ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ನಾಲೆಗೆ ನೀರು; ತೀವ್ರಗೊಂಡ ಹೋರಾಟ

ವಿಷ ಕುಡಿಯಲು ಯತ್ನಿಸಿದ ರೈತ; ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು
Published 21 ಸೆಪ್ಟೆಂಬರ್ 2023, 14:22 IST
Last Updated 21 ಸೆಪ್ಟೆಂಬರ್ 2023, 14:22 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಮಳೆಗಾಲದ ಹಂಗಾಮಿಗೆ ಭದ್ರಾನಾಲೆಯಿಂದ ನೀರು ಹರಿಸಲು ಆಗ್ರಹಿಸಿ ಗುರುವಾರ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆ ದಂಡೆ ಮೇಲೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ರಸ್ತೆ ತಡೆ ನಡೆಸಿದರು.

ಕಾಡಾ ಸಮಿತಿ ಮೊದಲು ತೀರ್ಮಾನಿಸಿದಂತೆ ಸತತ 100 ದಿನ ನೀರು ಹರಿಸಿ, ಭತ್ತದ ಬೆಳೆಗಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಕಾಡಾ ಸಮಿತಿ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್, ಸಚಿವ ಮಧು ಬಂಗಾರಪ್ಪ ಅವರು ಭದ್ರಾ ನಾಲೆ ಅಚ್ಚುಕಟ್ಟಿನ ರೈತರನ್ನು ಇಬ್ಭಾಗ ಮಾಡಿದ್ದಾರೆ. ಮೇಲ್ಭಾಗದ ರೈತರ ಹಿತ ಕಾಪಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮೇಲ್ಭಾಗದ ತೋಟದ ಬೆಳೆಗಾರರಿಗೆ ಬೇಸಿಗೆ ವೇಳೆ ನೀರು ಹರಿಸಲು ಕೊನೆ ಭಾಗದ ರೈತರ ಕಗ್ಗೊಲೆ ಮಾಡಿದೆ’ ಎಂದು ಸಚಿವರ ವಿರುದ್ಧ ಘೋಷಣೆ ಕೂಗಿದರು.

‘ನಾಲೆಗೆ ನೀರು ಹರಿಸಿ. ಇಲ್ಲವಾದರೆ ಪ್ರತಿ ಎಕರೆಗೆ ₹ 30,000 ಪರಿಹಾರ ಬ್ಯಾಂಕ್‌ ಖಾತೆಗೆ ಜಮಾ ಮಾಡಿ. ಪರಿಹಾರ ಭಾಗ್ಯ ಕರುಣಿಸಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನಗವಾಡಿ ವೀರೇಶ್‌ ಸರ್ಕಾರಕ್ಕೆ ಲೇವಡಿ ಮಾಡಿದರು.

‘ರೈತರು ಆತ್ಮಹತ್ಯೆ ಮಾಡಿಕೊಂಡು ಹೇಡಿತನ ತೋರಬೇಡಿ, ನಿಮ್ಮ ಜತೆ ನಾವಿದ್ದೇವೆ’ ಎಂದರು.

ವಕೀಲ ಐರಣಿ ಅಣ್ಣೇಶ್‌, ಕಾಂಗ್ರೆಸ್‌ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್‌,‘ಕಾಡಾ ಸಮಿತಿ ಮೊದಲು ನಿರ್ಧರಿಸದಂತೆ ನಾಲೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಲಿ’ ಎಂದು ಆಗ್ರಹಿಸಿದರು.

‘ಭದ್ರಾ ಸಮಸ್ಯೆಗೆ ಮಳೆಯೊಂದೇ ಪರಿಹಾರ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್‌ ಹೇಳಿದರು.

ಇದಕ್ಕೂ ಮುನ್ನ ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಯ ನೀರು ಬಳಕೆದಾರರ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ, ಜನ ಜಾಗೃತಿ ವೇದಿಕೆ ಸದಸ್ಯ ಪಟೇಲ್‌ ಮಂಜುನಾಥ್, ಜಿಗಳಿ ಆನಂದಪ್ಪ, ಕರೇಗೌಡ್ರ ಮಂಜುನಾಥ್‌, ಮುದೇಗೌಡ್ರ ತಿಪ್ಪೇಶ್‌, ರೈತ ಸಂಘದ ಕೊಟ್ರೇಶ್‌ ಭಾನುವಳ್ಳಿ ಮಾತನಾಡಿ ಸರ್ಕಾರದ ನಿರ್ಧಾರ ಖಂಡಿಸಿದರು.

ಅಧೀಕ್ಷಕ ಎಂಜಿನಿಯರ್‌ ಸುಜಾತಾ ಅವರು ಧಾವಿಸಿದ ವೇಳೆ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ಬಾರಿ ಮಳೆ ಕೈಕೊಟ್ಟ ಕಾರಣ ಸಮಸ್ಯೆ ಉದ್ಭಭವಿಸಿದೆ. ಐಸಿಸಿ ತೀರ್ಮಾನದಂತೆ ನೀರು ನಿಲುಗಡೆ ಮಾಡಲಾಗಿದೆ. ಹಿಂದೆ ಸಾಕಷ್ಟು ಬಾರಿ ಆನ್‌ ಆಫ್‌ ಪದ್ಧತಿಯಡಿ ನೀರು ಹರಿಸಲಾಗಿದೆ. ನೀರು ನಿಲುಗಡೆಯಲ್ಲಿ ನಮ್ಮ ಪಾತ್ರ ಇಲ್ಲ. ನಾಲೆಗೆ ನೀರು ಹರಿಸುವುದು ನಮ್ಮ ಕೈಯಲ್ಲಿಲ್ಲ’ ಎಂದು ಸುಜಾತಾ ಹೇಳಿದರು.

ಕಾಡಾ ಸಮಿತಿ ತೀರ್ಮಾನದ ಪ್ರತಿ ನೀಡಿ ಎಂದು ರೈತರು ಆಗ್ರಹಿಸಿದರು. ತುರ್ತಾಗಿ ಕಾಡಾ ಸಮಿತಿ ಸಭೆಯನ್ನು ಶಿವಮೊಗ್ಗ ಜಿಲ್ಲೆಯ ಹೊರಗೆ ಕರೆದು ನೀರು ಹರಿಸಿ ಎಂದು ಪಟ್ಟು ಹಿಡಿದರು.

ಎಸಿ ದುರ್ಗಾಶ್ರೀ, ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಉಪ ತಹಶೀಲ್ದಾರ್‌ ಆರ್.‌ ರವಿ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪ್ರಭಾರಿ ಎಇಇ ಧನಂಜಯ, ಎಇ, ಜೆಇಗಳು, ಯಲವಟ್ಟಿ, ಜಿಗಳಿ, ಕುಂಬಳೂರು, ನಿಟ್ಟೂರು, ಭಾನುವಳ್ಳಿ, ಕಾಮಲಾಪುರ, ಹೊಳೆಸಿರಿಗೆರೆ, ಕಡರನಾಯ್ಕನಹಳ್ಳಿ, ಕೊಕ್ಕನೂರು ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮಾಂತರ ಡಿವೈಎಸ್ಪಿ ಬಸವರಾಜ್‌, ಸಿಪಿಐ ಸುರೇಶ್‌ ಸಗರಿ, ಪಿಎಸ್‌ಐ ಪ್ರಭು ಕೆಳಗಿನ ಮನಿ ಹಾಗೂ ಪೊಲೀಸರು ಇದ್ದರು.

ಮಲೇಬೆನ್ನೂರಿನ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿಯಲ್ಲಿ ಗುರುವಾರ ಭದ್ರಾ ಯೋಜನಾ ವಲಯದ ಅಧೀಕ್ಷಕ ಎಂಜಿನಿಯರ್‌ ಸುಜಾತಾ ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು
ಮಲೇಬೆನ್ನೂರಿನ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿಯಲ್ಲಿ ಗುರುವಾರ ಭದ್ರಾ ಯೋಜನಾ ವಲಯದ ಅಧೀಕ್ಷಕ ಎಂಜಿನಿಯರ್‌ ಸುಜಾತಾ ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು
ರಸ್ತೆ ತಡೆ ನಡೆಯುತ್ತಿದ್ದ ವೇಳೆ ಕುಂಬಳೂರು ಗ್ರಾಮದ ರೈತ ವಿಷ ಸೇವಿಸಲು ಯತ್ನಿಸಿದರು
ರಸ್ತೆ ತಡೆ ನಡೆಯುತ್ತಿದ್ದ ವೇಳೆ ಕುಂಬಳೂರು ಗ್ರಾಮದ ರೈತ ವಿಷ ಸೇವಿಸಲು ಯತ್ನಿಸಿದರು

ಪ್ರತಿಭಟನೆ ವೇಳೆ ನಡೆದ ಪ್ರಮುಖ ಅಂಶಗಳು

* ರಸ್ತೆ ತಡೆ ವೇಳೆ ಕುಂಬಳೂರು ಗ್ರಾಮದ ರೈತ ಸಿದ್ದಪ್ಪ ವಿಷ ಕುಡಿಯಲು ಯತ್ನಿಸಿದಾಗ ಪೊಲೀಸರು ತಡೆದರು.

* ‘ಐಸಿಸಿ ಹೆಚ್ಚಿನ ನೀರು ಬೇಡುವ ಬೆಳೆ ಬೆಳೆಯದಂತೆ ಸೂಚನೆ ಹೊರಡಿಸಿದ ಕಾರಣ ಅಚ್ಚುಕಟ್ಟಿನ ಕೊನೆಭಾಗ ಹೊಳೆಸಿರಿಗೆರೆಯಲ್ಲಿ 10 ಎಕರೆ ಮೆಕ್ಕೆಜೋಳ ಬಿತ್ತಿದ್ದೇನೆ. ಈವರೆಗೂ ಒಮ್ಮೆಯೂ ನೀರು ಬಂದಿಲ್ಲ. ಬೆಳೆ ಒಣಗಿದೆ ಬಂದು ನೋಡಿ’ ಎಂದು ಅಧೀಕ್ಷಕ ಎಂಜಿನಿಯರ್ ಅವರನ್ನು ರೈತ ಫಾಲಾಕ್ಷಪ್ಪ ಪೇಚಿಗೆ ಸಿಲುಕಿಸಿದರು.

* ಹೊರಗುತ್ತಿಗೆ ನೌಕರರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಅಧೀಕ್ಷಕ ಎಂಜಿನಿಯರ್‌ ನೌಕರರ ಬೇಡಿಕೆ ಆಲಿಸಿದರು. ಶೀಘ್ರ ಸಮಸ್ಯೆ ಪರಿಹಾರವಾಗಲಿದೆ. ಧರಣಿ ನಿಲ್ಲಿಸಿ ಕೆಲಸಕ್ಕೆ ಬನ್ನಿ ಎಂದರು. ನೌಕರರ ಸಂಘದ ಅಧ್ಯಕ್ಷ ಆಂಜನೇಯ ‘ಮೊದಲು ಸಂಬಳ ನೀಡಿ. 5 ತಿಂಗಳಿಂದ ವೇತನ ಇಲ್ಲದೆ ಕೆಲಸ ಮಾಡಿದ್ದೇವೆ’ ಎಂದು ಅಲವತ್ತುಕೊಂಡರು.

* ನೀರಿನ ಸಮಸ್ಯೆ ಪರಿಹರಿಸಲು ರೈತರು ಆಗ್ರಹಿಸಿ ಅಧೀಕ್ಷಕ ಎಂಜಿನಿಯರ್ ಕಾರಿಗೆ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. * ಧರಣಿ ನಿರತ ಸುಮಾರು 5000 ರೈತರಿಗೆ ಭತ್ತದ ವ್ಯಾಪಾರಿ ಚಿಟ್ಟಕ್ಕಿ ರಮೇಶ್ ಅವರು ಪುಲಾವ್‌ ಅನ್ನ ಸಾಂಬಾರ್‌ ವ್ಯವಸ್ಥೆ ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT