ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಕುಡಿಯುವ ನೀರು: ಪ್ರತಿ ತಾಲ್ಲೂಕಿಗೆ ₹ 25 ಲಕ್ಷ

9 ಗ್ರಾಮಗಳಲ್ಲಿ ಕೊಳವೆ ಬಾವಿ ನೀರು ಪೂರೈಕೆ l ಸಮಸ್ಯೆ ಎದುರಾಗದಂತೆ ತಡೆಯಲು ಕ್ರಮ
Published 8 ಫೆಬ್ರುವರಿ 2024, 6:43 IST
Last Updated 8 ಫೆಬ್ರುವರಿ 2024, 6:43 IST
ಅಕ್ಷರ ಗಾತ್ರ

ದಾವಣಗೆರೆ: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲು ನಿರ್ಧರಿಸಿದೆ.

ಇದಲ್ಲದೇ ಎಲ್ಲಾ ತಾಲ್ಲೂಕುಗಳಲ್ಲೂ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಕೊಳವೆಬಾವಿಗಳ ನವೀಕರಣಕ್ಕೆ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬಿಡುಗಡೆಯಾಗಿದ್ದು, ಕುಡಿಯುವ ನೀರು ಸಮಸ್ಯೆ ಬಾರದಂತೆ ಕ್ರಮ ವಹಿಸಲು ಮುಂದಾಗಿದೆ.

‘ಸದ್ಯದ ಪರಿಸ್ಥಿತಿಯಲ್ಲಿ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಖಾಸಗಿಯವರಿಂದ 13 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಇನ್ನೂ 13 ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

‘ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ, ಕೆರೆಬಿಳಚಿ ಹೊಸೂರು, ವಡ್ನಾಳ್, ದಾವಣಗೆರೆ ತಾಲ್ಲೂಕಿನ ಕದರಪ್ಪನಹಟ್ಟಿ, ವಿನಾಯಕನಗರ ಕ್ಯಾಂಪ್, ಹರಿಹರ ತಾಲ್ಲೂಕಿನ ದೇವರ ಬೆಳಕೆರೆ, ಹೊನ್ನಾಳಿ ತಾಲ್ಲೂಕಿನ ಹುಣಸೇಹಳ್ಳಿ, ಅರಕೆರೆ, ಕುಂಕುವಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಗ್ರಾಮಗಳಿಗೆ 13 ಖಾಸಗಿ ಬೋರ್ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

‘ಅಲ್ಲದೇ ದಾವಣಗೆರೆ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನ 21, ಚನ್ನಗಿರಿ ತಾಲ್ಲೂಕಿನ 30, ಹೊನ್ನಾಳಿ ತಾಲ್ಲೂಕಿನ 7, ಹಾಗೂ ಜಗಳೂರು ತಾಲ್ಲೂಕಿನ 26 ಗ್ರಾಮಗಳು ಸೇರಿದಂತೆ ಜಿಲ್ಲೆಯಲ್ಲಿ 126 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದು, ತುರ್ತು ಕುಡಿಯುವ ನೀರಿಗೆ 265 ಗ್ರಾಮಗಳಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.

‘ಪ್ರತಿ ತಾಲ್ಲೂಕಿಗೆ ತಲಾ ₹25 ಲಕ್ಷ ಹಣ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಕೊಳವೆಬಾವಿಗಳನ್ನು ಆಳಗೊಳಿಸುವುದು, ಸ್ವಚ್ಛಗೊಳಿಸುವುದು ಹಾಗೂ ಫ್ಲಶಿಂಗ್ ಮಾಡುವುದು. ಅವಶ್ಯಕತೆ ಇದ್ದಲ್ಲಿ ಪೈಪ್‌ಲೈನ್ ಅಳವಡಿಕೆ ಹಾಗೂ ವಿಸ್ತರಣೆಗಳಿಗೆ ಅನುದಾನ ಬಳಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಜಲಜೀವನ್ ಮಿಷನ್ ಯೋಜನೆಯನ್ನು 4 ಹಂತಗಳಲ್ಲಿ ಕೈಗೆತ್ತಿಕೊಂಡಿದ್ದು, 1 ಹಾಗೂ 2ನೇ ಹಂತದಲ್ಲಿ ಕೆಲವು ಸಮಸ್ಯೆಗಳು ಇದ್ದವು. ಮೂರು ನಾಲ್ಕನೇ ಹಂತಗಳು ವೇಗ ಪಡೆದುಕೊಂಡಿವೆ. ಜಗಳೂರು ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಿರುವುದರಿಂದ ಕೊಳವೆ ಬಾವಿಗಳಿಗೆ ಅನುಕೂಲವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಕುಡಿಯುವ ನೀರಿಗೆ ತೊಂದರೆ ಇಲ್ಲ’
‘ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ರಚನೆಯಾಗಿದ್ದು ಇದರಲ್ಲಿ ತಾಲ್ಲೂಕು ಪಂಚಾಯಿತಿ ಇಒ ತಹಶೀಲ್ದಾರ್ ನೀರು ಸರಬರಾಜು ಇಲಾಖೆಯ ಎಇಇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದಾರೆ. ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ‘ಕೊಳವೆ ಬಾವಿಗಳನ್ನು ನವೀಕರಣ ಕಾರ್ಯಕ್ಕೆ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬಂದಿದ್ದು ಅವಶ್ಯಕತೆ ಇರುವ ಗ್ರಾಮಗಳಿಗೆ ಬಳಸಲಾಗುವುದು. ಇದಲ್ಲದೇ ಬೇರೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಬಳಿ ಎನ್‌ಡಿಆರ್‌ಎಫ್‌ ಫಂಡ್ ಇದೆ’ ಎಂದರು. ‘500 ಜನವಸತಿ ಪ್ರದೇಶಗಳು ಬಹುಗ್ರಾಮ ಕುಡಿಯುವ ನೀರನ್ನು ಅವಲಂಬಿಸಿದ್ದು ಅಲ್ಲಿನ ನೀರಿನ ಲಭ್ಯತೆಯನ್ನು ಗಮನಿಸಲಾಗುತ್ತಿದೆ. ಒಂದು ವೇಳೆ ನೀರು ಲಭ್ಯತೆ ಆಗದಿದ್ದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗುವುದು. ಸದ್ಯದ ಮಟ್ಟಿಗೆ ಕುಡಿಯುವ ತೊಂದರೆ ಇಲ್ಲ. ಚಾನಲ್‌ಗಳಲ್ಲಿ ಅವಲಂಬಿತರಾಗಿರುವ ಗ್ರಾಮಗಳಲ್ಲಿ ತೊಂದರೆ ಇಲ್ಲ. ಆದರೆ ನದಿಯನ್ನು ಅವಲಂಬಿಸಿರುವ ಹೊನ್ನಾಳಿ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ನೀರನ್ನು ಬಿಟ್ಟರೆ ಸಮಸ್ಯೆಯಾಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT