ಶುಕ್ರವಾರ, ಜೂನ್ 18, 2021
21 °C

ಕೊರೊನಾ ಕುದಿ; ಪರಿಕರಗಳ ದರ ಏರಿಕೆಯ ಬಿಸಿ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಾನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದೆ. ನಿಮಗೆ ರೆಮ್‌ಡಿಸಿವಿರ್‌ ಬೇಕೇ ಬೇಕು ಎಂದು ವೈದ್ಯರು ಹೇಳಿದರು. ಅದಕ್ಕಾಗಿ ಸಿ.ಜಿ. ಆಸ್ಪತ್ರೆಗೆ ಹೋಗಬೇಕಿತ್ತು. ಅಲ್ಲಿ ಬೆಡ್‌ ಸಿಗಲಿಲ್ಲ. ಇಲ್ಲಿನ ರಿಪೋರ್ಟ್‌ ನೋಡಿದ ಸಿ.ಜಿ. ಆಸ್ಪತ್ರೆಯ ವೈದ್ಯರು ನಿಮಗೆ ರೆಮ್‌ಡಿಸಿವಿರ್‌ ಬೇಕಾಗಿಲ್ಲ. ಎಲ್ಲ ನಾರ್ಮಲ್‌ ಇದೆ ಎಂದರು. ಯಾರನ್ನು ನಂಬಬೇಕು; ಯಾರನ್ನು ಬಿಡಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಕೊರೊನಾ ಸೋಂಕಿತರಾಗಿರುವ ವಿಜಯನಗರ ಬಡಾವಣೆಯ ಚಂದ್ರಶೇಖರ್‌ ನೋವು ತೋಡಿಕೊಂಡರು.

‘ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗೆ ಒಮ್ಮೆಲೆ ಬೇಡಿಕೆ ಬಂದಿರುವುದರಿಂದ ಅದರ ಅಧಿಕೃತ ದರ ಈಗ ₹ 800 ದಾಟಿದೆ. ಆದರೆ, ಔಷಧಾಲಯಗಳಲ್ಲಿ ಈ ದರಕ್ಕೆ ಸಿಗುತ್ತಿಲ್ಲ. ಖಾಸಗಿಯಾಗಿ ಕೆಲವರು ಈ ಇಂಜೆಕ್ಷನ್‌ ಒದಗಿಸುತ್ತಾರೆ. ₹ 2500ರಿಂದ
₹ 3000ದ ವರೆಗೆ ದರ ವಿಧಿಸುತ್ತಿದ್ದಾರೆ. ಇದೇ ಇಂಜೆಕ್ಷನ್‌ಗೆ ಬೆಂಗಳೂರಿನಲ್ಲಿ ₹ 5,000 ಇದೆ. ಇಲ್ಲಿ ಕಡಿಮೆಗೆ ಸಿಕ್ಕಿದೆ ಎಂದು ಹೇಳಿ ಸಮಾಧಾನಪಡಿಸುತ್ತಾರೆ’ ಎಂದು ರೆಮ್‌ಡಿಸಿವಿರ್‌ ಖರೀದಿಸಿದವರೊಬ್ಬರು ತಿಳಿಸಿದರು.

‘ಕೊರೊನಾ ಸೋಂಕಿತರಾಗಿರುವ ನನ್ನ ಅಮ್ಮನಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಯಾವುದಕ್ಕೂ ಮನೆಯಲ್ಲಿ ಒಂದು ಆಕ್ಸಿಮೀಟರ್‌ ಇಟ್ಟುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದರು. ಇಲ್ಲೇ ಪಕ್ಕದಲ್ಲಿ ಆಕ್ಸಿಮೀಟರ್‌ ತೆಗೆದುಕೊಳ್ಳಲು ಹೋದರೆ ₹ 2,800 ಹೇಳಿದರು. ಅಲ್ಲದೇ ಅದಕ್ಕೆ ಗ್ಯಾರಂಟಿ ಕೂಡ ಇಲ್ಲ. ಹಾಳಾದರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದರು. ಅದಕ್ಕಾಗಿ ಅಲ್ಲಿ ಖರೀದಿಸಲಿಲ್ಲ. ಆಮೇಲೆ ಸ್ನೇಹಿತರ ಸಹಾಯದಿಂದ ಬೇರೆ ಕಡೆ ₹ 1,900ಕ್ಕೆ ಆಕ್ಸಿಮೀಟರ್‌ ಸಿಕ್ಕಿತು. ಅದಕ್ಕೆ ಆರು ತಿಂಗಳು ಗ್ಯಾರಂಟಿ ಕೂಡ ಇದೆ’ ಎಂದು ವಿದ್ಯಾನಗರದ ಕಾವ್ಯಾ ಅನುಭವ ವಿವರಿಸಿದರು.

‘ಹಿಂದೆ ಕೊರೊನಾ ಪಾಸಿಟಿವ್‌ ಬಂದರೆ ಸುತ್ತಮುತ್ತಲಿನವರು ನೋಡುವ ದೃಷ್ಟಿ ಬದಲಾಗುತ್ತಿತ್ತು. ಮನೆಯಲ್ಲಿಯೂ ಎಲ್ಲರೂ ದೂರವಾಗಿ, ಒಂಟಿಯಾಗಿರಬೇಕು ಎಂಬ ಮಾನಸಿಕ ನೋವು ಹಿಂದೆ ಇತ್ತು. ಈಗ ಯಾರು ಹೇಗೆ ಬೇಕಾದರೂ ಹೇಗೆ ಬೇಕಾದರೂ ನೋಡಲಿ... ಆಸ್ಪತ್ರೆಯಲ್ಲಿ ಬೆಡ್‌, ಸರಿಯಾದ ಚಿಕಿತ್ಸೆ ಸಿಕ್ಕಿ ಬದುಕುಳಿದರೆ ಸಾಕು ಎಂಬ ಸ್ಥಿತಿ ಉಂಟಾಗಿದೆ. ಅದಕ್ಕೆ ಬೆಡ್‌ ಸಿಗದೇ ಇರುವುದು ಒಂದು ಕಾರಣವಾದರೆ, ಔಷಧಗಳು ಸಿಗದೇ ಇರುವುದು ಎರಡನೇ ಕಾರಣ’ ಎಂದು ಕೊರೊನಾದಿಂದ ಗುಣಮುಖರಾಗಿರುವ ಸಿದ್ದೇಶ್‌ ತಿಳಿಸಿದರು.

ಇದು ಒಬ್ಬರ–ಇಬ್ಬರ ಅನುಭವ ಕಥನಗಳಲ್ಲ. ಎರಡು–ಮೂರು ವಾರಗಳಲ್ಲಿ ಕೊರೊನಾ ಪಾಸಿಟಿವ್‌ ಬಂದ ಹಲವು ಮಂದಿ ಅನುಭವಿಸಿದ ನೋವಿನ ಕಥೆಗಳಿವು.

‘ಸಾವಿನ ಮನೆಯಲ್ಲಿ ಗಳ ಹಿರಿಯುವವರು’ ಎಂಬ ನಾಣ್ನುಡಿ ಇದೆ. ಇದನ್ನು ಸಮರ್ಥಿಸಿಕೊಳ್ಳುವಂತಿದೆ ಔಷಧ ಮತ್ತು ಔಷಧೀಯ ಪರಿಕರಗಳನ್ನು ವಿತರಿಸುವ ಸಂಸ್ಥೆಗಳ ನಿಲುವುಗಳು. ಕೊರೊನಾ ಸಂಕಷ್ಟ ಕಾಲದಲ್ಲಿಯೂ ಔಷಧಗಳ ಮತ್ತು ಪರಿಕರಗಳ ದರ ಒಂದೇ ಸಮನೆ ಏರಿಕೆಯಾಗಿದೆ. ಜತೆಗೆ ಕೆಲವು ಔಷಧಗಳು ಇಲ್ಲ ಎಂದು ಆಸ್ಪತ್ರೆಯವರು ಹೇಳಿದರೆ, ಅದೇ ಔಷಧಗಳು ನಾಲ್ಕೈದು ಪಟ್ಟು ಹೆಚ್ಚು ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ.

ಪ್ಯಾರಸೆಟಮೋಲ್‌, ಐವರಿಮೆಕ್ಸಿನ್‌, ಜಿಂಕ್‌, ವಿಟಮಿನ್‌–ಸಿ, ರ‍್ಯಾನಿಟಡಿನ್‌, ಪೇಂಟಾಪ್ರಜೋಲ್‌, ಸಿಟ್ರಿಜನ್‌, ಅಜಿತ್ರೋಮೈಸಿನ್‌ ಹೀಗೆ ವಿವಿಧ ಮಾತ್ರೆಗಳ ದರವನ್ನು ಶೇ 5ರಿಂದ 10ರಷ್ಟು ಏರಿಕೆ ಮಾಡಲು ಔಷಧ ಪೂರೈಕೆ ಕಂಪನಿಗಳೇ ನಿರ್ಧರಿಸಿವೆ. ಭಾರತೀಯ ಔಷಧ ತಯಾರಿ ಕಂಪನಿಗಳಿಗಿಂತ ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ ಔಷಧಗಳ ಬೆಲೆಯೇ ಈಗ ದುಬಾರಿಯಾಗಿದೆ. ವಿದೇಶದಿಂದ ಆಮದಾಗುವ ಔಷಧಗಳ ಪ್ರಮಾಣ ಕಡಿಮೆ ಆಗಿರುವುದು ಕೂಡ ಇದಕ್ಕೆ ಕಾರಣ. ಔಷಧ ಕಡಿಮೆ ಇದೆ ಎಂದು ಗೊತ್ತಾದ ಕೂಡಲೇ ಆ ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಕೆಯಾಗುವ ಮೊದಲೇ ಖಾಸಗಿ ಸಂಸ್ಥೆಗಳು ಖರೀದಿಸಿ ಇನ್ನೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ಔಷಧ ಮಾರಾಟ ಪ್ರತಿನಿಧಿಯೊಬ್ಬರು ತಿಳಿಸಿದರು.

ಔಷಧದ ಪ್ಯಾಕೆಟ್‌ನಲ್ಲಿ ಇರುವ ಎಂಆರ್‌ಪಿ ಬೆಲೆಗೂ ಅವರಿಗೆ ಸಿಗುವ ಬೆಲೆಗೂ ಭಾರಿ ಅಂತರವಿದೆ. ಉದಾಹರಣೆಗೆ ಒಂದು ಮಾತ್ರೆಯ ಎಂಆರ್‌ಪಿ ಬೆಲೆ ₹ 100 ಇದ್ದರೆ ಅವರಿಗೆ ಕೇವಲ ₹ 10ಕ್ಕೆ ಪೂರೈಕೆ ಆಗಿರುತ್ತದೆ. ಉತ್ಪಾದಕರಿಗೆ ₹ 5 ಸಿಕ್ಕಿರುತ್ತದೆ. ಇದನ್ನೆಲ್ಲ ಪೂರ್ತಿ ನೋಡಲು ಹೋದರೆ ದೊಡ್ಡ ಗೋಲ್‌ಮಾಲ್‌ ಇದೆ ಎಂದು ಅವರು ವಿವರಿಸಿದರು.

‘ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಅಗತ್ಯ’

ಮೆಡಿಕಲ್‌ ಶಾಪ್‌ಗಳಲ್ಲಿ ಸರ್ಜಿಕಲ್‌ ಸಾಮಗ್ರಿ ಮಾರಾಟಕ್ಕೆ ಅವಕಾಶ ನೀಡಿದವರು ಯಾರು? ಮೆಡಿಕಲ್‌ ಶಾಪ್‌ಗಳಲ್ಲಿ ಔಷಧಗಳಷ್ಟೇ ಮಾರಾಟ ಮಾಡಬೇಕು. ಆಕ್ಸಿಮೀಟರ್‌ ಒಳಗೊಂಡಂತೆ ಔಷಧೀಯ ಪರಿಕರಗಳನ್ನು ಮಾರಾಟ ಮಾಡುವಂತಿಲ್ಲ. ಆದರೆ, ಎಲ್ಲ ವಸ್ತುಗಳು ಮಾರಾಟವಾಗುತ್ತಿವೆ. ಸರ್ಜಿಕಲ್‌ ಐಟಂ ಅಂಗಡಿಗಳಲ್ಲಿಯೇ ಅವುಗಳು ಮಾರಾಟವಾಗಬೇಕು. ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ಅವರ ಒತ್ತಾಯ.

ಔಷಧೀಯ ದಾಸ್ತಾನು ಕೇಂದ್ರದಿಂದ ಯಾವ ಔಷಧ ಎಷ್ಟು ಸರಬರಾಜು ಆಗಿದೆ, ಎಲ್ಲಿಗೆ ಸರಬರಾಜು ಆಗಿದೆ? ಎಂಬ ಲೆಕ್ಕ ಇಡಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ. ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲು ಗ್ರಾಹಕರ ನ್ಯಾಯಾಲಯವು ಒಂದು ತಂಡ ಮಾಡಿಕೊಳ್ಳಬೇಕು. ಅಂಥವರು ಪತ್ತೆಯಾದಾಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂಬುದು ಅವರ ಸಲಹೆಯಾಗಿದೆ.

ಅಧಿಕ ಬೆಲೆಗೆ ಮಾರಾಟವಾದರೆ ತಿಳಿಸಿ

ರೆಮ್‌ಡಿಸಿವಿರ್‌ ಹೊರಗೆ ಮಾರಾಟ ಮಾಡುವ ಒಂದು ಪ್ರಕರಣವನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದೇವೆ. ಯಾವುದೇ ಔಷಧ ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದರೆ ಅಧಿಕೃತವಾಗಿ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಡ್ರಗ್‌ ಕಂಟ್ರೋಲ್‌ ಇನ್‌ಸ್ಪೆಕ್ಟರ್‌ ಗೀತಾ ತಿಳಿಸಿದರು.

ದೂರು ನೀಡಲು 9449197804, 7406080003 ಸಂಪರ್ಕಿಸಬಹುದು.

ಪರಿಕರ ದರ ಹೆಚ್ಚಿದ್ದರೆ ಮಾಹಿತಿ ನೀಡಿ

ಔಷಧಗಳು ಡ್ರಗ್‌ ಕಂಟ್ರೋಲ್‌ ವಿಭಾಗಕ್ಕೆ ಬರುತ್ತವೆ. ಔಷಧ ಪರಿಕರಗಳು ನಮ್ಮ ಇಲಾಖೆಯಡಿ ಬರುತ್ತವೆ. ಪಲ್ಸ್‌ ಆಕ್ಸಿಮೀಟರ್‌ ಸಹಿತ ಯಾವುದೇ ಪರಿಕರಗಳನ್ನು ನಿಗದಿತ ಬೆಲೆಗಿಂತ ಅಧಿಕ ದರಕ್ಕೆ ಮಾರಾಟ ಮಾಡೋದು ಕಂಡುಬಂದರೆ 8050024760 ಸಂಪರ್ಕಿಸಬಹುದು ಎಂದು ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಎಚ್‌.ಎಸ್‌. ರಾಜು ತಿಳಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆಯೇ ಉತ್ತಮ’

ಕೊರೊನಾ ಕಾಲದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತದೆ. ಅನಗತ್ಯವಾಗಿ ಯಾವುದೇ ಔಷಧ ಕೂಡ ನೀಡುವುದಿಲ್ಲ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಈಗ ಎಲ್ಲ ಬೆಡ್‌ಗಳು ಭರ್ತಿಯಾಗಿರುವುದು ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ನಂಬಿಕೆ ಜನರಿಗೆ ಇರುವ ಕಾರಣ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿ ಕಳುಹಿಸುತ್ತಾರೆ. ಆದರೆ, ಅವರ ಬಿಲ್‌ ಜಾಸ್ತಿ. ಇನ್ನು ಕೆಲವರು ಬೇಕಂತಲೇ ರೋಗಿಯನ್ನು ಜಾಸ್ತಿ ಸಮಯ ಇಟ್ಟುಕೊಂಡು ಬಿಲ್‌ ಹೆಚ್ಚಿಸುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಔಷಧ ಮಾರಾಟ ಪ್ರತಿನಿಧಿ ಮಾಹಿತಿ ನೀಡಿದರು.

ಜನೌಷಧ ಕೇಂದ್ರ ಬಳಸಿ

ಜನೌಷಧ ಕೇಂದ್ರದಲ್ಲಿ ದರ ಭಾರಿ ಕಡಿಮೆ ಇದೆ. ಆದರೆ ಬಳಸುವ ಜನರ ಸಂಖ್ಯೆ ಕಡಿಮೆ ಇದೆ. ಹೊರಗಡೆ ₹ 100 ಬೆಲೆ ಇರುವ ಔಷಧವು ಜನೌಷಧ ಕೇಂದ್ರದಲ್ಲಿ ₹ 30ಕ್ಕೆ ಸಿಕ್ಕಿಬಿಡುತ್ತದೆ. ಜಿಲ್ಲಾ ಆಸ್ಪತ್ರೆ ಸಹಿತ ನಗರದ ನಾಲ್ಕು ಕಡೆ ಜನೌಷಧ ಕೇಂದ್ರಗಳಿವೆ. ಇದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ತಿಳಿಸಿದರು.

ಜನೌಷಧ ಕೇಂದ್ರದಲ್ಲಿ 600 ಔಷಧಗಳನ್ನು ಮಾರಾಟ ಮಾಡಬೇಕು. ಆದರೆ 270–280 ಅಷ್ಟೇ ಇವೆ. ಯಾಕೆಂದರೆ ಉಳಿದವುಗಳಿಗೆ ಬೇಡಿಕೆ ಇಲ್ಲ. ಬೇಡಿಕೆ ಇಲ್ಲದ್ದನ್ನು ಪೂರೈಕೆ ಮಾಡಿದರೆ ನಷ್ಟವಾಗುತ್ತದೆ. ಎಲ್ಲ ಔಷಧಗಳನ್ನು ಇಲ್ಲಿಂದಲೇ ಒಯ್ಯುವಂತಾಗಬೇಕು ಎಂಬುದು ಅವರ ವಿವರಣೆ.

ಸುಸ್ತು ಬಿದ್ದು ಹೋಗಿದ್ದೇವೆ

15 ದಿವಸಗಳಿಂದ ನಾವು ಸುಸ್ತು ಬಿದ್ದಿದ್ದೇವೆ. ಆಮ್ಲಜನಕ, ಆಮ್ಲಜನಕ ಬೆಡ್‌, ರೆಮ್‌ಡಿಸಿವಿರ್‌ ಇಷ್ಟಕ್ಕೇ ಭಾರಿ ಬೇಡಿಕೆ ಉಂಟಾಗಿದೆ. ಕೇಳುವವರು, ಅಳುವವರು, ಒತ್ತಡ ಹೇರುವವರು, ಬೈಯುವವರು ಹೀಗೆ ಎಲ್ಲರನ್ನು ನಿಭಾಯಿಸಿ ಸಾಕು ಸಾಕಾಗಿದೆ. ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹೀಗೆ ಎಲ್ಲರೂ ಇದರ ಹಿಂದೆ 24 ಗಂಟೆ ಕೆಲಸ ಮಾಡುತ್ತಿದ್ದರೂ ಸಾಲುತ್ತಿಲ್ಲ ಎಂದು ಡಿಎಚ್‌ಒ ನಾಗರಾಜ್‌ ಅನುಭವ ಹಂಚಿಕೊಂಡರು.

ಈಗ ರೆಮ್‌ಡಿಸಿವಿರ್‌ಗೆ ಬೇಡಿಕೆ ಇದೆ. ಅದಕ್ಕೆ ದರವೂ ಹೆಚ್ಚಾಗಿದೆ. ಅದರ ಉತ್ಪಾದನೆ ಹೆಚ್ಚು ಮಾಡಲು ಸರ್ಕಾರ ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ. ಇನ್ನೊಂದು ವಾರದಲ್ಲಿ ರೆಮ್‌ಡಿಸಿವಿರ್‌ ಬೇಕಾದಷ್ಟು ಬರುತ್ತದೆ ಎಂದು ಮಾಹಿತಿ ನೀಡಿದರು.

ಆಮ್ಲಜನಕ ಈಗ ಅತ್ಯವಶ್ಯ. ಆದರೆ, ಅಗತ್ಯ ಇರುವುದಕ್ಕಿಂತ ಹೆಚ್ಚು ಜನರ ಬೇಡಿಕೆ ಇದೆ. ಎಲ್ಲೆಡೆ ಆಮ್ಲಜನಕ ಉತ್ಪಾದನಾ ಘಟಕ ಇಲ್ಲವೇ ಸಂಗ್ರಹ ಘಟಕ ಮಾಡಲಾಗುತ್ತಿದೆ. ಇನ್ನು ಕೆಲವೇ ವಾರಗಳಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂಬ ವಿಶ್ವಾಸ ಇದೆ. ಆಗ ಆಮ್ಲಜನಕಕ್ಕೆ ಬೇಡಿಕೆ ಕಡಿಮೆಯಾಗಲಿದೆ. ಆಮ್ಲಜನಕ ಉತ್ಪಾದನೆಗಿಂತ ಅವುಗಳ ನಿರ್ವಹಣೆಯೇ ಕಷ್ಟವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.