ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ತಲೆ ಹುಳು ಬಾಧೆ; ನಲುಗಿದ ತೆಂಗಿನ ತೋಟಗಳು

ಮರದಿಂದ ಮರಕ್ಕೆ ಹಬ್ಬುತ್ತಿದೆ ರೋಗ; ಆರ್ಥಿಕ ಸಂಕಷ್ಟದಲ್ಲಿ ರೈತರು
ನಾಗೇಂದ್ರಪ್ಪ ವಿ.
Published 4 ಮಾರ್ಚ್ 2024, 16:32 IST
Last Updated 4 ಮಾರ್ಚ್ 2024, 16:32 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ‘ಕಲ್ಪವೃಕ್ಷ’ ಎಂದೇ ಹೆಸರಾಗಿರುವ ತೆಂಗಿನ ಮರಗಳು ಕಪ್ಪುತಲೆ ಹುಳು ಬಾಧೆ ಯಿಂದ ನಲುಗಿದ್ದು, ಇಳುವರಿ ಕಡಿಮೆ ಯಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

ಹರಿಹರ ತಾಲ್ಲೂಕಿನಲ್ಲಿ 2,400 ಎಕರೆಗೂ ಅಧಿಕ ಪ್ರದೇಶದಲ್ಲಿ ತೆಂಗಿನ ತೋಟಗಳಿವೆ. ತೆಂಗು ದೀರ್ಘಾವಧಿ ಬೆಳೆಯಾಗಿದ್ದು, ಸಾರ್ವಕಾಲಿಕವಾಗಿ ಎಲ್ಲ ಕಾರ್ಯಕ್ರಮಗಳಿಗೂ ಬಳಕೆಯಾಗುತ್ತದೆ.

ಆದರೆ, ದಶಕಗಳಿಂದ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳು ಬಾಧೆಯು ತೋಟದಿಂದ ತೋಟಕ್ಕೆ, ಮರದಿಂದ ಮರಕ್ಕೆ ಹಬ್ಬುತ್ತಲೇ ಇದೆ. ಇದನ್ನು ರೈತರು ನುಸಿ ರೋಗ ಎಂದು ಕರೆಯುತ್ತಾರೆ.

ಬಾಧೆ ಹೆಚ್ಚಾದಂತೆ ತೋಟದಲ್ಲಿ ತೆಂಗಿನ ಮರಗಳನ್ನು ರೈತರು ಕಡಿಯಲು ಆರಂಭಿಸಿದ್ದರಿಂದ ತೆಂಗಿನ ತೋಟಗಳು ಕಡಿಮೆ ಆಗುತ್ತಲೇ ಇವೆ. ಹೀಗೇ ಮುಂದುವರಿದರೆ ಮುಂದೊಂದು ದಿನ ನಮಗೆ ಸ್ಥಳೀಯವಾಗಿ ತೆಂಗಿನ ಕಾಯಿ ಸಿಗದಿರುವ ಸ್ಥಿತಿ ಬಂದರೂ ಬರಬಹುದು’ ಎಂದು ರೈತರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಇದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ ಎನ್ನುತ್ತಾರೆ ಕೊಕ್ಕನೂರಿನ ರೈತ ಗಿಂಡೇರ ಅಂಜಿನಪ್ಪ.

ಪರೋಪಜೀವಿ ಹುಳುಗಳನ್ನು ಬಿಡಿ

ಜೈವಿಕ ವಿಧಾನದಿಂದ ರೋಗ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಪ್ಪು ತಲೆ ಹುಳುಗಳನ್ನು ತಿಂದು ಬದುಕುವಂತಹ ಪರೋಪಜೀವಿ ಹುಳುಗಳನ್ನು ಆವಿಷ್ಕರಿಸಲಾಗಿದೆ. ಕಪ್ಪು ತಲೆ ಹುಳು ಬಾಧಿತ ತೆಂಗಿನ ಮರಗಳಿಗೆ ಪ್ರತಿ ಗಿಡಕ್ಕೆ 20 ಪರೋಪಜೀವಿ (ಗೋನಿಯೋಜಸ್ ನೆಫಾಂಡಿಟಿಸ್) ಹುಳುಗಳನ್ನು ಬಿಡಬೇಕು. ಒಂದು ಮರಕ್ಕೆ ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ ನಾಲ್ಕು ಬಾರಿ ಬಿಡಬೇಕು. ಪರೋಪಜೀವಿ ಹುಳುಗಳು ಕಪ್ಪು ತಲೆ ಹುಳುಗಳನ್ನು ತಿಂದು ಹಾಕುತ್ತವೆ. ಆಗ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಹರಿಹರ ಎಚ್.ಎನ್. ಶಶಿಧರಸ್ವಾಮಿ ಸಲಹೆ ನೀಡಿದರು.

‘ಪ್ರತಿ ಮರಕ್ಕೆ 1 ಕೆ.ಜಿ. ಬೇವಿನ ಹಿಂಡಿಯನ್ನು ಕೊಟ್ಟಿಗೆ ಗೊಬ್ಬರದಲ್ಲಿ ಬೆರೆಸಿ ಬೇರಿಗೆ ಹಾಕಬೇಕು. ಜೈವಿಕ ಕೀಟನಾಶಕ ಸಿಂಪರಣೆ ಮಾಡಬೇಕು. ದೊಡ್ಡ ಮರಗಳಿಗೆ ಸಿಂಪರಣೆ ಕಷ್ಟವಾದಲ್ಲಿ ಬೆಳ್ಳುಳ್ಳಿ ಆಧಾರಿತ ಔಷಧಿಯನ್ನು ಬೇರಿಗೆ ನೀಡಬೇಕು. ಇನ್ನು ಅನೇಕ ವಿಧಾನಗಳಿವೆ. ರೈತರು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಔಷಧೋಪಚಾರ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT