ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಆಟೊಗಳ ಹೆಚ್ಚುವರಿ ಸೀಟು ಕಳಚಿದ ಪೊಲೀಸರು

Last Updated 16 ಜುಲೈ 2019, 12:53 IST
ಅಕ್ಷರ ಗಾತ್ರ

ದಾವಣಗೆರೆ: ಆಪೆ ಪ್ರಯಾಣಿಕರ ಆಟೋಗಳಲ್ಲಿ ಅಳವಡಿಸಿದ್ದ ನಿಗದಿಪಡಿಸಿದ್ದಕ್ಕಿಂತ ಅಧಿಕ ಸೀಟುಗಳನ್ನು ಸಂಚಾರ ಠಾಣೆಗಳ ಪೊಲೀಸರು ಮಂಗಳವಾರ ಬಡಾವಣೆ ಪೊಲೀಸ್‌ ಠಾಣೆ ಆವರಣದಲ್ಲಿ ಕಿತ್ತು ಹಾಕಿದ್ದಾರೆ. ಮುಂದೆ ಹೆಚ್ಚುವರಿ ಸೀಟು ಅಳವಡಿಸಿದರೆ ವಾಹನ ವಶಪಡಿಸಿಕೊಂಡು, ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆಪೆ ಪ್ರಯಾಣಿಕರ ಆಟೋಗಳಲ್ಲಿ ಮೂರು ಪ್ರಯಾಣಿಕರು ಮತ್ತು ಒಬ್ಬ ಚಾಲಕ ಸೇರಿ ನಾಲ್ವರ ಪ್ರಯಾಣಕಷ್ಟೇ ಅನುಮತಿ ನೀಡಲಾಗಿರುತ್ತದೆ. ಆದರೆ, ಈ ಆಟೊಗಳ ಹಿಂದೆ ಲಗೇಜು ಇಡಲು ಇರುವ ಜಾಗದಲ್ಲಿಯೂ ಸೀಟುಗಳನ್ನು ಅಳವಡಿಸಲಾಗಿದೆ. ಕಾನೂನು ಮೀರಿ ವಾಹನಗಳನ್ನು ಆಲ್ಟ್ರೇಶನ್‌ ಮಾಡುವಂತಿಲ್ಲ ಎಂದು ನಿಯಮ ಇದ್ದರೂ ಆಟೊ ಚಾಲಕರು ಮತ್ತು ಮಾಲೀಕರು ನಿಯಮ ಉಲ್ಲಂಘಿಸಿದ್ದಾರೆ. ಅಲ್ಲದೇ ಒಂದು ಆಟೊದಲ್ಲಿ 8ರಿಂದ 10 ಮಂದಿಯನ್ನು ಕೂರಿಸಿಕೊಂಡು ಹೋಗುತ್ತಾರೆ. ಇದನ್ನು ಗಮನಿಸಿ ಅಧಿಕ ಸೀಟುಗಳನ್ನು ತೆಗೆಯಲು ಕ್ರಮಕೈಗೊಳ್ಳಲಾಗಿದೆ ಎಂದು ನಗರ ಡಿವೈಎಸ್‌ಪಿ ಎಸ್‌.ಎಂ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಂಗಳವಾರ 50ಕ್ಕೂ ಅಧಿಕ ಆಟೊಗಳ ಸೀಟು ತೆಗೆಸಿ, ದಂಡ ವಿಧಿಸಲಾಗಿದೆ. ಮುಂದೆ ಈ ರೀತಿ ಹೆಚ್ಚುವರಿ ಸೀಟುಗಳನ್ನು ಅಳವಡಿಸಿದರೆ ಆಟೋಗಳನ್ನೇ ಜಫ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಇನ್ನೂ ಹಲವು ಆಟೊಗಳಲ್ಲಿ ಹೆಚ್ಚುವರಿ ಸೀಟುಗಳಿವೆ. ಅವುಗಳನ್ನು ಅವರಾಗಿಯೇ ಕೂಡಲೇ ತೆಗೆಸಿದರೆ ಒಳ್ಳೆಯದು. ಅಂಥವುಗಳನ್ನು ಕಂಡರೆ ಸೀಟು ಕಿತ್ತು ಹಾಕಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ನಿಗದಿತ ಆಸನಗಳಿಗಿಂತ ಹೆಚ್ಚು ಪ್ರಯಾಣಿಕರು ಇದ್ದಾಗ ಅಪಘಾತ ಉಂಟಾದರೆ ಯಾವುದೇ ವಿಮಾ ಪರಿಹಾರ ಪ್ರಯಾಣಿಕರಿಗೆ ಸಿಗುವುದಿಲ್ಲ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ. ಎಲ್ಲ ಆಟೊಗಳು ನಿಗದಿಪಡಿಸಿದಷ್ಟೇ ಪ್ರಯಾಣಿಕರನ್ನು ಒಯ್ಯಬೇಕು ಎಂದು ತಿಳಿಸಿದರು.

ಡಿವೈಎಸ್‌ಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯ ಎಸ್‌ಐ ಮಂಜುನಾಥ್‌ ಅರ್ಜುನ್‌ ಲಿಂಗಾರೆಡ್ಡಿ, ಉತ್ತರ ಸಂಚಾರ ಪೊಲೀಸ್‌ ಠಾಣೆಯ ಎಸ್‌ಐ ಲಕ್ಷ್ಮೀಪತಿ, ಬಡಾವಣೆ ಠಾಣೆಯ ವೀರಬಸಪ್ಪ ಕುಸಲಾಪುರ್‌ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT