ದಾವಣಗೆರೆ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಬ್ಬರು ಪಕ್ಷಕ್ಕೂ, ಪಾಲಿಕೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಇದೀಗ ಅನಿವಾರ್ಯ ಉಪಚುನಾವಣೆ ಎದುರಾಗಿದೆ. ಮೇ 20ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್–ಬಿಜೆಪಿ ಜಿದ್ದಿನ ಹೋರಾಟಕ್ಕೆ ಸಜ್ಜಾಗಿವೆ. ಅದಕ್ಕಿಂತಲೂ ರಾಜೀನಾಮೆ ನೀಡಿದವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
28ನೇ ವಾರ್ಡ್ (ಭಗತ್‌ಸಿಂಗ್ ನಗರ) ಸದಸ್ಯ ಜೆ.ಎನ್. ಶ್ರೀನಿವಾಸ್ ಮತ್ತು ಅವರ ಪತ್ನಿ, 37ನೇ ವಾರ್ಡ್ (ಕೆಇಬಿ ಕಾಲೊನಿ) ಸದಸ್ಯೆ ಶ್ವೇತಾ ಶ್ರೀನಿವಾಸ್ ರಾಜೀನಾಮೆ ನೀಡಿ ಬಿಜೆಪಿ ಸೇರಿದವರು. ಈಗ ಅವರೇ ಬಿಜೆಪಿಯಿಂದ ಅಭ್ಯರ್ಥಿಗಳು ಎಂಬುದು ಬಹುತೇಕ ಖಚಿತವಾಗಿದೆ.
ಎರಡೂವರೆ ವರ್ಷಗಳ ಹಿಂದೆ ಪಾಲಿಕೆಗೆ ಚುನಾವಣೆ ನಡೆದಾಗ ಅಧಿಕಾರ ಹಿಡಿಯಲು ಒಂದೇ ಮೆಟ್ಟಿಲು ಎಂದು ಕಾಂಗ್ರೆಸ್ ಬೀಗಿತ್ತು.ಬಳಿಕ ಒಂದೊಂದೇ ಸ್ಥಾನಗಳನ್ನು ಕಳೆದುಕೊಂಡು ಬಂದಿರುವ ಕಾಂಗ್ರೆಸ್‌ಗೆ ಇವರಿಬ್ಬರ ರಾಜೀನಾಮೆ ಮತ್ತಷ್ಟು ಹೊಡೆತ ನೀಡಿದೆ.
45 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದರೆ, ಬಿಜೆಪಿ 17ಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಐವರು ಪಕ್ಷೇತರರು, ಒಬ್ಬರು ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದರು. ಆನಂತರ ನಡೆದ ಬೆಳವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯರನ್ನು ದಾವಣಗೆರೆಯ ನಿವಾಸಿಗಳನ್ನಾಗಿಸಿ ಅಧಿಕಾರ ಹಿಡಿಯುವ ಹೋರಾಟದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಮುಂದೆ ಸಾಗಿತ್ತು. ಅದಾಗಿಯೂ ಮೇಯರ್ ಚುನಾವಣೆಗೆ ಸಮ ಮತ ಬರುವ ಸಾಧ್ಯತೆ ಎದುರಾದಾಗ ಇದೇ ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಗೈರಾಗಿ ಬಿಜೆಪಿಯ ಹಾದಿ ಸುಗಮಗೊಳಿಸಿದ್ದರು. ಕಾಂಗ್ರೆಸ್‌ನ ಯಶೋದಾ ಕೂಡ ಆಗ ಸಭೆಗೆ ಹಾಜರಾಗಿರಲಿಲ್ಲ. ಬಳಿಕ ಅವರು ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತರು.
‘ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ನನ್ನನ್ನು ಮಾಡಿದ್ದರೆ ಬರುತ್ತಿದ್ದೆ. ಅಸಮಾಧಾನದಿಂದ ಬಂದಿರಲಿಲ್ಲ’ ಎಂದು ಆಗ ಶ್ರೀನಿವಾಸ್ ತಿಳಿಸಿದ್ದರು.
ಎರಡನೇ ವರ್ಷದ ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿಯಾಗಿದ್ದ ದೇವರಮನಿ ಶಿವಕುಮಾರ್ ಅವರೇ ಚುನಾವಣೆಯ ಹಿಂದಿನ ರಾತ್ರಿ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿಬಿಟ್ಟಿದ್ದರು. ಕಾಂಗ್ರೆಸ್ ಕಂಗಾಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಎರಡನೇ ವರ್ಷವೂ ಬಂದಿತ್ತು. ಯಶೋದಾ ಮತ್ತು ದೇವರಮನಿ ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಬಿಜೆಪಿ, ಒಂದು ಕಾಂಗ್ರೆಸ್ ಪಾಲಾಗಿತ್ತು.
ಮೂರನೇ ವರ್ಷದ ಮೇಯರ್ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪೈಪೋಟಿ ನೀಡುವ ಪ್ರಯತ್ನ ಮಾಡಿದರೂ ಸ್ಥಾನಬಲ ಕಡಿಮೆಯಾಗಿತ್ತು.
ವಿಧಾನ ಪರಿಷತ್ ಸದಸ್ಯರಲ್ಲಿ ಕೆಲವರ ಅವಧಿಯೂ ಮುಗಿದಿತ್ತು. ಹಾಗಾಗಿ ದೊಡ್ಡ ರಾಜಕೀಯ ಸ್ಥಿತ್ಯಂತರವಾಗಿರಲಿಲ್ಲ. ಇದೀಗ ಶ್ರೀನಿವಾಸ್ ಮತ್ತು ಶ್ವೇತಾ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವ ಮೂಲಕ ಮತ್ತೆ ರಾಜಕೀಯ ಜಿದ್ದು ಏರ್ಪಡಲು ಕಾರಣರಾಗಿದ್ದಾರೆ.
‘ಪಕ್ಷಕ್ಕೆ ದ್ರೋಹ ಬಗೆದವರಿಗೆ ಪಾಠ’
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಹೋಗಿರುವ ಜೆ.ಎನ್. ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ವೇತಾ ಶ್ರೀನಿವಾಸ್‌ಗೆ ಅವರ ವಾರ್ಡ್‌ಗಳ ಜನರೇ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಈ ಎರಡೂ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ತಿಳಿಸಿದ್ದಾರೆ.
ಮೊದಲ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಹಣ ತೆಗೆದುಕೊಂಡು ಗೈರಾಗಿ ಮೋಸ ಮಾಡಿದ್ದರು. ಈಗ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅಸಮಾಧಾನವಿದೆ. ನಮ್ಮ ಅಭ್ಯರ್ಥಿಗಳು ಯಾರು ಎಂಬುದನ್ನು ಮೇ 5ಕ್ಕೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ಅಂತಿಮಗೊಳ್ಳಲಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಬಿಜೆಪಿಯ ಗೆಲುವು ಖಚಿತ’
ಈ ಎರಡು ವಾರ್ಡ್‌ಗಳಲ್ಲಿ ಎರಡು ರಾಜಕಾಲುವೆಗಳು ಹರಿದು ಹೋಗಿವೆ. ಸಣ್ಣ ಮಳೆ ಬಂದರೂ ತುಂಬಿಕೊಳ್ಳುತ್ತವೆ. ಅವುಗಳನ್ನು ಸರಿಪಡಿಸಬೇಕು ಎಂದು ಅನೇಕ ವರ್ಷಗಳ ಬೇಡಿಕೆ ಇಲ್ಲಿಯ ಜನರದ್ದಾಗಿತ್ತು. ಅದೀಗ ನೆರವೇರುತ್ತಿದೆ. ಜತೆಗೆ ಶ್ರೀನಿವಾಸ್ ಅಲ್ಲಿನ ಜನರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಹಿಂದೆ ಬರಗಾಲ ಬಂದಾಗ ವೈಯಕ್ತಿಕ ಖರ್ಚಿನಲ್ಲಿ ಸುಮಾರು 30 ಬೋರ್‌ವೆಲ್ ಕೊರೆಸಿ ನೀರು ನೀಡಿದ್ದರು. ಇದೆಲ್ಲ ಕಾರಣದಿಂದ ಬಿಜೆಪಿಯ ಗೆಲುವು ಖಚಿತ ಮಾಜಿ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಬಿಜೆಪಿಯ ಮಂಡಲ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಎಲ್ಲ ಸೇರಿ ಚರ್ಚೆ ಮಾಡಿ ಚುನಾವಣೆಯನ್ನು ಎದುರಿಸಲು ಸಿದ್ಧತೆಯ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
‘ಕಾಂಗ್ರೆಸ್ ಬಿಡಲು ಕೆಲವು ಪಾಲಿಕೆ ಸದಸ್ಯರು ಕಾರಣ’
‘ಈ ಬಾರಿ ಪಾಲಿಕೆಯಲ್ಲಿ ಮೊದಲ ಮೇಯರ್ ಚುನಾವಣೆಯಲ್ಲಿ ನನಗೆ ಮಾನ್ಯತೆ ನೀಡಲಿಲ್ಲ. ಹಾಗಾಗಿ ಅಸಮಾಧಾನದಿಂದ ಗೈರಾಗಬೇಕಾಯಿತು. ಆ ಬಳಿಕ ಕಾಂಗ್ರೆಸ್‌ನ ಕೆಲವು ಸದಸ್ಯರು ನನ್ನ ವಿರುದ್ಧ ಪಿತೂರಿ ಮಾಡಿದರು. ಆಕಡೆಯೂ ಅಲ್ಲ, ಈ ಕಡೆಯೂ ಅಲ್ಲ ಎಂಬಂತೆ ಇಟ್ಟರು. ರಾಜಕಾಲುವೆ ಕಾಮಗಾರಿಗೆ ನಾನೇ ಓಡಾಡಿ ಅನುದಾನ ತಂದರೂ ಅದಕ್ಕೆ ಕೆಲವರು ಅಡ್ಡಗಾಲು ಹಾಕಲು ನೋಡಿದರು. ಕೆಲವೇ ಕೆಲವರ ಮೋಸದಿಂದಾಗಿ ನಾನು ಪಕ್ಷ ಬಿಡುವುದು ಅನಿವಾರ್ಯವಾಯಿತು’ ಎಂದು ಜೆ.ಎನ್. ಶ್ರೀನಿವಾಸ್ ಪ್ರತಿಕ್ರಿಯಿಸಿದರು.
‘ನಾನು ಮನುಷ್ಯತ್ವಕ್ಕೆ ಬೆಲೆ ನೀಡುವವನು. ನನ್ನ ವಾರ್ಡ್‌ನ ಜನರ ಸಂಕಷ್ಟಗಳಿಗೆ ನಿರಂತರ ಸ್ಪಂದಿಸುತ್ತಾ ಬಂದಿದ್ದೇನೆ. ನನಗೆ ಪಾಲಿಕೆ ಸದಸ್ಯ ಸ್ಥಾನಕ್ಕಿಂತ ನನ್ನ ಜನರು ಮುಖ್ಯ. ಅವರು ನನ್ನ ಕೈ ಬಿಡುವುದಿಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.