ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೊರೊನಾ 33 ದಿನಗಳಲ್ಲಿ 8000 ಪ್ರಕರಣ !

2 ಸಾವಿರ ತಲುಪಲು ಐದು ತಿಂಗಳು * ಅಲ್ಲಿಂದ 10 ಸಾವಿರ ತಲುಪಲು ಐದು ವಾರ
Last Updated 6 ಸೆಪ್ಟೆಂಬರ್ 2020, 3:06 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಎರಡು ಸಾವಿರ ತಲುಪಲು ಐದು ತಿಂಗಳು ತೆಗೆದುಕೊಂಡಿತ್ತು. ಮುಂದಿನ ಐದು ವಾರಗಳ ಒಳಗೆ 10 ಸಾವಿರಕ್ಕೆ ತಲುಪಿದೆ. ರ‍್ಯಾಪಿಡ್‌ ಆಂಟಿಜನ್ ಟೆಸ್ಟ್‌ ಜಾಸ್ತಿ ಮಾಡುತ್ತಿರುವುದೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಲು ಕಾರಣ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ತಲಾ ಎರಡು ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ಮೇ ಮತ್ತು ಜೂನ್‌ನಲ್ಲಿ ಕ್ರಮವಾಗಿ 152 ಮತ್ತು 153 ಕಂಡು ಬಂದಿದ್ದವು. ಮೊದಲ ನಾಲ್ಕು ತಿಂಗಳಲ್ಲಿ ಒಟ್ಟು 309 ಪ್ರಕರಣಗಳಿಗೆ ಸೀಮಿತವಾಗಿತ್ತು. ಜುಲೈಯಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾದವು. ಆದರೂ ಒಂದು ಸಾವಿರದ ಗಡಿ ತಲುಪುವ ಹೊತ್ತಿಗೆ ಜುಲೈ 22 ಆಗಿತ್ತು. 9 ದಿನಗಳ ನಂತರ ಅಂದರೆ ಜುಲೈ 31ರಂದು 2 ಸಾವಿರದ ಗಡಿ ತಲುಪಿತ್ತು.

ಆಗಸ್ಟ್‌ ಆರಂಭಗೊಳ್ಳುತ್ತಿದ್ದಂತೆ ಕೊರೊನಾ ಪ್ರಕರಣಗಳು ಒಂದೇ ಸಮನೆ ಏರತೊಡಗಿದವು. ಆರು ದಿನಗಳಲ್ಲಿ 3 ಸಾವಿರ, ಮತ್ತೆ ಆರು ದಿನಕ್ಕೆ ನಾಲ್ಕು ಸಾವಿರ ಗಡಿ ದಾಟಿತು. ಸೆ.15ಕ್ಕೆ ಐದು ಸಾವಿರ ಮೀರಿತು. ಮುಂದಿನ ಹದಿನೆಂಟೇ ದಿನಗಳಲ್ಲಿ 10 ಸಾವಿರಕ್ಕೆ ತಲುಪಿತು.

‘ಜನರು ಎಚ್ಚರಿಕೆ ವಹಿಸುವ ಬಲದು ಸೋಂಕು ಇಟ್ಟುಕೊಂಡೇ ಓಡಾಡುವುದು ಒಂದು ಕಡೆ ಜಾಸ್ತಿಯಾಗಿದೆ. ಇನ್ನೊಂದು ಕಡೆ ನಾವು ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯನ್ನೂ ಜಾಸ್ತಿ ಮಾಡಿದ್ದೇವೆ. ಹಾಗಾಗಿ ಪ್ರಕರಣಗಳು ಜಾಸ್ತಿ ಕಂಡು ಬಂದಿವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೋಂಕಿನಿಂದ ಗುಣಮುಖರಾದ ಜನಪ್ರತಿನಿಧಿಗಳು, ಅಧಿಕಾರಿಗಳು, ವೃದ್ಧರು ಮುಂತಾದವರನ್ನು ಮಾತನಾಡಿಸಿ ಸಂದೇಶವನ್ನು ಜನರಿಗೆ ಕಳುಹಿಸುತ್ತಿದ್ದೇವೆ. ಕೊರೊನಾ ಬಂದರೆ ಏನೂ ಆಗುವುದಿಲ್ಲ. ಗುಣಮುಖರಾಗುತ್ತಾರೆ. ಯಾರಿಗಾದರೂ ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದು ಮನೆಗೆ ಹೋಗಬಹುದು. ಸಂಕೋಚಪಟ್ಟು ಮನೆಯಲ್ಲಿ ಕುಳಿತರೆ ಅಪಾಯ ಜಾಸ್ತಿ’ ಎಂದು ಎಚ್ಚರಿಸಿದರು.

‘ಎಲ್ಲಿ ಜೀವಾಪಾಯ ಜಾಸ್ತಿ ಉಂಟಾಗುತ್ತಿದೆ ಎಂದು ಕಂಡು ಹಿಡಿಯುತ್ತಿದ್ದೇವೆ. ಆ ಪ್ರದೇಶವನ್ನು ಡೆತ್‌ ಪಾಕೆಟ್‌ ಎಂದು ಗುರುತಿಸಿ ಆ ಪ್ರದೇಶದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಇದೆಲ್ಲ ಕಾರಣದಿಂದ ಸೋಂಕು ಪ್ರಕರಣ ಜಾಸ್ತಿ ಕಂಡು ಬರುತ್ತಿದೆ. ನಮ್ಮ ಜಿಲ್ಲೆಗೆ ಸೀಮಿತವಲ್ಲ. ಎಲ್ಲ ಜಿಲ್ಲೆಗಳಲ್ಲಿ ಇದೇ ಮಾದರಿ ಇರುವುದರಿಂದ ಎಲ್ಲ ಕಡೆ ಪ್ರಕರಣಗಳ ಪತ್ತೆ ಅಧಿಕಗೊಂಡಿದೆ’ ಎಂದರು.

‘ಕ್ಷಿಪ್ರ ಪ್ರತಿಜನಕ ಪರೀಕ್ಷೆ (ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌) ಆರಂಭಗೊಂಡ ನಂತರ 20ರಿಂದ 30 ನಿಮಿಷಗಳ ಒಳಗೆ ಫಲಿತಾಂಶ ಬರತೊಡಗಿತು. ಹಾಗಾಗಿ ಅಂದಂದು ನಡೆದ ಪರೀಕ್ಷೆಗಳ ವರದಿ ಅಂದೇ ಕೈ ಸೇರತೊಡಗಿತು. ಅದಕ್ಕಿಂತ ಮೊದಲು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮಾತ್ರ ಮಾಡಲಾಗುತ್ತಿತ್ತು. ಒಮ್ಮೆ ಪರೀಕ್ಷೆ ಮಾಡಿಸಿದರೆ ವರದಿ ಬರುವ ಹೊತ್ತಿಗೆ ಮೂರ್ನಾಲ್ಕು ದಿನಗಳು ಕಳೆಯುತ್ತಿದ್ದವು. ಪರೀಕ್ಷೆಗಳೂ ಕಡಿಮೆ ನಡೆಯುತ್ತಿದ್ದವು. ಇದರಿಂದ ಫಲಿತಾಂಶ ಕಡಿಮೆ ಇರುತ್ತಿತ್ತು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದರು.

‘ದಿನಕ್ಕೆ ಎಷ್ಟು ಪ್ರಕರಣಗಳು ಬರುತ್ತವೋ ಅದರ ಹತ್ತು ಪಟ್ಟು ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮ ಇದೆ. ನಾವು ಶೇ 70ರಷ್ಟು ಗುರಿ ಸಾಧಿಸುತ್ತಿದ್ದೇವೆ. ಆರ್‌ಎಟಿಯಲ್ಲಿ ಮೂಗಿನ ದ್ರವ ಪರೀಕ್ಷೆ ನಡೆಸಲಾಗುತ್ತದೆ. ಸೋಂಕಿನ ಲಕ್ಷಣ ಇದ್ದೂ ನೆಗೆಟಿವ್‌ ಬಂದರೆ ಆಗ ವಿಟಿಎಂ (ವೈರಸಲ್‌ ಟ್ರಾನ್ಸ್‌ಪೋರ್ಟೇಶನ್‌ ಮೀಡಿಯ) ಪರೀಕ್ಷೆ ಅಂದರೆ ಗಂಟಲು ದ್ರವ ಸಂಗ್ರಹ ಮಾಡುತ್ತೇವೆ. ಅದು ಆರ್‌ಟಿಪಿಸಿಆರ್‌ ಮೂಲಕ ಪರೀಕ್ಷೆಗೆ ಒಳಪಡುತ್ತದೆ.ಈಗ ಬರುತ್ತಿರುವ ಪ್ರಕರಣಗಳ ಪ್ರಮಾಣವನ್ನು ಈ ತಿಂಗಳ ಅಂತ್ಯಕ್ಕೆ ಶೇ 75ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ರಾಘವನ್‌ ವಿವರಿಸಿದರು.

ಕೊರೊನಾ ಪ್ರಮಾಣ

ಮಾರ್ಚ್‌ 26: ಮೊದಲ ಪ್ರಕರಣ

ಜುಲೈ 22: 1 ಸಾವಿರ

ಜುಲೈ 31: 2 ಸಾವಿರ

ಆಗಸ್ಟ್‌ 6: 3 ಸಾವಿರ

ಆಗಸ್ಟ್‌ 12: 4 ಸಾವಿರ

ಆಗಸ್ಟ್‌ 15: 5 ಸಾವಿರ

ಆಗಸ್ಟ್‌ 20: 6 ಸಾವಿರ

ಆಗಸ್ಟ್‌ 23: 7 ಸಾವಿರ

ಆಗಸ್ಟ್‌ 27: 8 ಸಾವಿರ

ಆಗಸ್ಟ್‌ 30: 9 ಸಾವಿರ

ಸೆಪ್ಟೆಂಬರ್‌ 2: 10 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT