ಬುಧವಾರ, ಮಾರ್ಚ್ 22, 2023
22 °C
ಕತ್ತಲೆಗೆರೆ ಕೃಷಿ ಕೇಂದ್ರದ ತಜ್ಞರ ಪರಿಶೀಲನೆ

ಹರಿಹರ: ತೆಂಗಿನ ಬೆಳೆಗೆ ಕಪ್ಪುತಲೆ ಹುಳು ಬಾಧೆ: ಆತಂಕದಲ್ಲಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ತಾಲ್ಲೂಕಿನಲ್ಲಿ ತೆಂಗಿನ ಬೆಳೆಗೆ ಕಪ್ಪುತಲೆ ಹುಳು ಬಾಧೆ ವ್ಯಾಪಕವಾಗಿ ಹರಡುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.

ಭತ್ತ, ಮೆಕ್ಕೆಜೋಳ ತಾಲ್ಲೂಕಿನ ಪ್ರಧಾನ ಬೆಳೆಯಾಗಿದ್ದರೂ, ತಾಲ್ಲೂಕಿನ 2,500 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇದೆ. ದಶಕದ ಹಿಂದೆ ಕಪ್ಪುತಲೆ ಹುಳು ಬಾಧೆ ರೈತರನ್ನು ಕಾಡಿತ್ತು. ಈಗ ಮತ್ತೆ ಇದೇ ರೋಗ ಮರುಕಳಿಸಿದ್ದು, ತೀವ್ರ ನಷ್ಟದ ಭೀತಿ ಎದುರಾಗಿದೆ. ತಾಲ್ಲೂಕಿನಲ್ಲಿ 700 ಹೆಕ್ಟೇರ್‌ ಪ್ರದೇಶದ ತೆಂಗಿನ ಬೆಳೆ ಹುಳು ಬಾಧೆಗೆ ಒಳಗಾಗಿದೆ.

ರೈತರ ಮನವಿ ಮೇರೆಗೆ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ತಜ್ಞರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ತೆಂಗಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹಲಸಬಾಳು ಗ್ರಾಮದ ಶಂಕರಪ್ಪ ಹಾಗೂ ಸುತ್ತಲಿನ ಹಲವು ತೋಟಗಳಿಗೆ ಕತ್ತಲೆಗೆರೆ ಕೃಷಿ ಕೆಂದ್ರದ ತೋಟಗಾರಿಕೆ ತಜ್ಞ ಡಾ.ನಾಗರಾಜ್ ಕುಸಗೂರು ಭೇಟಿ ನೀಡಿದರು.

‘ಒಪಿಸಿನ ಓರೊನೊಸೆಲ್ಲಾ ಎಂಬ ವೈಜ್ಞಾನಿಕ ಹೆಸರಿನ ಹುಳು ತೆಂಗಿನ ಗರಿಗಳ ತಳ ಭಾಗದಲ್ಲಿ ಗೂಡು ಕಟ್ಟಿ, ಎಲೆಗಳಲ್ಲಿರುವ ರಸವನ್ನು ಹೀರಿ ಮರವನ್ನು ಶಕ್ತಿಹೀನವಾಗಿಸುತ್ತದೆ. ಮರ ಹಾಗೂ ಗರಿಗಳನ್ನು ದೂರದಿಂದ ನೋಡಿದಾಗಲೇ ವ್ಯತ್ಯಾಸವನ್ನು ಗಮನಿಸಬಹುದು. ತೀವ್ರ ಬಾಧೆಗೀಡಾಗ ತೆಂಗಿನ ಮರದ ಗರಿಗಳು ಉರುಳಿ ಮರ ಕ್ರಮೇಣ ಬೋಳಾಗುತ್ತದೆ. ಇದರಿಂದ ತೆಂಗಿನ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ’ ಎಂದು ಡಾ.ನಾಗರಾಜ್ ವಿವರಿಸಿದರು.

ಹತೋಟಿ ಕ್ರಮ: ‘ಪ್ರತಿ ತೆಂಗಿನ ಗಿಡಕ್ಕೆ ಆರು ತಿಂಗಳಿಗೊಮ್ಮೆ 250 ಗ್ರಾಂ ಸಾರಜನಕ, 160 ಗ್ರಾಂ ರಂಜಕ, 600 ಗ್ರಾಂ ಪೊಟ್ಯಾಷ್ ಗೊಬ್ಬರ ಜೊತೆಗೆ ಎರಡೂವರೆ ಕೆ.ಜಿ. ಬೇವಿನ ಹಿಂಡಿ ನೀಡಬೇಕು. ಹಾಗೆಯೇ ಕೀಟ ನಿಯಂತ್ರಣಕ್ಕೆ ಕ್ವಿನಾಲ್‌ಫಾಸ್, ಡೈಕ್ಲೊವಾಸ, ಫಾಸಲೋನ್ ಮತ್ತು ಮೆಲಾಥಿಯನ್ ಎಂಬ ಕ್ರಿಮಿನಾಶಕವನ್ನು ಪ್ರತ್ಯೇಕವಾಗಿ ಪ್ರತಿ ಲೀಟರ್‌ ನೀರಿಗೆ ತಲಾ ಒಂದು ಎಂ.ಎಲ್. ಹಾಕಿ ಮಿಶ್ರಣ ಮಾಡಬೇಕು. ಮಿಶ್ರಣವನ್ನು ಗರಿಗಳ ಮೇಲೆ ಸಿಂಪಡಿಸಬೇಕು’ ಎಂದು ಡಾ. ನಾಗರಾಜ್‌ ಸಲಹೆ ನೀಡಿದರು.

ತಜ್ಞರ ತಂಡದಲ್ಲಿ ವಿಸ್ತರಣಾ ಮುಂದಾಳು ಡಾ.ಮಾರುತೇಶ್, ಕೀಟಶಾಸ್ತ್ರ ತಜ್ಞ ಡಾ.ವಿಜಯ ದಾನರೆಡ್ಡಿ, ಪರಿಸರ ತಜ್ಞ ಡಾ.ಚಂದ್ರ ಪಾಟೀಲ್ ಇದ್ದರು.

135 ತೆಂಗಿನ ಮರ ಹೊಂದಿದ್ದೇನೆ. ಪ್ರತಿ ಬಾರಿ ಕಟಾವು ಮಾಡಿದಾಗ 17 ಕ್ವಿಂಟಲ್ ಬೆಳೆ ಬರುತ್ತಿತ್ತು. ಕಪ್ಪುತಲೆ ಹುಳು ಬಾಧೆಯಿಂದ ಇಳುವರಿ ಅರ್ಧದಷ್ಟು ಇಳಿಕೆಯಾಗುವ ಆತಂಕ ಎದುರಾಗಿದೆ.
–ಕುಂದೂರು ಮಂಜಪ್ಪ, ಪ್ರಗತಿಪರ ರೈತ, ಹೊಳೆಸಿರಿಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು