ಆಲೋಚನೆ, ದುರಾಭ್ಯಾಸ, ಕೆಟ್ಟ ಆಹಾರ ಬಿಟ್ಟರೆ ಹೃದಯ ಚೆನ್ನಾಗಿರುತ್ತದೆ. ಸಸ್ಯಾಹಾರ ರೂಢಿಸಿಕೊಂಡರೆ ಒಳಿತು’ ಎಂದು ನಟಿ ಅದಿತಿ ಪ್ರಭುದೇವ್ ಅಭಿಪ್ರಾಯಪಟ್ಟರು.

‘ಹೃದಯ ವಿಶ್ರಾಂತಿ ಇಲ್ಲದೇ ಕಾರ್ಯನಿರ್ವಹಿಸುವ ದೇಹದ ಅಂಗ. ವರ್ಷದಿಂದ ವರ್ಷಕ್ಕೆ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆ. ಅಂದಾಜಿನ ಪ್ರಕಾರ ವಿಶ್ವದಲ್ಲಿ ಹೃದ್ರೋಗದಿಂದ ವರ್ಷಕ್ಕೆ 1.78 ಕೋಟಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಟ್ಟು ಸಾವಿನ ಪ್ರಮಾಣದ ಶೇ 37ರಷ್ಟು ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸುತ್ತಿದೆ’ ಎಂದು ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಸುನೀಲ್ ಕಳವಳ ವ್ಯಕ್ತಪಡಿಸಿದರು.

‘ಕೋವಿಡ್ ಬಳಿಕ ಚಿಕ್ಕ ವಯಸ್ಸಿನವರು ಕೂಡ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಹೃದಯ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ತೀರಾ ಮುಖ್ಯ. ದೈನಂದಿನ ಜೀವನದಲ್ಲಿ ವ್ಯಾಯಾಮ, ಯೋಗ ಹಾಗೂ ಧ್ಯಾನ ರೂಢಿಸಿಕೊಳ್ಳಬೇಕು. ಒತ್ತಡ ನಿರ್ವಹಣೆ ಕೌಶಲವನ್ನು ಬೆಳೆಸಿಕೊಳ್ಳಬೇಕು’ ಎಂದು ವೈದ್ಯ ಡಾ.ಮಲ್ಲೇಶ್ ಸಲಹೆ ನೀಡಿದರು.

‘ಹೃದಯಾಘಾತ ಸಂಭವಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರುವ ಬದಲು ಸ್ಥಳಕ್ಕೆ ವೈದ್ಯಕೀಯ ತಂಡ ತೆರಳಿದರೆ ಅನುಕೂಲ. ಹೃದಯ ಚಿಕಿತ್ಸೆಗೆ ಪೂರಕವಾದ ಆಂಬುಲೆನ್ಸ್ ರೂಪಿಸಿದರೆ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಸಿಹಿ ತಿನಿಸು ಹಾಗೂ ಮಾಂಸ ಸೇವನೆ ತ್ಯಜಿಸುವುದು ಒಳಿತು’ ಎಂದು ಹಿರಿಯ ಹೃದಯ ತಜ್ಞ ಡಾ.ಶಿವಲಿಂಗಪ್ಪ ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗೇಂದ್ರಪ್ಪ ಇದ್ದರು.

ಹೃದ್ರೋಗ ಹೆಚ್ಚು ಮಾರಣಾಂತಿಕವಾಗುತ್ತಿದೆ. ಚಿಕ್ಕ ಮಕ್ಕಳನ್ನೂ ಬಲಿಪಡೆಯುತ್ತಿದೆ. ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದನ್ನು ಅರಿಯಬೇಕು. ಆರೋಗ್ಯಕರವಾಗಿ ಬದುಕಬೇಕು.
ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT