ಶುಕ್ರವಾರ, ಡಿಸೆಂಬರ್ 4, 2020
22 °C

ಕೊರೊನಾಕ್ಕೆ ಕುಂದದ ದೀಪಾವಳಿ ಸಂಭ್ರಮದ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆರೋಗ್ಯ ಮತ್ತು ಆರ್ಥಿಕತೆಗೆ ಕೊರೊನಾ ನೀಡಿದ ಹೊಡೆತದ ಬಳಿಕವೂ ಜನರಲ್ಲಿ ಹಬ್ಬ ಮಾಡುವ ಉತ್ಸಾಹ ಕುಂದಿಲ್ಲ. ಹಾಗಾಗಿ ದೀಪಾವಳಿಗೆ ಖರೀದಿಯು ಶನಿವಾರವೂ ಉತ್ಸಾಹದಿಂದ ನಡೆಯಿತು.

ಜಯದೇವ ಸರ್ಕಲ್‌ನಿಂದ ಪಿ.ಬಿ.ರೋಡ್‌ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆವರೆಗೆ ವ್ಯಾಪಾರ ನೂಕುನುಗ್ಗಲಿಲ್ಲದೇ ನಡೆಯಿತು. ಸೂರ್ಯ ಪಶ್ಚಿಮದ ಕಡೆ ಹೋಗುತ್ತಿದ್ದಂತೆ ಮಾರುಕಟ್ಟೆಗೆ ಧಾವಿಸುವವರ ಸಂಖ್ಯೆ ಒಂದೇ ಸಮನೆ ಹೆಚ್ಚಾಯಿತು.

ಹೈಸ್ಕೂಲ್‌ ಮೈದಾನದಲ್ಲಿದ್ದ ಪಟಾಕಿ ಮಳಿಗೆಗಳಿಗೆ ಹಿಂದಿನಂತೆ ಜನ ಮುಗಿಬಿದ್ದಿಲ್ಲ. ಆದರೆ ಇತಿಮಿತಿಯಲ್ಲಿ ಪಟಾಕಿ ಇರಲಿ ಎಂದು ಜನರು ಬಂದು ಖರೀದಿಸುತ್ತಿದ್ದರು.

ಏರಿದ ಬೆಲೆ: ಎಲ್ಲ ಹಣ್ಣುಗಳಿಗೆ ಹಬ್ಬದ ಪ್ರಯುಕ್ತ ₹ 20ರಿಂದ ₹ 50ರಷ್ಟು ಏರಿಕೆಯಾಗಿತ್ತು. ಬಾಳೆಹಣ್ಣು ಡಜನ್‍ಗೆ ₹ 55ರಿಂದ 65, ದಾಳಿಂಬೆ ₹ 210, ಸೇಬು ₹ 150, ಸ‍ಪೋಟ ₹ 80, ದ್ರಾಕ್ಷಿ  ₹ 200–220ರಂತೆ ಖರೀದಿ ನಡೆಯಿತು.

ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಕನಕಾಂಬರ ಹೂವುಗಳಿಗೆ ಮಾರಿಗೆ ₹ 80ರಿಂದ ₹ 100ರ ವರೆಗೆ ದರ ಇತ್ತು. ಸಣ್ಣ ಬಿಡಿ ಗುಲಾಬಿ ಹೂವು ಕೆ.ಜಿಗೆ ₹ 320 ಇದ್ದು, ಜನ ಕಾಲು ಕೆ.ಜಿ.ಯಷ್ಟು ಖರೀದಿ ಮಾಡುತ್ತಿದ್ದರು.

ಪೂಜಾ ಸಾಮಗ್ರಿ ದರ: ವಿಶೇಷವಾಗಿ ಹಟ್ಟಿಲಕ್ಕಮ್ಮನ ಪೂಜೆಗಾಗಿ ಜನರು ಬಳಸುವ ಕಾಚಿ ಕಡ್ಡಿ, ಮಾವಿನಸೊಪ್ಪು, ಆನೆಪಟ್ಟಿ ಸಣ್ಣ ಕಟ್ಟು ಒಂದಕ್ಕೆ ₹ 10ರಿಂದ ₹ 20, ಉತ್ರಾಣಿ ಕಡ್ಡಿ 4 ಕಟ್ಟಿಗೆ ₹ 20, ಬಾಳೆಕಂದು ಜೋಡಿಗೆ ₹ 20, ಕುಂಬಳಕಾಯಿ ₹ 100ರವರೆಗೆ ಮಾರಾಟ ಮಾಡಲಾಯಿತು. ರಂಗೋಲಿ ಬಿಳಿಹುಡಿ  ಒಂದು ಪ್ಯಾಕೆಟ್‌ಗೆ ₹ 10, ಬಣ್ಣಬಣ್ಣದ ಹುಡಿ ಪ್ಯಾಕೆಟ್‌ಗೆ ₹ 50ರಂತೆ ದರ ಇತ್ತು. ಮಣ್ಣಿನ ಹಣತೆಗೆ ಡಜನ್‌ಗೆ ₹ 50 ಇದ್ದರೆ, ಬೇರೆ ಹಣತೆ ಡಜನ್‌ಗೆ ₹ 100ಕ್ಕೆ ಮಾರಾಟವಾಗುತ್ತಿತ್ತು.

ಹಳೇ ದಾವಣಗೆರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಹಿತ ವಿವಿಧೆಡೆ ಮಾರುಕಟ್ಟೆ ಜೋರಾಗಿ ನಡೆಯಿತು. ಬಣ್ಣಬಣ್ಣದ ಗೂಡುದೀಪಗಳು ಗ್ರಾಹಕರ ಕೈಸೇರಿದವು.

‘ಹಿಂದೆ ಆಚರಿಸಿದಷ್ಟು ಸಂಭ್ರಮದಿಂದ ಈ ಬಾರಿ ದೀಪಾವಳಿ ಮಾಡಲು ಕೊರೊನಾ ಅಡ್ಡಿಯಾಗಿದೆ. ದುಡ್ಡು ಕೂಡ ಇಲ್ಲ. ಹಾಗಂತ ಹಬ್ಬ ಆಚರಿಸದೇ ಬಿಡಲು ಆಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಹೂವು, ಹಣ್ಣು, ಪಟಾಕಿ ಒಯ್ಯಲು ಬಂದಿದ್ದೇವೆ’ ಎಂದು ಜಯನಗರ ಶ್ರೀನಿವಾಸ್ ತಿಳಿಸಿದರು.

‘ವ್ಯಾಪಾರ ಇದೆ. ಆದರೆ ತುಂಬಾ ಲಾಭ ಏನು ಇಲ್ಲ. ಹಬ್ಬ ಆಗಿರುವುದರಿಂದ ಬೇರೆ ಸಮಯಕ್ಕಿಂತ ಸ್ವಲ್ಪ ದರ ಹೆಚ್ಚಿದೆ. ಬಹಳ ಹೆಚ್ಚು ಮಾಡಿದರೆ ಜನ ಒಯ್ಯುವುದಿಲ್ಲ’ ಎಂದು ವ್ಯಾಪಾರಿ ಜಾಲಿನಗರದ ಮಾರುತಿ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು