ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತದ ಮಧ್ಯಪ್ರವೇಶ: ಮೃತದೇಹ ಹಸ್ತಾಂತರ

ಖಾಸಗಿ ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಿಲ್ಲವೆಂದು ಶವ ನೀಡದ ಕಾರಣ ವಿವಾದ
Last Updated 1 ಜೂನ್ 2021, 3:26 IST
ಅಕ್ಷರ ಗಾತ್ರ

ದಾವಣಗೆರೆ: ಆಸ್ಪತ್ರೆಯ ಬಿಲ್‌ ಪಾವತಿಸಿದ ಬಳಿಕ ಮೃತದೇಹವನ್ನು ಒಯ್ಯುವಂತೆ ಖಾಸಗಿ ಆಸ್ಪತ್ರೆಯವರು ತಿಳಿಸಿದ್ದರಿಂದ ಉಂಟಾದ ಗೊಂದಲವನ್ನು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸರಿಪಡಿಸಿದೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ತಾಲ್ಲೂಕಿನ ಮತ್ತಿ ಗ್ರಾಮದ ರಾಮಚಂದ್ರಪ್ಪ ಅವರನ್ನು ದಾವಣಗೆರೆ ಆರೈಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದರು. ಆದರೆ ಆಸ್ಪತ್ರೆಯ ಬಿಲ್‌ ಅನ್ನು ರಾಮಚಂದ್ರಪ್ಪ ಕಡೆಯವರು ತುಂಬಿರಲಿಲ್ಲ. ಬಿಲ್‌ ಪಾವತಿ ಮಾಡದೇ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ತಿಳಿಸಿದ್ದರು.

‘ಆಸ್ಪತ್ರೆಗೆಆರಂಭದಲ್ಲಿ ₹ 30 ಸಾವಿರ ಕಟ್ಟಿದ್ದೆವು. ₹ 2.8 ಲಕ್ಷ ಬಿಲ್‌ ಮಾಡಿದ್ದಾರೆ. ನಮ್ಮಲ್ಲಿ ಹಣ ಇಲ್ಲ. ಅದನ್ನು ತಿಳಿಸಿದಾಗ ₹ 50 ಸಾವಿರ ಕಡಿಮೆ ಮಾಡುತ್ತೇವೆ. ₹ 2 ಲಕ್ಷ ಕಟ್ಟಿ ಎಂದಿದ್ದಾರೆ. ನಾವು ಎಲ್ಲಿಂದ ಅಷ್ಟೊಂದು ಹಣ ತರೋದು’ ಎಂದು ಮೃತರ ಸಂಬಂಧಿ ಶಂಭು ಹೇಳಿದರು.

ಸರ್ಕಾರಿ ಆಸ್ಪತ್ರೆಯಿಂದ ಎಬಿಎಆರ್‌ಕೆ ಅಡಿ ಶಿಫಾರಸು ಕೂಡ ತಂದಿಲ್ಲ. ಆಸ್ಪತ್ರೆಗೆ ನೇರ ದಾಖಲಿಸಿದ್ದಾರೆ. ಎಲ್ಲ ಆದ ಮೇಲೆ ಹಣ ಇಲ್ಲ ಅಂದರೆ ಏನು ಮಾಡುವುದು ಎಂಬುದು ಆಸ್ಪತ್ರೆಯವರ ಪ್ರಶ್ನೆಯಾಗಿತ್ತು.

ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಆ್ಯಕ್ಟ್‌–2007ರ ಪ್ರಕಾರ ಹಣ ಇಲ್ಲದ ಕಾರಣಕ್ಕೆ ಮೃತದೇಹ ಹಸ್ತಾಂತರ ಮಾಡದೇ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮ ಇದ್ದರೂ ಈ ರೀತಿ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಡಿಎಚ್ಒಗೆ ಸ್ಥಳಕ್ಕೆ ಹೋಗಿ ವಿವಾದ ಪರಿಹರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದರು. ಅದರಂತೆ ಆಸ್ಪತ್ರೆಗೆ ಬಂದ ಡಾ. ನಾಗರಾಜ್‌ ಆಸ್ಪತ್ರೆಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿ ಮೃತದೇಹವನ್ನು ಹಸ್ತಾಂತರಿಸುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT