ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕಾಮಗಾರಿಗೆ ₹ 1.25 ಕೋಟಿ

ಎಸ್‌ಎಸ್‌ ಆಸ್ಪತ್ರೆ ಜಮೀನಿನಲ್ಲೂ ರಸ್ತೆಯ ಜಾಗ ಅಕ್ರಮ: ಶಿವಕುಮಾರ್‌
Last Updated 10 ಡಿಸೆಂಬರ್ 2020, 5:34 IST
ಅಕ್ಷರ ಗಾತ್ರ

ದಾವಣಗೆರೆ: ಧೂಡಾದಲ್ಲಿ ಹಿಂದೆ ನಡೆದಿರುವ ಕೆಲಸಗಳಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಂದು ನಿರಂತರ ಸಾರುತ್ತಿರುವ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಕಾಮಗಾರಿಯೇ ನಡೆಯದೆ ₹ 1.25 ಕೋಟಿ ಪಾವತಿಯಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಸರ್‌ ಮಿರ್ಜಾ ಇಸ್ಮಾಯಿಲ್‌ ನಗರದಲ್ಲಿ (ರಾಮಕೃಷ್ಣ ಹೆಗಡೆ ನಗರ) ಹಾದು ಹೋಗಿರುವ ವರ್ತುಲ ರಸ್ತೆಯಲ್ಲಿ ಅನಧಿಕೃತವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವವರಿಗೆ ಪುನರ್ವಸತಿ ಕಲ್ಪಿಸಲು 2017ರ ಮೇ 3ರಂದು ಧೂಡಾ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದಕ್ಕೆ ₹ 1.5 ಕೋಟಿ ಬಿಡುಗಡೆಗೊಳಿಸಲು ತೀರ್ಮಾನಿಸ
ಲಾಗಿತ್ತು.

ಬಳಿಕ 2017ರ ಅ.31ರಂದು ನಿರ್ಮಿತಿ ಕೇಂದ್ರಕ್ಕೆ ₹ 1.25 ಕೋಟಿ ಬಿಡುಗಡೆಯಾಗಿತ್ತು. ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ, ಅದನ್ನು ಪಾಲಿಕೆಗೆ ಹಸ್ತಾಂತರಿಸಿರುವ ಬಗ್ಗೆ ವರದಿ ನೀಡುವಂತೆ ನಿರ್ಮಿತಿ ಕೇಂದ್ರಕ್ಕೆ ಪ್ರಾಧಿಕಾರ ಸೂಚನೆ ನೀಡಿದರೂ ಯಾವುದೇ ಮಾಹಿತಿ ನೀಡಿಲ್ಲ. ಆ ಪ್ರದೇಶದಲ್ಲಿ ಹೋಗಿ ನೋಡಿದರೆ ಅನಧಿಕೃತ ಗುಡಿಸಲುಗಳು ಹಾಗೇ ಇವೆ. ಪುನರ್ವಸತಿ ಕಲ್ಪಿಸಿದ್ದೆಲ್ಲಿ ಎಂಬುದೇ ಕಾಣುತ್ತಿಲ್ಲ. ಕಾಮಗಾರಿಯೇ ನಡೆಯದೆ ಹಣ ಪಾವತಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಇಲಾಖೆ ತನಿಖೆ ಸಹಿತ ಎಲ್ಲ ರೀತಿಯ ತನಿಖೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು.

‘ನಾನು ಅಧ್ಯಕ್ಷನಾದ ಮೇಲೆ ಬಾತಿ ಕೆರೆ ಬಳಿ ಅಕ್ರಮವಾಗಿದ್ದ 4 ಎಕರೆಯನ್ನು ಧೂಡಾಕ್ಕೆ ಕೊಡಿಸಿದ್ದೇನೆ. ಶಾಮನೂರು ಕುಟುಂಬದ ಸಂಬಂಧಿ ಆಗಿರುವ ಕಕ್ಕರಗೊಳ್ಳದ ವೀರೇಶ್‌ ಪಾಟೀಲ್‌ ಕುಂದವಾಡ ಕೆರೆ ಬಳಿ ಎರಡು ಎಕರೆ ಭೂಮಿಯನ್ನು ಅಕ್ರಮ ಮಾಡಿದ್ದನ್ನು ಮತ್ತೆ ಸಿಗುವಂತೆ ಮಾಡಿದ್ದೇನೆ. ₹ 50 ಕೋಟಿ ಆಸ್ತಿ ತಂದಿದ್ದೇನೆ. ಅಕ್ರಮವಾಗಿರುವ ಎಲ್ಲ ಆಸ್ತಿ ವಾಪಸ್‌ ತಂದರೆ ₹ 250 ಕೋಟಿಯಿಂದ ₹ 300 ಕೋಟಿ ಆಸ್ತಿ ಧೂಡಾಕ್ಕೆ ಸಿಗಲಿದೆ’ ಎಂದು ಹೇಳಿದರು.

‘ಎಸ್‌ಎಸ್‌ ಮಾಲ್‌ನಲ್ಲಿ ಸೆಟ್‌ಬ್ಯಾಕ್‌ ಬಿಟ್ಟಿಲ್ಲ ಎಂದು ಮಹಾದೇವ ಎಂಬವರು ಹೋರಾಟ ಮಾಡಿದ್ದರು. ಸೆಟ್‌ಬ್ಯಾಕ್‌ ಬಿಡಲು ಕೋರ್ಟ್ ಆದೇಶ ಕೂಡ ಆಗಿತ್ತು. ನಮ್ಮ ಹೋರಾಟ ಸೆಟ್‌ಬ್ಯಾಕ್‌ಗೆ ಅಲ್ಲ. ಅಲ್ಲಿ ಸರ್ಕಾರಿ ರಸ್ತೆಗಳಿದ್ದವು. ಅವುಗಳನ್ನು ಒಳಗೆ ಹಾಕಿಕೊಂಡಿದ್ದಾರೆ. ರಸ್ತೆ ಇರುವುದನ್ನು ಆಗ ಧೂಡಾ, ಪಾಲಿಕೆಯ ಪತ್ರಗಳು ದೃಢಪಡಿಸುತ್ತವೆ. ಜತೆಗೆ ಎಸ್.ಎಸ್‌. ಗಣೇಶ್‌ ಅವರು ಸಲ್ಲಿಸಿರುವ ಅರ್ಜಿಯಲ್ಲೂ ಈ ಬಗ್ಗೆ ಉಲ್ಲೇಖ ಇದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ–ಹರಿಹರ ರಾಜು ರೋಕಡೆ, ಜಯರುದ್ರೇಶ್‌, ಸೌಭಾಗ್ಯ ಮುಕುಂದ ಉಪಸ್ಥಿತರಿದ್ದರು.

ಅಭಿವೃದ್ಧಿ ಹೆಸರಲ್ಲಿ ಲೂಟಿ
ದಾವಣಗೆರೆ: ‘ಎಸ್‌.ಎಸ್‌. ಮಲ್ಲಿಕಾರ್ಜುನ ಅವಧಿ ಅಭಿವೃದ್ಧಿ ಪರ್ವ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಎಷ್ಟು ಲೂಟಿ ಹೊಡೆದಿದ್ದಾರೆ ಎಂಬ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಸಹಿತ ಕಾಂಗ್ರೆಸ್‌ ನಾಯಕರು ಬರಲಿ. ಪುನರ್ವಸತಿ ವ್ಯವಸ್ಥೆ ಎಲ್ಲಿ ಆಗಿದೆ ಎಂದು ತೋರಿಸಲಿ’ ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಸವಾಲು ಎಸೆದರು.

ಹಿಂದೆ ಧೂಡಾ ಅಧ್ಯಕ್ಷರಾಗಿದ್ದ ಪೈಲ್ವಾನ್‌ ಮಾಲ್ತೇಶ್‌, ಶೌಕತ್‌ ಅಲಿ, ಅಯೂಬ್‌ ಪೈಲ್ವಾನ್‌, ರಾಮಚಂದ್ರಪ್ಪ ಏನು ಅಕ್ರಮ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆ ಇದೆ. ಧೂಡಾ ಕಚೇರಿಗೆ ಬರಲಿ, ನಾನು ದಾಖಲಾತಿ ತೋರಿಸುತ್ತೇನೆ. ಅದು ಸುಳ್ಳಾದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅವರು ಅಕ್ರಮ ಮಾಡಿದ್ದು ನಿಜ ಆಗಿದ್ದರೆ ಅವರು ಅದನ್ನು ಸಭ್ಯತೆಯಿಂದ ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ತಿಳಿಸಿದರು. ‘ಜೀವ ಬೆದರಿಕೆಗಳಿಗೆ ಹೆದರುವುದಿಲ್ಲ. ಎಸ್‌ಪಿಗೆ ದೂರು ನೀಡಿದ್ದೇನೆ. ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ’ ಎಂದರು.

ಎಸ್‌ಎಸ್ ಆಸ್ಪತ್ರೆ ಜಮೀನಲ್ಲೂ ಎರಡು ರಸ್ತೆ

ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ ನಿರ್ಮಿಸಿದ ಪ್ರದೇಶದಲ್ಲಿ ಕೂಡ 60 ಅಡಿಯ ಎರಡು ರಸ್ತೆಗಳಿವೆ. ಅವುಗಳನ್ನು ಬಿಟ್ಟಿಲ್ಲ. ಅವು ಸುಮಾರು 2 ಲಕ್ಷ ಅಡಿ ಆಗುತ್ತದೆ. ಸಿಡಿಪಿ ಯೋಜನೆಯಂತೆ ಅಲ್ಲಿರುವ ರಸ್ತೆಗಳನ್ನು ಬಿಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಧೂಡಾ ಅಧ್ಯಕ್ಷರು ತಿಳಿಸಿದರು.

ಒಂದೇ ಕುಟುಂಬದ ಮೂವರಿಗೆ ಸೈಟ್‌

‘ಮನೆ, ನಿವೇಶನ ಇಲ್ಲದವರಿಗೆ ನೀಡಲು ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಸೈಟ್‌ಗಳನ್ನು ನಿರ್ಮಿಸಲಾಗಿತ್ತು. ದೇವರಮನೆ ಶಿವಕುಮಾರ್‌ ಕೋಟ್ಯಧಿಪತಿ ಎಂಬುದು ಎಲ್ಲರಿಗೂ ಗೊತ್ತು. ಆ ಕುಟುಂಬದ ಮೂವರಿಗೆ ಅಂದರೆ ದೇವರಮನೆ ಶಿವಕುಮಾರ್‌, ದೇವರಮನೆ ಮುರುಗೇಶ್‌, ದೇವರಮನೆ ಶಿವರಾಜ್‌ಗೆ ಸೈಟ್‌ ಮಂಜೂರಾಗಿವೆ. ಅದೂ ಅಕ್ಕಪಕ್ಕದಲ್ಲಿವೆ. ಅಂದರೆ ಯಾವ ರೀತಿಯಲ್ಲಿ ಲಾಟರಿ ಎತ್ತಿದ್ದಾರೆ’ ಎಂದು ರಾಜನಹಳ್ಳಿ ಶಿವಕುಮಾರ್‌ ಪ್ರಶ್ನಿಸಿದರು.

‘ಅವರಾಗಿಯೇ ಸೈಟ್‌ ವಾಪಸ್‌ ಮಾಡಲಿ. ಇಲ್ಲದೇ ಇದ್ದರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT