ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಬಿ ಕೆರೆ ಪಿಕಪ್: ಬಗೆಹರಿಯದ ಜಲಸಸ್ಯ ಸಮಸ್ಯೆ

ಅಣೆಕಟ್ಟೆಯಲ್ಲಿ ಬಿರುಕು, ತಡೆಗೋಡೆ ಶಿಥಿಲ: ನೀರು ಬರುವುದರೊಳಗೆ ದುರಸ್ತಿಗೆ ರೈತರ ಆಗ್ರಹ
Last Updated 5 ಜನವರಿ 2023, 5:54 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ವರ್ಷದ ಪ್ರವಾಹದಿಂದಾಗಿ ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಹರಿದು ಬಂದ ಸಸ್ಯಗಳು ಗೇಟುಗಳಿಗೆ ಅಡ್ಡಲಾಗಿ ನಿಂತಿದ್ದು, ಹಿನ್ನೀರಿನ ವ್ಯಾಪ್ತಿಯ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿತ್ತು. ಆದರೆ, ಬೇಸಿಗೆ ಹಂಗಾಮು ಆರಂಭವಾದರೂ ಸಮಸ್ಯೆಗೆ ಇನ್ನೂ ಮುಕ್ತಿ ದೊರೆಯದಿರುವುದ ರೈತರ ಆತಂಕ ಹೆಚ್ಚಿಸಿದೆ.

ನೀರು ನುಗ್ಗಿ ಸಾವಿರಾರು ಎಕರೆ ಭತ್ತ, ತೋಟದ ಬೆಳೆ ನಾಶವಾಗಿದ್ದು, ಮುಕ್ತೇನಹಳ್ಳಿ ಸಂಕ್ಲೀಪುರ ರಸ್ತೆಯೂ ಹಾಳಾಗಿದೆ. ರೈತರಿಗೆ ಅಪಾರ ನಷ್ಟ ಉಂಟಾಗಿದ್ದು, ಕರ್ನಾಟಕ ನೀರಾವರಿ ನಿಗಮದಿಂದ ಹೊಸ ಗೇಟ್ ಅಳವಡಿಸುವ ₹ 40 ಲಕ್ಷ ವೆಚ್ಚದ ಕೆಲಸ ನನೆಗುದಿಗೆ ಬಿದ್ದಿದೆ ಎಂದು ರೈತರಾದ ಪರಮೇಶ್ ಗೌಡ, ಚಂದ್ರು, ಹನುಮಂತು, ನಿಂಗಪ್ಪ, ಮಹಂತೇಶ್, ಗುಡ್ಡಪ್ಪ, ಬಸಪ್ಪ ಆರೋಪಿಸಿದರು.

‘ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಮಳೆಗಾಲ ಮುಗಿದಿದ್ದು, ಬೇಸಿಗೆ ವೇಳೆಗೆ ದುರಸ್ತಿ ಮಾಡಬಹುದಿತ್ತು. ಆದರೂ ಗಮನ ಹರಿಸಿಲ್ಲ. ಭದ್ರಾ ನಾಲೆಗೆ ನೀರು ಬಿಟ್ಟ ನಂತರ ಕಾಮಗಾರಿ ನಡೆಸುವುದು ಕಷ್ಟ’ ಎಂದು ಸಂಕ್ಲೀಪುರ, ಗುಳದಳ್ಳಿ, ಬೂದಿಹಾಳ್, ದೇವರಬೆಳಕೆರೆ‌ ಗ್ರಾಮದ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ. ನೀರಿನ ಒತ್ತಡ ಹೆಚ್ಚಾದರೆ ಹಾನಿ ನಿಶ್ಚಿತ. ಮೇಲ್ಭಾಗದ ಜಲಸಸ್ಯ ತೆರವು ಮಾಡುವ ವೇಳೆ ಅಣೆಕಟ್ಟೆಗೆ ಹಾನಿ ಮಾಡಲಾಗಿದೆ. ತಡೆಗೋಡೆ ಶಿಥಿಲವಾಗಿದೆ. ಜಲವಿದ್ಯುತ್ ಘಟಕ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅಣೆಕಟ್ಟೆಗೆ ಹಾನಿಯಾದಲ್ಲಿ ಸಿದ್ದವೀರಪ್ಪ, ಗಾಂಜಿವೀರಪ್ಪ ನಾಲೆಗಳ 4,280 ಹೆಕ್ಟೇರ್ ಅಚ್ಚುಕಟ್ಟಿಗೆ ಸಮಸ್ಯೆ ಎದುರಾಗಲಿದೆ. ಶೀಘ್ರ ಕಾಮಗಾರಿ ಹಮ್ಮಿಕೊಳ್ಳದಿದ್ದರೆ ಭದ್ರಾ ನಾಲೆ ವಿಭಾಗೀಯ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

‘ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಎತ್ತರಿಸಿದ ಹೊಸ ಗೇಟ್ ಅಳವಡಿಸುವ ಹಾಗೂ ಜಲಸಸ್ಯ ತೆರವಿನ ಚಿತ್ರಣ ಸಿಗಲಿದೆ’ ಎಂದು ನೀರಾವರಿ ಇಲಾಖೆಯ ಎ.ಇ.ಇ ಚಂದ್ರಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರು ನಿಲುಗಡೆ ಮಾಡಿದಾಗ ಸಸ್ಯ, ಗೇಟ್ ತೆರವು ಕಾಮಗಾರಿ ನಡೆಸಿದರೆ ಅನುಕೂಲ. ಎಂಜಿನಿಯರ್‌ಗಳು ಕೆಆರ್‌ಎಸ್ ಅಣೆಕಟ್ಟು ಸುರಕ್ಷತಾ ಮಂಡಳಿ ಸಲಹೆ ನಿರೀಕ್ಷಿಸುತ್ತಿದ್ದಾರೆ. ಇದರಿಂದ ವಿಳಂಬವಾಗಲಿದೆ ಎಂದು ಸಂಕ್ಲೀಪುರದ ರೈತ ಮುಖಂಡ
ಸಿ. ನಾಗೇಂದ್ರಪ್ಪ ಹೇಳಿದರು.

ಕೆಆಆರ್‌ಎಸ್ ಅಣೆಕಟ್ಟು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅವರು ಒಮ್ಮೆ ಭೇಟಿ ನೀಡಿ ವರದಿ ನೀಡಿದ ನಂತರ ಗೇಟ್‌ ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

–ಚಂದ್ರಕಾಂತ್, ಎಇಇ, ನೀರಾವರಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT