ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌, ಲ್ಯಾಬ್‌

ಸ್ಮಾರ್ಟ್‌ ಸಿಟಿಯಡಿ ನಗರದ 29 ಸರ್ಕಾರಿ ಶಾಲೆಗಳಿಗೆ ಆಧುನಿಕತೆಯ ಸ್ಪರ್ಶ
Last Updated 24 ಜೂನ್ 2020, 9:31 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು ₹ 5 ಕೋಟಿ ವೆಚ್ಚದಲ್ಲಿ ನಗರದ ಒಟ್ಟು 29 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಹಾಗೂ ಸ್ಮಾರ್ಟ್‌ ಲ್ಯಾಬ್‌ಗಳನ್ನು ನಿರ್ಮಿಸಲಾಗುತ್ತಿದೆ.

ಈ ಯೋಜನೆ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ‘ಸ್ಮಾರ್ಟ್‌ ಸಿಟಿ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ‘ಮೊದಲನೇ ಹಂತದಲ್ಲಿ ₹ 3 ಕೋಟಿ ವೆಚ್ಚದಲ್ಲಿ 19 ಶಾಲೆಗಳಲ್ಲಿ 62 ಸ್ಮಾರ್ಟ್‌ ಕ್ಲಾಸ್‌ ಹಾಗೂ 19 ಸ್ಮಾರ್ಟ್‌ ಲ್ಯಾಬ್‌ಗಳನ್ನು ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ₹ 2 ಕೋಟಿ ವೆಚ್ಚದಲ್ಲಿ 10 ಶಾಲೆಗಳಲ್ಲಿ 40 ಸ್ಮಾರ್ಟ್‌ ಕ್ಲಾಸ್‌ಗಳು ಹಾಗೂ 11 (ಸರ್ಕಾರಿ ಐಟಿಐ ಕಾಲೇಜು ಸೇರಿ) ಸ್ಮಾರ್ಟ್‌ ಲ್ಯಾಬ್‌ಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಸ್ಮಾರ್ಟ್‌ ಕ್ಲಾಸ್‌ಗಳನ್ನು 10 ವರ್ಷಗಳ ಅವಧಿಗೆ ನಿರ್ವಹಣೆ ಮಾಡುವುದನ್ನೂ ಗುತ್ತಿಗೆಯ ಷರತ್ತಿನಲ್ಲಿ ಸೇರಿಸಲಾಗಿರುವುದರಿಂದ ಶಾಲೆಗಳಿಗೆ ನಿರ್ವಹಣೆ ಮಾಡುವುದು ಸುಲಭವಾಗಲಿದೆ ಎಂದರು.

ಇದರ ಜೊತೆಗೆ ಮೊದಲನೇ ಹಂತದಲ್ಲಿ ಶಾಲೆಗಳನ್ನು ₹ 3 ಕೋಟಿ ವೆಚ್ಚದಲ್ಲಿ ಹಳೆ ದಾವಣಗೆರೆ ಭಾಗದ ಐದು ಸರ್ಕಾರಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಎರಡನೇ ಹಂತದಲ್ಲಿ ₹ 8 ಕೋಟಿ ವೆಚ್ಚದಲ್ಲಿ 14 ಶಾಲೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದೇವರಾಜ ಅರಸು ಬಡಾವಣೆಯ ಈಜುಕೊಳವನ್ನು ಅಭಿವೃದ್ಧಿಪಡಿಸಲು, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆಗೆ ಸೇರಿರುವ ಆರು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು, ಜಿಲ್ಲಾ ಆಸ್ಪತ್ರೆಯಲ್ಲಿ ಹೊಸದಾಗಿ ಟ್ರಾಮಾ ಸೆಂಟರ್‌ ನಿರ್ಮಿಸಲು ಹಾಗೂ ಜಗಳೂರು ರಸ್ತೆಯಲ್ಲಿ ಸೆಟ್‌ಲೈಟ್‌ ಬಸ್‌ನಿಲ್ದಾಣ ನಿರ್ಮಿಸಲು ಹೊಸದಾಗಿ ಯೋಜನೆ ಸಿದ್ಧಪಡಿಸಿ ಮಂಜೂರಾತಿಗೆ ಕಳುಹಿಸಿಕೊಡಲಾಗಿದೆ ಎಂದು ಮಲ್ಲಾಪುರ ತಿಳಿಸಿದರು.

ವಿದ್ಯಾರ್ಥಿಗಳಿಗೆ ವಿದ್ವತ್‌ ಎಜುಕೇಷನಲ್‌ ಮೊಬೈಲ್‌ ಆ್ಯಪ್‌

‘ಎರಡನೇ ಹಂತದಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಿಸಲು ಗುತ್ತಿಗೆ ಪಡೆದಿರುವ ಮೈಸೂರಿನ ವಿದ್ವತ್‌ ಇನೋವೇಟಿವ್‌ ಸೊಲ್ಯುಷನ್ಸ್‌ ಕಂಪನಿಗೆ ಜಿಲ್ಲೆಯ ಶಾಲಾ ಮಕ್ಕಳಿಗೆ ತಮ್ಮ ಕಂಪನಿಯ ಮೊಬೈಲ್‌ ಆ್ಯಪ್‌ ಮೂಲಕ ಉಚಿತವಾಗಿ ಪಾಠ ಕೇಳಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೆವು. ಅಂತಿಮವಾಗಿ ಕಂಪನಿಯು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮಕ್ಕಳಿಗೆ ಒಂದು ವರ್ಷ ಉಚಿತವಾಗಿ ಹಾಗೂ ಖಾಸಗಿ ಪ್ರೌಢಶಾಲೆಗಳ ಮಕ್ಕಳಿಗೆ ಎರಡು ತಿಂಗಳು ಉಚಿತವಾಗಿ ಮೊಬೈಲ್‌ ಆ್ಯಪ್‌ ಮೂಲಕ ಪಾಠ ಕೇಳುವ ಅವಕಾಶ ಮಾಡಿಕೊಡಲು ಒಪ್ಪಿಕೊಂಡಿದೆ’ ಎಂದು ರವೀಂದ್ರ ಮಲ್ಲಾಪುರ ತಿಳಿಸಿದರು.

ವಿದ್ವತ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಎಂ. ಪಾಟೀಲ, ‘ಕನ್ನಡ, ಉರ್ದು, ಇಂಗ್ಲಿಷ್‌ ಭಾಷೆಗಳಲ್ಲಿ ಆರೂ ವಿಷಯಗಳ ಪಾಠಗಳಿವೆ. ಅನಿಮೇಷನ್‌ ಮೂಲಕ ಪಾಠ, ಪ್ರಶ್ನೆಪತ್ರಿಕೆ ಬಿಡಿಸುವುದು, ಸ್ವ ಮೌಲ್ಯಮಾಪನ ಸೌಲಭ್ಯಗಳಿವೆ. ಒಮ್ಮೆ ಡೌನ್‌ಲೋಡ್‌ ಮಾಡಿಕೊಂಡರೆ ಆಫ್‌ಲೈನ್‌ನಲ್ಲೂ ಪಾಠವನ್ನು ಕೇಳಬಹುದಾಗಿದೆ. ರಾಜ್ಯದಲ್ಲಿ 10 ಸಾವಿರ ಶಾಲೆಗಳಲ್ಲಿ ನಮ್ಮ ಆ್ಯಪ್‌ ಬಳಸುತ್ತಿದ್ದಾರೆ’ ಎಂದು ತಿಳಿಸಿದರು.

ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜು, ‘ನಮ್ಮ ಪರಿಣತ ಶಿಕ್ಷಕರು ಆ್ಯಪ್‌ನಲ್ಲಿರುವ ಪಾಠಗಳನ್ನು ಒಂದು ವಾರಗಳ ಕಾಲ ನೋಡಿ ಪರಿಶೀಲಿಸಲಿದ್ದಾರೆ. ನಮ್ಮ ಪಠ್ಯಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಿಕೊಡಬೇಕಾಗುತ್ತದೆ’ ಎಂದು ತಿಳಿಸಿದರು.

ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ‘ಸ್ಮಾರ್ಟ್‌ ಕ್ಲಾಸ್‌ಗಳನ್ನು ಮಾಡಿಕೊಡುವುದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧೆಯೊಡ್ಡಲು ಅನುಕೂಲವಾಗಲಿದೆ’ ಎಂದರು.

ಸಿವಿಲ್‌ ಎಂಜಿನಿಯರ್‌ಗಳಿಗೆ ಇಂಟರ್ನ್‌ಷಿಪ್‌ಗೆ ಅವಕಾಶ

ಕೇಂದ್ರ ಸರ್ಕಾರದ ನಿರ್ದೇಶನದಂತೆ ‘ದಿ ಅರ್ಬಲ್‌ ಲರ್ನಿಂಗ್‌ ಇಂಟರ್ನ್‌ಷಿಪ್‌ ಪ್ರೊಗ್ರಾಂ– ‘ಟುಲಿಪ್‌’ ಅಡಿ ಸ್ಮಾರ್ಟ್‌ ಸಿಟಿ ಕಚೇರಿಯಲ್ಲಿ ಆರು ಸಿವಿಲ್‌ ಎಂಜಿನಿಯರ್‌ಗಳಿಗೆ ಇಂಟರ್ನ್‌ಷಿಪ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ರವೀಂದ್ರ ಮಲ್ಲಾಪುರ ತಿಳಿಸಿದರು.

‘ಇಂಟರ್ನ್‌ಷಿಪ್‌ಗಾಗಿ ಅರ್ಜಿಗಳನ್ನು ಟುಲಿಪ್‌ ಪೋರ್ಟಲ್‌ https://internship.aicte-india.org ನಲ್ಲಿ ಅರ್ಜಿ ಸಲ್ಲಿಸಬಹುದು. ಕನಿಷ್ಠ ಎರಡು ತಿಂಗಳಿಂದ ಗರಿಷ್ಠ ಒಂದು ವರ್ಷದ ಅವಧಿವರೆಗೆ ಇಂಟರ್ನ್‌ಷಿಪ್‌ ಮಾಡಬಹುದಾಗಿದೆ. ತಿಂಗಳಿಗೆ ₹ 8,000 ಪ್ರೋತ್ಸಾಹಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ https://smartnet.niua.org/tulip ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT