ಶನಿವಾರ, ಡಿಸೆಂಬರ್ 3, 2022
21 °C
ಗಾಜಿನಮನೆಯಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ಫಲಪುಷ್ಪ ಪ್ರದರ್ಶನದಿಂದ ರೈತರಿಗೆ ಪ್ರೋತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಫಲಪುಷ್ಪ ಪ್ರದರ್ಶನದಿಂದ ಜನರಿಗೆ ಮನರಂಜನೆ ನೀಡುವುದರ ಜತೆಗೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸ್ವಾತಂತ್ರ್ಯದ ಅಮೃತಮಹೋತ್ಸವ, ಜಿಲ್ಲೆಯಾಗಿ ರಜತ ಮಹೋತ್ಸವದ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಗಾಜಿನಮನೆಯಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಡ್ರ್ಯಾಗನ್‌ ಫ್ರೂಟ್‌, ಸಪೋಟ, ಬಾಳೆ, ಏಲಕ್ಕಿ, ಕಾಳುಮೆಣಸು, ಪಪ್ಪಾಯ, ಗುಲಾಬಿ ಸಹಿತ ಅನೇಕ ಬೆಳೆಗಳನ್ನು ಯಾವ ರೀತಿ ಬೆಳೆಯಲಾಗಿದೆ ಎಂದು ಬೆಳೆದ ರೈತರಿಂದ ಮಾಹಿತಿ ಪಡೆದು ಬೇರೆ ರೈತರಿಗೆ ತಿಳಿಸಬೇಕು ಎಂದು ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಏರ್‌ಪೋರ್ಟ್ ಆಗಬೇಕು. ಕಾರ್ಗೊ ಮೂಲಕ ಇಲ್ಲಿನ ಬೆಳೆಗಳನ್ನು ರಫ್ತು ಮಾಡಲು ಆಗ ಸುಲಭವಾಗುತ್ತದೆ. ಮುಖ್ಯಮಂತ್ರಿ ಅವರು ಜಿಲ್ಲೆಗೆ ವಿಮಾನ ನಿಲ್ದಾಣ ಮತ್ತು ವೈದ್ಯಕೀಯ ಕಾಲೇಜು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನೆರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಮಣ್ಣಿನ ಆರೋಗ್ಯ ಕಾರ್ಡ್‌, ಕೃಷಿ ಸಮ್ಮಾನ್‌, ಫಸಲ್‌ ಬಿಮಾ, ನರೇಗಾ ಹೀಗೆ ಅನೇಕ ಯೋಜನೆಗಳ ಮೂಲಕ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

‘ರೈತರು ಬೆಳೆದ ಬೆಳೆಗಳನ್ನು ಇಲ್ಲಿ ವೀಕ್ಷಿಸಿದರೆ ಸಾಲದು. ಅವರ ತೋಟಕ್ಕೆ ಹೋಗಿ ಹೇಗೆ ಬೆಳೆದಿದ್ದಾರೆ ಎಂಬುದನ್ನು ತಿಳಿಯಬೇಕು. ಅದಕ್ಕಾಗಿ ಕ್ಷೇತ್ರೋತ್ಸವವನ್ನು ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಳ್ಳಬೇಕು’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಜಿ.ಸಿ., ಎಎಸ್‌ಪಿ ರಾಮಗೊಂಡ ಬಸರಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಬಿ.ಎಸ್‌. ಜಗದೀಶ್‌ ಇದ್ದರು.

ವಿದ್ಯುದ್ದೀಪಗಳ ಅಲಂಕಾರದಲ್ಲಿ ಪ್ರಜ್ವಲಿಸಿದ ಪ್ರದರ್ಶನ

ಗಾಜಿನಮನೆಯಲ್ಲಿ ಗುರುವಾರ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನ ವಿದ್ಯುದ್ದೀಪಗಳ ಅಲಂಕಾರದ ನಡುವೆ ಪ್ರಜ್ವಲಿಸಿತು.

ಸಂತೇಬೆನ್ನೂರು ಪುಷ್ಕರಿಣಿ ಮತ್ತು ವಸಂತ ಮಂಟಪ, ಹರಿಹರದ ಹರಿಹರೇಶ್ವರ ಮೂರ್ತಿ, ಸೆಲ್ಫಿ ಪ್ರಿಯರಿಗಾಗಿ ‘ಐ ಲವ್‌ ದಾವಣಗೆರೆ’ ಹೂವಿನ ಕಲಾಕೃತಿ, ಪುನೀತ್ ರಾಜ್‌ಕುಮಾರ್, ಡಾ. ರಾಜ್‌ಕುಮಾರ್ ಅ‌ವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಉರುಳಿಹೋಗದ ಬೊಂಬೆ ಗಮನ ಸೆಳೆದವು.

ರೈತರು ಬೆಳೆದ ವಿವಿಧ ಹಣ್ಣುಗಳು, ಗುಲಾಬಿ ಇನ್ನಿತರ ಹೂವುಗಳು ಆಕರ್ಷಣೆಯಾಗಿದ್ದವು. ಉದ್ಯಾನದಲ್ಲಿರುವ ಆಲಂಕಾರಿಕ ಗಿಡಗಳು ಬೆಳಕಿನಲ್ಲಿ ಕಂಗೊಳಿಸಿದವು. ವಿವಿಧ ನಮೂನೆಯ ಮೀನುಗಳ ಅಕ್ವೇರಿಯಂ ಮನಸೆಳೆದವು.

ನ.13ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಈ ಪ್ರದರ್ಶನ ಇರಲಿದೆ.

‘ನಾಯಿ ನರಿಗೆ ಉತ್ತರ ನೀಡಲ್ಲ’

‘ಪಾಲಿಕೆಯಲ್ಲಿ ಭ್ರಷ್ಟಾಚಾರ ಮಾಡಲು ಸಂಸದರು ಕುಮ್ಮಕ್ಕು ನೀಡುತ್ತಿದ್ದಾರೆ. ಅವರಿಗೂ ಪಾಲಿದೆ ಎಂದು ಕಾಂಗ್ರೆಸ್‌ನ ಕೆಲವರು ಹೇಳಿಕೆ ನೀಡಿದ್ದಾರೆ. ನಾಯಿ ನರಿಗೆಲ್ಲ ಉತ್ತರ ನೀಡಲ್ಲ. ನಾನು ಆನೆ ನಡೆದಂತೆ ಜಿಲ್ಲೆಯ ಅಭಿವೃದ್ಧಿ  ಕಾರ್ಯದಲ್ಲಿ ಮುಂದುರಿಯುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಭ್ರಷ್ಟಾಚಾರ ನಾನು ಮಾಡಿಲ್ಲ. ಭ್ರಷ್ಟಾಚಾರ ಎಂದರೆ ನನಗೆ ಗೊತ್ತಿಲ್ಲ. ಅವರಿಗೆ ಭ್ರಷ್ಟಾಚಾರ ಮಾಡಿ ಅಭ್ಯಾಸ ಇರುವುದರಿಂದ ಹೇಳುತ್ತಿದ್ದಾರೆ. ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.