ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿಗೆ ಗ್ರಾಮದ ರೈತ ರಮೇಶ್‌ಗೆ ಲಾಭ ತಂದುಕೊಟ್ಟ ‘ಡ್ರ್ಯಾಗನ್ ಫ್ರೂಟ್’

Last Updated 13 ಜುಲೈ 2021, 3:40 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಕತ್ತಿಗೆ ಗ್ರಾಮದ ರೈತ ರಮೇಶ್‌ ಸಣ್ಣಪ್ಪ ಅವರು ವಿದೇಶಿ ಹಣ್ಣು ‘ಡ್ರ್ಯಾಗನ್‌ ಫ್ರೂಟ್‌’ ಬೆಳೆದು
ಲಾಭ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅನಕ್ಷರಸ್ಥರಾಗಿರುವ ರಮೇಶ್ ಅವರು ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ‘ಡ್ರ್ಯಾಗನ್ ಫ್ರೂಟ್’ ಬೆಳೆ ಬಗ್ಗೆ ಮಾಹಿತಿ ಲಭಿಸಿದೆ. ನಂತರ ಇದರ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ತಮ್ಮ ಮನೆಯ ಹಿಂಭಾಗದಲ್ಲಿರುವ 22 ಗುಂಟೆ ಜಮೀನಿನಲ್ಲಿ ಏಕೆ ಈ ಹಣ್ಣನ್ನು ಬೆಳೆಯಬಾರದು ಎಂದು ಯೋಚಿಸಿದರು. ಅದರ ಪ್ರತಿಫಲವಾಗಿ ಇಂದು ಲಾಭದ ನಿರೀಕ್ಷೆಯಲ್ಲಿದ್ದಾರೆ.

‘ಒಂದೇ ರೀತಿಯ ಬೆಳೆ ಬೆಳೆಯುತ್ತಿದ್ದರಿಂದ ನಷ್ಟ ಉಂಟಾಗಿತ್ತು. ಸುಮ್ಮನೆ ಮನೆಯಲ್ಲಿ ಕೂರುವ ಬದಲು ಈ ಹಣ್ಣನ್ನು ಬೆಳೆಯುವ ಮನಸ್ಸು ಮಾಡಿದೆ. ವಿಜಯಪುರ ಜಿಲ್ಲೆಯ ತಿಕ್ಕೋಟ ತಾಲ್ಲೂಕಿನ ಗ್ರಾಮವೊಂದರಲ್ಲಿ ರಾಣಾಗಟ್ಟಿ ಎಂಬ ರೈತರ ತೋಟಕ್ಕೆ ಭೇಟಿ ನೀಡಿ ಈ ಹಣ್ಣಿನ ಬೆಳೆಯ ಬಗ್ಗೆ ಮಾಹಿತಿ ಪಡೆದುಕೊಂಡೆ. ಸಸಿಯೊಂದಕ್ಕೆ ₹ 40ರಂತೆ ಒಂದು ಸಾವಿರ ಸಸಿಗಳನ್ನು ತಂದೆ. ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಪಡೆದು ಕೂಲಿಗಳ ಮೂಲಕ ಮಣ್ಣು ಎತ್ತರಿಸಿ ಸಸಿಗಳನ್ನು ನಾಟಿ ಮಾಡಿಸಿದೆ’ ಎಂದು ರೈತ ರಮೇಶ್‌ ಮಾಹಿತಿ ನೀಡಿದರು.

12 ತಿಂಗಳಿಗೆ ಹಣ್ಣು ಫಲಕ್ಕೆ: ಸಸಿ ನಾಟಿ ಮಾಡಿದ ವರ್ಷಕ್ಕೆ ಸರಿಯಾಗಿ ಬೆಳೆ ಫಲಕ್ಕೆ ಬಂದಿದೆ. ಸಸಿ ಕೊಟ್ಟವರು 14 ತಿಂಗಳಿಗೆ ಫಲಕ್ಕೆ ಬರುತ್ತದೆ ಎಂದು ಹೇಳಿದ್ದರು. ಎರಡು ತಿಂಗಳು ಮೊದಲೇ ಫಲಕ್ಕೆ ಬಂದಿರುವುದು ಸಂತಸ ತಂದಿದೆ. 2020ರ ಜೂನ್ ತಿಂಗಳಲ್ಲಿ ಸಸಿ ನಾಟಿ ಮಾಡಿದ್ದು, 2021ರ ಜೂನ್ 22ಕ್ಕೆ ಫಲ ನೀಡಿದೆ ಎಂದು ವಿವರಿಸಿದರು.

‘ಆರಂಭದಲ್ಲಿ ಮಾರುಕಟ್ಟೆ ಬಗ್ಗೆ ತಿಳಿಯದೇ ಒದ್ದಾಡಬೇಕಾಯಿತು. ನಂತರ ಶಿವಮೊಗ್ಗದ ಹಣ್ಣಿನ ಮಾರುಕಟ್ಟೆಗೆ ಹಣ್ಣುಗಳನ್ನು ಒಯ್ದು ಮಾರಾಟ ಮಾಡಿದೆ. ಒಂದು ಹಣ್ಣಿಗೆ₹ 100ರಂತೆ ಮಾರಾಟ ಮಾಡುತ್ತಿದ್ದೇನೆ. ಈ ಹಣ್ಣಿನ ಬಗ್ಗೆ ತಿಳಿದಿರುವವರು ಪ್ರತಿ ದಿನ ಫೋನ್ ಮಾಡಿ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಒಂದು ತಿಂಗಳಲ್ಲಿ ಒಂದೂವರೆ ಕ್ವಿಂಟಲ್ ಹಣ್ಣುಗಳನ್ನು ಮಾರಾಟ ಮಾಡಿದ್ದೇನೆ’ ಎಂದು ರಮೇಶ್‌ ಹರ್ಷವ್ಯಕ್ತಪಡಿಸಿದರು.

‘ಡ್ರ್ಯಾಗನ್ ಫ್ರೂಟ್ ಸಸಿ 15 ದಿನಕ್ಕೊಮ್ಮೆ ಹೂವು ಬಿಡುತ್ತದೆ. 45ನೇ ದಿನಕ್ಕೆ ಹಣ್ಣು ಫಲಕ್ಕೆ ಬರುತ್ತದೆ.ಇದಕ್ಕೆ ಹೆಚ್ಚೇನೂ ಖರ್ಚಿಲ್ಲ. ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ, ಬೇವಿನ ಎಣ್ಣೆ ಹಾಗೂ ಜೀವಾಮೃತ ನೀಡಿದ್ದೇನೆ. ಜಾಸ್ತಿ ಎಂದರೆ ಒಂದು ಎಕರೆಗೆ ವಾರ್ಷಿಕ₹ 10 ಸಾವಿರವೂ ವೆಚ್ಚವಾಗುವುದಿಲ್ಲ. 1 ಕ್ವಿಂಟಲ್‌ಗೆ ₹ 15 ಸಾವಿರರಿಂದ ₹ 16 ಸಾವಿರಕ್ಕೆ ಮಾರಾಟ ಮಾಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ರಾಜ್ಯದಲ್ಲಿ 80 ರೈತರಿಂದ ಹಣ್ಣಿನ ಕೃಷಿ: ರಾಜ್ಯದಲ್ಲಿ 80 ರೈತರು ಮಾತ್ರ ಈ ಹಣ್ಣಿನ ಕೃಷಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೊನ್ನಾಳಿ, ದಾವಣಗೆರೆ ತಾಲ್ಲೂಕಿನ ಸಿದ್ದನೂರು, ಹರಪನಹಳ್ಳಿ ಹಾಗೂ ಹರಿಹರದಲ್ಲಿ ಒಬ್ಬೊಬ್ಬ ರೈತರು ಮಾತ್ರ ಹಣ್ಣು ಬೆಳೆಯುತ್ತಿದ್ದಾರೆ ಎಂದು ರಮೇಶ್ ಹೇಳಿದರು.

ಉದ್ಯೋಗ ಖಾತ್ರಿಯಿಂದ ಅನುದಾನ: ‘22 ಗುಂಟೆ ಜಮೀನಿನಲ್ಲಿ ಈ ಬೆಳೆ ಬೆಳೆಯುವ ಕುರಿತು ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣು ಎತ್ತರಿಸುವ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಅದರಲ್ಲಿ ಈಗಾಗಲೇ ₹ 45 ಸಾವಿರ ಪಡೆದುಕೊಂಡಿದ್ದು, ತೋಟಗಾರಿಕೆಯಿಂದ ₹ 37,900 ಬಾಕಿ ಬರಬೇಕಿದೆ. ಈ ಹಣ್ಣುಬೆಳೆಯಲು ತೋಟಗಾರಿಕೆ ಇಲಾಖೆಯ ಸಹಕಾರವೂ ಇದೆ’ ಎನ್ನುತ್ತಾರೆ
ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT