ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ನಾಶವಾದರೆ ದೇಶವೂ ನಾಶ: ನೀರಾವರಿ ತಜ್ಞ ಪ್ರೊ.ಸಿ. ನರಸಿಂಹಪ್ಪ

ಕೃಷಿ ಕಾಯ್ದೆ ನಿಜಕ್ಕೂ ಹಿತಶತ್ರುವೆ?
Last Updated 3 ಮಾರ್ಚ್ 2021, 2:19 IST
ಅಕ್ಷರ ಗಾತ್ರ

ದಾವಣಗೆರೆ: ರೈತರು ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡಿ ಎಂದು ಕೇಳಬೇಕಿತ್ತು. ಆದರೆ ಅದನ್ನು ಕೇಳದೆ ಕನಿಷ್ಠ ಇಷ್ಟು ಸಿಗದೇ ಹೋದರೆ ಕೃಷಿಕರಾಗಿಯೂ ಉಳಿಯುವುದಿಲ್ಲ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ನೀಡಿ ಎಂದು ರೈತರು ಕೇಳುತ್ತಿದ್ದಾರೆ. ರೈತ ನಾಶವಾದರೆ ದೇಶ ನಾಶವಾಗುತ್ತದೆ. ರೈತತನವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಕೃಷಿ ಮತ್ತು ನೀರಾವರಿ ತಜ್ಞ ಪ್ರೊ.ಸಿ. ನರಸಿಂಹಪ್ಪ ಎಚ್ಚರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಡೆದ ‘ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತಶತ್ರುವೇ?’ ಸಂವಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮೂರು ವರ್ಷದ ಹಿಂದೆ ಘೋಷಿಸಿದರು. ಮೋದಿಯಲ್ಲ, ಇನ್ನು 100 ಪ್ರಧಾನಿಗಳು ಬಂದರೂ ನಾಲ್ಕು ವರ್ಷಗಳಲ್ಲಿ ದ್ವಿಗುಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಈಗಲೂ ಅದೇ ಮಾತು ಹೇಳುತ್ತಿದ್ದೇನೆ. ದ್ವಿಗುಣಗೊಳಿಸಲು ಸಾಧ್ಯವಿಲ್ಲ’ ಎಂದರು.

ಪ್ರಧಾನಿಗಳು ಕಿವಿಗೆ ಇಂಪಾದುದನ್ನು ಮಾತ್ರ ಕೇಳಲು ಬಯಸುತ್ತಾರೆ. ಇಂಪಿಲ್ಲದನ್ನು ಕೇಳಿಸಿಕೊಳ್ಳುವುದಿಲ್ಲ. ಹಾಗಾಗಿ ಮೂರು ಕಾಯ್ದೆಗಳನ್ನು ತಿದ್ದುಪಡಿ ಮಾಡಿದರೆ ರೈತರ ಆದಾಯ ದ್ವಿಗುಣವಾಗುತ್ತದೆ ಎಂದು ಯಾರೋ ಇಂಪಾಗಿ ಹೇಳಿಬಿಟ್ಟಿದ್ದಾರೆ. ದೇಶದ 75 ಕೋಟಿ ಜನರಿಗೆ ತೊಂದರೆಯಾಗುವ ಈ ಕಾಯ್ದೆಯನ್ನು ಬರೀ 10 ದಿನಗಳಲ್ಲಿ ಮಂಡನೆ ಮಾಡಿ, ಲೋಕಸಭೆಯಲ್ಲಿ ಅನುಮೋದನೆ ಪಡೆದು, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ಜಾರಿಗೆ ತರಲಾಗಿದೆ. 10 ದಿನಗಳಲ್ಲಿ ಜಾರಿಗೆ ತಂದಿರುವ ಇದೊಂದು ಕಾನೂನಾ ಎಂಬ ಸಂಶಯ ಉಂಟಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಇರುವಾಗಲೂ ಶೇ 30ರಷ್ಟು ಮಾತ್ರ ಅಲ್ಲಿ ಮಾರಾಟವಾಗುತ್ತಿತ್ತು. ಶೇ 70ರಷ್ಟು ಹೊರಗೆ ಆಗುತ್ತಿತ್ತು. ಹಾಗಾಗಿ ಈ ಕಾಯ್ದೆ ಬಂದ ಮೇಲೆ ಹೊರಗೆ ಮಾರಾಟಕ್ಕೆ ಅವಕಾಶ ಸಿಗುತ್ತದೆ ಎಂದಾಗುವುದಿಲ್ಲ. ಎಲ್ಲೂ ಮಾರಾಟ ಮಾಡಬಹುದು ಎಂಬ ಕಾಯ್ದೆಯಿಂದ ನಮಗೆ ಅಂಥ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಹಸಿರು ಕ್ರಾಂತಿಯಿಂದಾಗಿ ಪಂಜಾಬ್‌, ಹರ್ಯಾಣದ ರೈತರಿಗೆ ಭಾರಿ ಅನುಕೂಲವಾಯಿತು. ಪಶ್ಚಿಮ ಉತ್ತರ ಪ್ರದೇಶ, ದೆಹಲಿಯ ಸ್ವಲ್ಪ ಭಾಗಕ್ಕೂ ಲಾಭವಾಯಿತು. ಬಾಕ್ರಾನಂಗಲ್‌ ಅಣೆಕಟ್ಟು ಇರುವುದರಿಂದ ನೀರಿನ ಸಮಸ್ಯೆಯೂ ಉಂಟಾಗಲಿಲ್ಲ. ಬಿಹಾರದಿಂದ ಸುಮಾರು 30 ಲಕ್ಷ ವಲಸೆ ಕಾರ್ಮಿಕರು ಬಂದು ಅಲ್ಲಿ ಗೋಧಿ ಮತ್ತು ಭತ್ತ ಬೆಳೆದು ಕೊಡುತ್ತಾರೆ. ಅಲ್ಲಿನ ಕೃಷಿಭೂಮಿ ಹೊಂದಿದವರು ಲಾಭ ಮಾಡಿಕೊಳ್ಳುತ್ತಿದ್ದರು. ಅವರಿಗೆ ಈ ಕಾಯ್ದೆ ಬಹಳ ತೊಂದರೆಯಾಯಿತು. ಅದಕ್ಕೆ ಅಲ್ಲಿನ ರೈತರು ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಪ್ರತಿಭಟನೆ ಕಾಣಿಸುತ್ತಿಲ್ಲ ಎಂದು ವಿಶ್ಲೇಷಿಸಿದರು.

ಒಂದು ಲೀಟರ್‌ ಹಾಲಿಗೆ ₹ 60 ಸಿಗಬೇಕು. ಆದರೆ ₹ 27ಕ್ಕೆ ಹೈನುಗಾರರು ಮಾರುತ್ತಿದ್ದಾರೆ. ಒಂದು ಕೆ.ಜಿ. ಅಕ್ಕಿಗೆ ₹ 120 ನೀಡಬೇಕು. ಆದರೆ ₹ 50–60 ಇದೆ. ಹೀಗೆ ರೈತ ನೀಡುತ್ತಾ ಹೋದರೆ ರೈತ ಬಡವನಾಗಿಯೇ ಇರುತ್ತಾನೆ. ಬೇರೆಯವರು ತಿಂದುಂಡು ಸುಖವಾಗಿರುತ್ತಾರೆ. ಕೃಷಿ ವಸ್ತು ಮತ್ತು ಕೃಷಿಯೇತರ ವಸ್ತುಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಲ್‌.ಜಿ. ಮಧುಕುಮಾರ್‌, ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಕಾರ್ಯಕ್ರಮ ನಿರೂಪಿಸಿದರು.

ಕಾಯ್ದೆಯು ಇಂದು ಹಾವಿನ ಮೊಟ್ಟೆ, ನಾಳೆ ವಿಷಸರ್ಪ: ವೈಎಸ್‌ವಿ ದತ್ತ
ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳು ಇಂದು ಹಾವಿನ ಸಣ್ಣಮೊಟ್ಟೆ. ಅದನ್ನು ಈಗಲೇ ಚಿವುಟಿ ಹಾಕದಿದ್ದರೆ ಮುಂದೆ ವಿಷಸರ್ಪವಾಗಲಿದೆ. ರೈತ ಬದುಕು ಕಳೆದುಕೊಳ್ಳಲಿದ್ದಾನೆ ಎಂದು ಚಿಂತಕ ವೈಎಸ್‌ವಿ ದತ್ತ ವಿಶ್ಲೇಷಿಸಿದರು.

‘ಕೃಷಿ ಮೊದಲು ಸರ್ವಕ್ಕೆ; ಕೃಷಿಯಿಂ ಪಸರಿಸುವುದಾ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದಾ ಜನಪದದ ಜನದಿವಸು ತೆರಳುವುದು; ವಸುವಿನಿಂ ಸಾಧಿಸುವಡಾವುದಸಾಧ್ಯವದರಿಂ ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ’ ಎಂಬ ಕುಮಾರವ್ಯಾಸನ ಈ ಪದ್ಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕಿದೆ ಎಂದ ಅವರು, ಕುವೆಂಪು ಇಂದೇನಾದರೂ ‘ಧನ್ವಂತರಿ ಚಿಕಿತ್ಸೆ’ ಕಥೆ ಬರೆದಿದ್ದರೆ ದೇಶದ್ರೋಹಿಯಾಗುತ್ತಿದ್ದರು ಎಂದರು.

ಆಹಾರಧಾನ್ಯಗಳು, ಖಾದ್ಯತೈಲ, ಎಣ್ಣೆಕಾಳು, ಆಲೂಗಡ್ಡೆ, ಈರುಳ್ಳಿಯನ್ನು ಅಗತ್ಯ ವಸ್ತುಗಳನ್ನು ಹೊರಗಿಡಲಾಗಿದೆ. ಬಡವರು ಬಗ್ಗರು, ಅನ್ನಭಾಗ್ಯವೋ, ಪಡಿತರವೋ ಏನೋ ಪಡೆದುಕೊಳ್ಳುತ್ತಿದ್ದರು. ಅದಕ್ಕೂ ಕಲ್ಲು ಬೀಳಲಿದೆ. ಯಾರು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು, ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ ಮಾರಾಟ ಮಾಡಬಹುದು ಎಂಬ ನಿಯಮದಿಂದ ಆಹಾರ ಭದ್ರತೆಗೆ ಧಕ್ಕೆ ಬರಲಿದೆ ಎಂದರು.

ಖರೀದಿಗೆ ನೇರವಾಗಿ ಕಾರ್ಪೊರೇಟ್‌ ಕಂಪನಿಗಳು ನುಗ್ಗುತ್ತಿವೆ.ಇದರಿಂದ 8 ಕೋಟಿ ಸಣ್ಣ ವ್ಯಾಪಾರಿಗಳು, ಎಪಿಎಂಸಿಗಳಲ್ಲಿರುವ ಲಕ್ಷಾಂತರ ಮಂದಿ ಕೂಲಿ ಕಾರ್ಮಕರು ಬೀದಿ ಪಾಲಾಗುತ್ತಾರೆ. ಖರೀದಿಯಲ್ಲಿ ಮೋಸವಾದರೆ ಸಿವಿಲ್‌ ನ್ಯಾಯಾಲಯದಲ್ಲಿ ಧಾವೆ ಹೂಡುವಂತಿಲ್ಲ. ಗುತ್ತಿಗೆ ಆಧಾರಿತ ಕೃಷಿಯಿಂದಾಗಿ ಕಂಪೊನಿಯು ಇಷ್ಟಬಂದ ಗೊಬ್ಬರ, ಹೈಬ್ರಿಡ್‌ ಬೀಜ, ಕಳೆನಾಶಕ ಹಾಕಿ ಬಳಸುತ್ತದೆ. ಫಲವತ್ತಾದ ಭೂಮಿ 10 ವರ್ಷದಲ್ಲಿ ಬಂಜೆ ನೆಲವಾಗುತ್ತದೆ ಎಂದು ಎಚ್ಚರಿಸಿದರು.

ಯಾರು ಏನಂದರು..?

ನಾವು ಸುಧಾರಣೆಗಳ ವಿರೋಧಿಗಳಲ್ಲ. ಈ ಕಾಯ್ದೆ ಮುಂದೆ ಕತ್ತಿಯಾದರೆ ಅದರ ವಿರುದ್ಧ ಗುರಾಣಿಯಾಗಿ ಇರಲಿ ಎಂಬ ಕಾರಣಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಿ. ಖರೀದಿ ಮೋಸ ಪ್ರಕರಣವನ್ನು ತಹಶೀಲ್ದಾರ್‌, ಎಸಿ, ಡಿಸಿ ಮುಂದೆ ಹೋಗಿ ಪರಿಹರಿಸಿಕೊಳ್ಳಬೇಕಿದ್ದರೆ, ನ್ಯಾಯ ಪಡೆಯಬೇಕಿದ್ದರೆ ಶಾಸಕ, ಸಂಸದ, ಜನಪ್ರತಿನಿಧಿಗಳ ಬೆಂಬಲ ಬೇಕಾಗುತ್ತದೆ.
-ತೇಜಸ್ವಿ ಪಟೇಲ್‌

*
ಸಾಯಿಲ್‌ ಹೆಲ್ತ್‌ಕಾರ್ಡ್‌, ಫಸಲ್‌ ಬಿಮಾ ಯೋಜನೆ, ಸ್ವಾಮಿನಾಥನ್‌ ವರದಿ ಸಹಿತ ಹಲವು ಯೋಜನೆಗಳನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಈಗ ತಂದಿರುವ ಕಾಯ್ದೆಯನ್ನು ತಿಳಿದುಕೊಂಡು ಮಾತನಾಡಬೇಕು. ರೈತರಿಗೆ ತೊಂದರೆಯಾದರೆ ಸಿವಿಲ್‌ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇದೆ. ಬೇರೆ ಲೋಪಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ರೈತ ಹೋರಾಟ ಎಂದು ಭಾರತದ ಬಾವುಟಕ್ಕೆ ಅಪಮಾನ ಮಾಡುತ್ತಾರೆ. ಅವರನ್ನು ಬೆಂಬಲಿಸಿದರೆ ಖಲಿಸ್ಥಾನಿಗಳನ್ನು ಬೆಂಬಲಿಸಿದಂತಾಗುತ್ತದೆ.
-ಎಚ್‌.ಆರ್‌. ಲಿಂಗರಾಜ್‌

*
ಹಿಂದೆ ಮೆಕ್ಕೆಜೋಳ ಪಡಿತರದಲ್ಲಿ ಇಲ್ಲದೇ ಇದ್ದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡಿತ್ತು. ಈಗಿನ ಸರ್ಕಾರ ಯಾಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಯಡಿಯೂರಪ್ಪ ಭೂಸುಧಾರಣೆ ಕಾಯ್ದೆ ತಿದ್ದು‍ಪಡಿ ಮಾಡಿದ್ದಾರೆ. ಅವರು ಖಂಡಿತ ಮನಸ್ಸಿದ್ದು ಮಾಡಿದ್ದಲ್ಲ.
-ಕೆ.ಎಸ್‌. ಬಸವಂತಪ್ಪ

*
ಕಾಯ್ದೆಯನ್ನು ಸರಿಯಾಗಿ ಓದಿ. ಬದಲಾವಣೆ ಅನ್ನುವಿದು ಸಹಜ ನಿಯಮ. ರೈತರ ಒಳಿತಿಗಾಗಿ ಬದಲಾವಣೆ ಮಾಡಲು ಹೊರಟರೆ ಯಾಕೆ ವಿರೋಧಿಸುತ್ತೀರಿ? ಕಾಯ್ದೆ ಸರಿಯಾಗಿ ಓದದೆ ಸುಳ್ಳು ಯಾಕೆ ಹೇಳುತ್ತೀರಿ?
-ಕೆ.ಜಿ. ಈಶ್ವರಪ್ಪ ಕಂದಗಲ್‌

*
ನಾವು ಚಳವಳಿಗಾರರು ಕನ್ನಡಿ ತರಹದವರು. ಕಾಂಗ್ರೆಸ್‌ ಆಡಳಿತ ಇರುವಾಗ ನಮ್ಮ ಹೋರಾಟಗಳಿಗೆ ಬಿಜೆಪಿಯವರು ಬಂದಿದ್ದರು. ಈಗ ಕಾಂಗ್ರೆಸಿಗರು ಬಂದಿದ್ದಾರೆ. ಯಾರನ್ನೂ ಬೇಡ ಅನ್ನುವುದಿಲ್ಲ. ಪ್ರಧಾನಿ ರೈತರ ಮಾತುಗಳನ್ನು ಕೇಳಿಸಿಕೊಳ್ಳಬೇಕು.
-ಬಲ್ಲೂರು ರವಿಕುಮಾರ್‌

*
ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ಗೊತ್ತಿಲ್ಲ. ರೈತರನ್ನು ದೇಶದ್ರೋಹಿಗಳೆನ್ನುತ್ತಾರೆ. ಪ್ರಧಾನಿಯ ಮನ್‌ಕಿ ಬಾತ್‌ನಲ್ಲಿ ರೈತರ ಬಗ್ಗೆ ಮಾತಿಲ್ಲ. ಸ್ವಾಮಿನಾಥನ್‌ ವರದಿಯ ಒಂದಂಶವೂ ಜಾರಿಯಾಗಿಲ್ಲ. ಕೃಷಿ ಕಾಯ್ದೆಗಳನ್ನು ವಿಮರ್ಶೆ ಮಾಡಬೇಕು. ವಿರೋಧಾಭಾಸಗಳನ್ನು ಕಿತ್ತು ಹಾಕಬೇಕು.
-ಅರುಣ್‌ ಕುಮಾರ್‌ ಕುರುಡಿ

*
ಕೊವಿಡ್‌ ಬಂದ ಸಂಕಷ್ಟದ ಸಮಯದಲ್ಲಿ ಈ ಕಾಯ್ದೆ ತಂದು ಹೇರುವ ವ್ಯವಸ್ಥೆ ಯಾಕೆ? ಇದರಿಂದ ರೈತರ ಭದ್ರತೆಗೆ ಧಕ್ಕೆ ಆಗಿದೆ.
-ಚಂದ್ರಶೇಖರ ಅಣಜಿ

*
ಯಾರೋ ಒಬ್ಬ ತಿರುಬೋಕಿ ಇದ್ದರೆ ಅವನಿಗೆ ಬುದ್ಧಿ ಕಲಿಸಿ. ಅದು ಬಿಟ್ಟು ಎಲ್ಲ ಹೋರಾಟಗಾರರು ಕೆಟ್ಟವರು ಎಂದು ಯಾಕೆ ಹೇಳುತ್ತಿದ್ದಿರಿ. ಡಿಸಿ ಕಲ್ಲಂಗಡಿ ಬೆಳೆದನಾ, ತಹಶೀಲ್ದಾರ್‌ ಬೆಳೆದನಾ? ಡಿಸಿ ಹೆಂಡ್ತಿ ಕಳೆ ಕೀಳಿದಳಾ ಎಂದು ಹಿಂದೆಯೇ ಕೇಳಿದವರು ನಾವು. ನಮ್ಮ ಹೋರಾಟವನ್ನು ಅನುಮಾನಿಸಬೇಡಿ.
-ಹೊನ್ನೂರು ಮುನಿಯಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT