ದಾವಣಗೆರೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಆಡಳಿತಾಧಿಕಾರಿ ಹಾಗೂ ಶಿಕ್ಷಕರ ಗಮನಕ್ಕೆ ಬಾರದೇ ಹಳ್ಳಿಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಬಾಲ್ಯ ವಿವಾಹಗಳನ್ನು ತಿಂಗಳ ಮೊದಲೇ ಗುರುತಿಸಿ ತಡೆಯಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ. ನಾಗಣ್ಣಗೌಡ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಾಲ್ಯ ವಿವಾಹ ತಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ನಿಗಾ ಇಟ್ಟಿದೆ. ತಳಹಂತದ ಸಿಬ್ಬಂದಿ, ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯಪ್ರವೃತ್ತರಾಗಬೇಕು. ತಾಲ್ಲೂಕು ಹಂತದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕಾಲಕಾಲಕ್ಕೆ ಸಭೆಗಳನ್ನು ನಡೆಸಬೇಕು’ ಎಂದರು.

‘ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕಂದಾಯ ಇಲಾಖೆಯೇ ಇದರ ನೇತೃತ್ವವನ್ನು ವಹಿಸಲಿದೆ. ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕುವ ವ್ಯವಸ್ಥೆಯೊಂದನ್ನು ರೂಪಿಸುತ್ತೇವೆ. ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಅರಿವು ಮೂಡಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭರವಸೆ ನೀಡಿದರು.

‘ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹಂತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ನಿಗಾ ಇಡುವ ವ್ಯವಸ್ಥೆ ಆಗಬೇಕಿದೆ. ವಿದ್ಯಾರ್ಥಿನಿಯರು ಶಾಲೆ–ಕಾಲೇಜುಗಳಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ. ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳುವ ನಿಟ್ಟಿನಲ್ಲಿಯೂ ಆಲೋಚಿಸಬೇಕಿದೆ’ ಎಂದು ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಸಲಹೆ ನೀಡಿದರು.

‘ಬಾಲ್ಯ ವಿವಾಹ ತಡೆಗಟ್ಟಿದ ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ಕಡ್ಡಾಯ. ದಾವಣಗೆರೆ ತಾಲ್ಲೂಕಿನಲ್ಲಿ ತಡೆದ 20 ಬಾಲ್ಯ ವಿವಾಹಗಳಿಗೆ ತಡೆಯಾಜ್ಞೆ ತಂದಿಲ್ಲ. ಮೇಲ್ನೋಟಕ್ಕೆ ಈ ವಿವಾಹಗಳನ್ನು ತಡೆದಂತೆ ಕಂಡರೂ ಗೋಪ್ಯವಾಗಿ ಮದುವೆ ಕಾರ್ಯ ನಡೆಯುವ ಸಾಧ್ಯತೆ ಹೆಚ್ಚು. ಮಕ್ಕಳ ರಕ್ಷಣೆಗೆ ಸಂಬಂಧಿಸಿದ 10 ಇಲಾಖೆಗಳು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಆಯೋಗದ ಸದಸ್ಯರಾದ ವೆಂಕಟೇಶ್ ಮತ್ತು ಅಪರ್ಣಾ ಕೊಳ್ಳಾ ಸೂಚಿಸಿದರು.

‘ಮಕ್ಕಳ ಸಹಾಯವಾಣಿಗೆ ಸಂಬಂಧಿಸಿದ ಮಾಹಿತಿ ಸರ್ಕಾರಿ ಕಟ್ಟಡಗಳ ಮೇಲೆ ಕಂಡಿಲ್ಲ. ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣಾ ನೀತಿ ರೂಪಿಸಬೇಕು’ ಎಂದು ಆಯೋಗದ ಸದಸ್ಯೆ ಮಂಜು ಕಿವಿಮಾತು ಹೇಳಿದರು.

ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಜರಿದ್ದರು.

ಒಬ್ಬ ರೋಗಿಯ ವೆಚ್ಚ ₹ 130!

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಯೊಬ್ಬರಿಗೆ ವರ್ಷದಲ್ಲಿ ತಗುಲಿದ ಸರಾಸರಿ ವೆಚ್ಚ ₹ 130. ಕಡಿಮೆ ದರದಲ್ಲಿ ಸಮರ್ಪಕ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದಕ್ಕೆ ಇದೊಂದು ನಿದರ್ಶನ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾಹಿತಿ ನೀಡಿದರು. ‘2024ರಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ 6.5 ಲಕ್ಷಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇದಕ್ಕೆ ಸರ್ಕಾರ ₹ 10 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ರೋಗಿಯೊಬ್ಬರ ಚಿಕಿತ್ಸೆಗೆ ತಗುಲಿದ ಸರಾಸರಿ ವೆಚ್ಚ ₹ 130 ಮಾತ್ರ. ₹ 4 ಕೋಟಿ ಮೊತ್ತದ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ’ ಎಂದು ಸಭೆಗೆ ವಿವರಣೆ ನೀಡಿದರು.

5513 ಬಾಲ ಗರ್ಭಿಣಿಯರು!

2020ರಿಂದ 2024ರವರೆಗೆ ಜಿಲ್ಲೆಯಲ್ಲಿ 5513 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಆರೋಗ್ಯ ಇಲಾಖೆ ದಾಖಲಿಸಿಕೊಂಡ ಈ ಮಾಹಿತಿಯನ್ನು ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಬಹಿರಂಗಪಡಿಸಿದರು. ‘ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ. ಐದು ವರ್ಷಗಳ ಮಾಹಿತಿ ಆತಂಕಕಾರಿಯಾಗಿದೆ. ಸಮಾಜದ ಬಗ್ಗೆ ವೈದ್ಯರಿಗೂ ಕಾಳಜಿ ಇರಬೇಕು. ಬಾಲ ಗರ್ಭಿಣಿಯರಿಗೆ ಸಂಬಂಧಿಸಿದ ಮಾಹಿತಿಯನ್ನು ವೈದ್ಯರು ತಕ್ಷಣ ಪೊಲೀಸರಿಗೆ ನೀಡಬೇಕು’ ಎಂದು ಆರ್ಸಿಎಚ್ ಅಧಿಕಾರಿ ರೇಣುಕಾರಾಧ್ಯ ಅವರಿಗೆ ಸೂಚನೆ ನೀಡಿದರು. ‘ನಿರ್ಲಕ್ಷ್ಯ ತೋರುವ ಹಾಗೂ ವಿಳಂಬ ನೀತಿ ಅನುಸರಿಸುವ ವೈದ್ಯರನ್ನು ಅಮಾನತು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.

ಬಾಲ ಗರ್ಭಿಣಿಯರಿಗೆ ಸಂಬಂಧಿಸಿದ ಮಾಹಿತಿಯನ್ನು ಆರೋಗ್ಯ ಇಲಾಖೆ ಸಕಾಲಕ್ಕೆ ನೀಡುತ್ತಿಲ್ಲ. 3 ತಿಂಗಳಿಗಿಂತ ಹೆಚ್ಚು ವಿಳಂಬ ಮಾಡುತ್ತಿದ್ದು ಕಾನೂನು ಕ್ರಮಕ್ಕೆ ತೊಡಕಾಗುತ್ತಿದೆ
- ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬಾಲ್ಯ ವಿವಾಹ ತಡೆಗೆ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಹೊಣೆಗಾರಿಕೆ ನಿಗದಿಪಡಿಸಲಾಗುತ್ತಿದೆ
-ಗಿಟ್ಟೆ ಮಾಧವ ವಿಠ್ಠಲರಾವ್, ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.