ಭಾನುವಾರ, ಏಪ್ರಿಲ್ 5, 2020
19 °C
ಬ್ಯಾಂಕ್‌ಗಳ ಕೇಂದ್ರ ಕಚೇರಿ ಗಮನಕ್ಕೆ ತರಲು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧಾರ

ಸಾಲ ನೀಡದ ಬ್ಯಾಂಕ್‌ಗಳ ಕ್ರಮಕ್ಕೆ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಉದ್ಯೋಗಿನಿ’ ಸೇರಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ನೀಡದೇ ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಬ್ಯಾಂಕ್‌ಗಳ ಕ್ರಮಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ‘ಉದ್ಯೋಗಿನಿ’ ಯೋಜನೆಯಡಿ ಪ್ರಸಕ್ತ ಸಾಲಿಗೆ 135 ಫಲಾನುಭವಿಗಳಿಗೆ ಸಹಾಯಧನ ನೀಡಲು ₹ 82.16 ಲಕ್ಷ ನಿಗದಿಗೊಳಿಸಲಾಗಿತ್ತು. 32 ಫಲಾನುಭವಿಗಳಿಂದ ಅರ್ಜಿ ಬಂದಿತ್ತು. ಬ್ಯಾಂಕ್‌ಗಳಿಗೆ ಪಟ್ಟಿಯನ್ನು ನೀಡಲಾಗಿದ್ದರೂ ಸಾಲ ಮಂಜೂರು ಮಾಡಿಲ್ಲ. ಹೀಗಾಗಿ ಆರ್ಥಿಕ ಪ್ರಗತಿ ಶೂನ್ಯವಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ‘ಸ್ವಂತ ಉದ್ಯೋಗ ಕೈಗೊಳ್ಳಲು ಮುಂದೆ ಬರುವ ಎಸ್‌.ಸಿ, ಎಸ್‌.ಟಿ. ಫಲಾನುಭವಿಗಳಿಗೆ ಬ್ಯಾಂಕ್‌ನವರು ಸಾಲಕ್ಕೆ ಭದ್ರತೆ ಕೇಳಿದರೆ ಎಲ್ಲಿಂದ ಕೊಡಲಿಕ್ಕೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಉದ್ಯೋಗಿನಿ ಯೋಜನೆಯಡಿ ಎಸ್‌.ಸಿ,–ಎಸ್‌.ಟಿ ಫಲಾನುಭವಿಗಳಿಗೆ ಸಾಲದ ಮೇಲೆ ಶೇ 50ರಷ್ಟು ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ 30ರಷ್ಟು ಸಬ್ಸಿಡಿ ನೀಡಲು ಅವಕಾಶವಿದೆ. ಆದರೆ, ಬ್ಯಾಂಕ್‌ನವರು ಸಕಾಲಕ್ಕೆ ಸಾಲ ಮಂಜೂರು ಮಾಡುತ್ತಿಲ್ಲ. ಅವರಿಗೆ ನಿರ್ದೇಶನ ನೀಡಬೇಕು’ ಎಂದು ವಿಜಯಕುಮಾರ್‌ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಪದ್ಮ ಬಸವಂತಪ್ಪ, ‘ಎಲ್ಲಾ ನಿಗಮದವರು ಹಾಗೂ ಇಲಾಖೆಯವರು ತಮ್ಮಲ್ಲಿ ಎಷ್ಟು ಫಲಾನುಭವಿಗಳಿಗೆ ಸಾಲ ತಿರಸ್ಕರಿಸಲಾಗಿದೆ ಎಂಬ ಪಟ್ಟಿಯನ್ನು ನೀಡಬೇಕು. ಈ ಬಗ್ಗೆ ಆಯಾ ಬ್ಯಾಂಕ್‌ಗಳ ಕೇಂದ್ರ ಕಚೇರಿಗೆ ಪತ್ರ ಬರೆಯೋಣ. ಶೀಘ್ರದಲ್ಲೇ ಬ್ಯಾಂಕರ್‌ಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಹೇಳಿದರು.

ಟ್ರ್ಯಾಂಕರ್‌ ಸಮಸ್ಯೆ: ‘ಜಿಲ್ಲೆಗೆ 57 ವಾರಟ್‌ ಟ್ಯಾಂಕರ್‌ಗಳಿಗೆ ಸಬ್ಸಿಡಿ ನೀಡಲು ನಿಗದಿಪಡಿಸಲಾಗಿದೆ. 4,000 ಲೀಟರ್‌ ಟ್ಯಾಂಕರ್‌ಗೆ ಎಸ್‌.ಸಿ–ಎಸ್‌.ಟಿ ರೈತರಿಗೆ ₹ 1.12 ಲಕ್ಷ ಹಾಗೂ ಸಾಮಾನ್ಯ ವರ್ಗದ ರೈತರಿಗೆ ₹ 62,000 ಸಬ್ಸಿಡಿ ನೀಡಲಾಗುತ್ತದೆ. 5,000 ಲೀಟರ್‌ ಟ್ಯಾಂಕರ್‌ಗೆ ಎಸ್‌.ಸಿ–ಎಸ್‌.ಟಿ ರೈತರಿಗೆ ₹ 1.20 ಲಕ್ಷ ಹಾಗೂ ಸಾಮಾನ್ಯ ವರ್ಗದ ರೈತರಿಗೆ ₹ 72,000 ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯಲ್ಲಿ ವಾಟರ್‌ ಟ್ಯಾಂಕರ್‌ಗಳಿಗೆ ಆರ್‌.ಟಿ.ಒ ಕಚೇರಿಯಲ್ಲಿ ನೋಂದಣಿ ಮಾಡಿಕೊಡುತ್ತಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್‌ ಸಭೆಗೆ ತಿಳಿಸಿದರು.

ಸ್ಥಳ ಪರಿಶೀಲನೆ: ಲಿಂಗದಹಳ್ಳಿ–ಮದುರನಾಯಕನಹಳ್ಳಿ ಕ್ರಾಸ್‌ವರೆಗಿನ ಸಿ.ಸಿ. ರಸ್ತೆ ಕಳಪೆಯಾಗಿದ್ದು, ಸಿಇಒ ಬಂದು ಸ್ಥಳ ಪರಿಶೀಲಿಸಿದ ಬಳಿಕವೇ ಬಿಲ್‌ಗೆ ಹಣ ಪಾವತಿಸಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಸ್ಥಳ ಪರಿಶೀಲಿಸಿ ವರದಿ ನೀಡುವವರೆಗೂ ಹಣ ಪಾವತಿಸದಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ರಿಯಾಯೋಜನೆಗೆ ಸೂಚನೆ: ‘ಬೇಸಿಗೆಯ ಮೂರು ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸಲು ಕ್ರಿಯಾಯೋಜನೆ ತಯಾರಿಸಿ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಆನಂದ್‌ ಸೂಚಿಸಿದರು.

ಜಿಲ್ಲೆಯಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಬರುವಂತಹ 93 ಗ್ರಾಮಗಳನ್ನು ಗುರುತಿಸಲಾಗಿದೆ. ಖಾಸಗಿ ಕೊಳವೆಬಾವಿಗಳ ವಿವರಗಳನ್ನು ಪಡೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ವೀರಶೇಖರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ, ಯೋಜನಾ ನಿರ್ದೇಶಕ ಎಸ್‌. ಜಗದೀಶ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

650 ಅಂಗನವಾಡಿಗಳಿಗೆ ಬೇಕು ಸ್ವಂತ ಕಟ್ಟಡ: ಜಿಲ್ಲೆಯಲ್ಲಿ ಸುಮಾರು 650 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕಾಗಿದೆ. ಪ್ರತಿ ವರ್ಷ ಇಲಾಖೆಯಿಂದ 10-15 ಅಂಗನವಾಡಿ ಕಟ್ಟಡ ನಿರ್ಮಿಸಲು ಮಾತ್ರ ಅನುದಾನ ಬರುತ್ತಿದೆ. ‘ನರೇಗಾ’ದಡಿ ₹ 5 ಲಕ್ಷ ನೀಡಲು ಅವಕಾಶವಿದ್ದು, ಈ ಯೋಜನೆಯಡಿ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಮನವಿ ಮಾಡಿದರು.

ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ತಮ್ಮ ಊರಿನ ಅಂನಗವಾಡಿ ಕಟ್ಟಡ ದುರಸ್ತಿಗೊಳಿಸುವಂತೆ ಹೇಳಿದರೂ ಇನ್ನೂ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಂಗನವಾಡಿಗಳ ದುರಸ್ತಿಗಾಗಿ ತಾಲ್ಲೂಕು ಪಂಚಾಯಿತಿಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಅವರು ಸಕಾಲಕ್ಕೆ ಹಣ ಖರ್ಚು ಮಾಡದೇ, ಮಾರ್ಚ್‌ನಲ್ಲಿ ಏಕಕಾಲಕ್ಕೆ ಖರ್ಚು ಮಾಡುತ್ತಾರೆ’ ಎಂದು ವಿಜಯಕುಮಾರ್‌ ದೂರಿದರು.

‘ಎಸ್‌ಸಿಪಿ–ಟಿಎಸ್‌ಪಿ ಅಡಿ ಈ ಬಾರಿ ಹೆಚ್ಚುವರಿ ಹಣ ನೀಡಲಾಗಿತ್ತು. ಉಳಿಕೆ ಹಣ ₹ 46 ಲಕ್ಷವನ್ನು ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ದುರಸ್ತಿಗೊಳ್ಳಬೇಕಾದ ಅಂಗನವಾಡಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕೆಆರ್‌ಐಡಿಎಲ್‌ಗೆ ಹಣ ವರ್ಗಾವಣೆ ಮಾಡುತ್ತೇವೆ’ ಎಂದು ತಿಳಿಸಿದರು.

ಬಸವನಕೋಟೆಯ ಶಾಲೆಯ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಎಸ್‌ಡಿಎಂಸಿಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಜಯಕುಮಾರ್‌ ಸಭೆಯ ಗಮನಕ್ಕೆ ತಂದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಾರದೊಳಗೆ ಸಮಸ್ಯೆಯನ್ನು ಪರಿಹರಿಸುವಂತೆ ಡಿಡಿಪಿಐಗೆ ಸಿಇಒ ಸೂಚಿಸಿದರು.

ಕೋವಿಡ್‌ಗೆ ಮುನ್ನೆಚ್ಚರಿಕೆಯೇ ಮದ್ದು: ಡಿಎಚ್‌ಒ

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ವ್ಯಕ್ತಿಯಲ್ಲೂ ‘ಕೋವಿಡ್‌–19’ ರೋಗ ಕಾಣಿಸಿಕೊಂಡಿಲ್ಲ. ಕೊರಾನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಕೈಗೊಳ್ಳುವುದೇ ಕೋವಿಡ್‌ ರೋಗಕ್ಕೆ ಇರುವ ಮದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರ ಸ್ವಾಮಿ ತಿಳಿಸಿದರು.

‘ಪದೇ ಪದೇ ಸೋಪಿನಿಂದ ಕೈ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬಾರದು. ಕೆಮ್ಮು ಹಾಗೂ ಸೀನಿದಾಗ ಸುಮಾರು ಒಂದು ಮೀಟರ್‌ ದೂರದವರೆಗೆ ಕೊರಾನಾ ವೈರಸ್‌ ಪ್ರಸರಣಗೊಳ್ಳುತ್ತದೆ. ಹೀಗಾಗಿ ಕೆಮ್ಮು ಮತ್ತು ಸೀನುವಾಗ ತಪ್ಪದೇ ಕರವಸ್ತ್ರವನ್ನು ಮುಚ್ಚಿಕೊಳ್ಳಬೇಕು’ ಎಂದರು.

‘ಸಾರ್ಸ್‌ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಜನರಲ್ಲಿ ಜಾಗೃತಿ ಇಲ್ಲದಿರುವುದರಿಂದ ರೋಗ ಪೀಡಿತರಲ್ಲಿ ಶೇ 24ರಷ್ಟು ಸಾವು ಸಂಭವಿಸಿತ್ತು. ಕೋವಿಡ್‌–19 ಬಗ್ಗೆ ಹೆಚ್ಚಿನ ಪ್ರಚಾರ ಸಿಕ್ಕಿದ್ದರಿಂದ ಜನರಲ್ಲೂ ಜಾಗೃತಿ ಮೂಡಿದೆ. ಹೀಗಾಗಿ ಶೇ 2ರಷ್ಟು ಮಾತ್ರ ಸಾವು ಸಂಭವಿಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ನೇಪಾಳ, ಸಿಂಗಪುರ, ಬ್ಯಾಂಕಾಕ್‌ ದೇಶಗಳಿಗೆ ಹೋಗಿ ವಾಪಸ್ಸಾಗಿರುವ ಜಿಲ್ಲೆಯ ಜನರ ವಿವರಗಳನ್ನು ವಿಮಾನ ನಿಲ್ದಾಣಗಳ ಮೂಲಕ ಪಡೆದುಕೊಳ್ಳಲಾಗಿತ್ತು. ಅವರೆಲ್ಲರನ್ನೂ 14 ದಿನಗಳ ಕಾಲ ನಿಗಾ ವಹಿಸಲಾಗಿತ್ತು. ಯಾರಲ್ಲೂ ಕೊರಾನಾ ಸೋಂಕು ಕಾಣಿಸಿಕೊಂಡಿಲ್ಲ. ಈ ತಿಂಗಳ ಮೊದಲ ವಾರದ ದುಬೈನಿಂದ ಮತ್ತಿಬ್ಬರು ಜಿಲ್ಲೆಗೆ ವಾಪಸ್ಸಾಗಿದ್ದು, ಅವರನ್ನೂ 14 ದಿನಗಳ ಕಾಲ ನಿಗಾ ವಹಿಸಲಾಗುವುದು. ಈ ರೋಗದ ಬಗ್ಗೆ ನಿಗಾ ವಹಿಸಲು ತಂಡಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.

ರೋಗ ನಿರೋಧಕ ವೃದ್ಧಿಗೆ ಕಷಾಯ: ‘ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಆಯುಷ್‌ ಇಲಾಖೆಯು ಅರಿಶಿನ, ಅಮೃತಬಳ್ಳಿ, ಮೆಣಸಿನಕಾಳು, ಶುಂಠಿಯ ಕಷಾಯವನ್ನು ಕುಡಿಯುವಂತೆ ಶಿಫಾರಸು ಮಾಡಿದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು, ಸ್ವಲ್ಪ ಮಟ್ಟಿಗೆ ಕೊರಾನಾ ಸೋಂಕಿನಿಂದ ದೂರ ಉಳಿಯಬಹುದು’ ಎಂದು ಆಯುಷ್‌ ವೈದ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)