ಗುರುವಾರ , ಆಗಸ್ಟ್ 11, 2022
23 °C

ದಾವಣಗೆರೆ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ನೀಡಿರುವ ಭಾರತ್‌ ಬಂದ್‌ ಕರೆಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಸಿಪಿಐ, ಎಐಟಿಯುಸಿ, ಎಐಯುಟಿಯುಸಿ, ಸಿಐಟಿಯು, ನೆರಳು ಬೀಡಿ ಕಾರ್ಮಿಕರ ಸಂಘಟನೆ, ಆಮ್‌ ಆದ್ಮಿ ಪಾರ್ಟಿ, ಜನಸಕ್ತಿ, ರೈತ ಸಂಘ ಮತ್ತು ಹಸಿರುಸೇನೆ ಹೀಗೆ ವಿವಿಧ ಸಂಘಟನೆಗಳು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬಸ್‌ ಸಂಚಾರ ಸ್ಥಗಿತಗೊಂಡಿತು.

ಬೆಳಿಗ್ಗೆ ಚಿತ್ರದುರ್ಗಕ್ಕೆ ಹೊರಟಿದ್ದ ಬಸ್‌ ಅನ್ನು ಪ್ರತಿಭಟನಕಾರರು ಅಡ್ಡ ಹಾಕಿ ಪ್ರಯಾಣಿಕರನ್ನು ಇಳಿಸಿ, ಬಸ್‌ ಮುಂದಕ್ಕೆ ಹೋಗದಂತೆ ತಡೆದರು. ಹದಡಿ ರಸ್ತೆಯಲ್ಲಿ ರೈತ ಸಂಘ ಹುಚ್ಚವ್ವನಹಳ್ಳಿ ಬಣದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಲಾಯಿತು.

ರೈತ ಮುಖಂಡ ತೇಜಸ್ವಿ ಪಟೇಲ್‌ ನೇತೃತ್ವದ ತಂಡ ಜನರಿಗೆ ಊಟದ ಪ್ಯಾಕೆಟ್‌ ಹಂಚುವ ಮೂಲಕ ‘ಅನ್ನ ತಿನ್ನುವವರು ಎಲ್ಲರೂ ಈ ಬಂದ್‌ಗೆ ಬೆಂಬಲ ನೀಡಬೇಕು’ ಎಂದು ಸಾರುತ್ತಾ ನಗರದಾದ್ಯಂತ ಸಂಚರಿಸಿತು.

ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆ ಸಂಘಟನೆಗಳು ಜಯದೇವ ಸರ್ಕಲ್‌ನಲ್ಲಿ ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು.

ಕಾಂಗ್ರೆಸ್‌ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಬಹುತೇಕ ಅಂಗಡಿ, ಹೋಟೆಲ್‌ಗಳನ್ನು ಜನರು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿ ಬೆಂಬಲ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು