ದಾವಣಗೆರೆ: ಹಣಕಾಸಿನ ಲೆಕ್ಕಾಚಾರದಲ್ಲಿ ಈ ಬಾರಿಯ ದೀಪಾವಳಿಗೆ ಪಟಾಕಿ ವ್ಯವಹಾರ ಹೆಚ್ಚಾಗಿದ್ದು, ಪ್ರಮಾಣ ಕಡಿಮೆಯಾಗಿದೆ.
2020ರಲ್ಲಿ ಕೊರೊನಾದಿಂದಾಗಿ ಎಲ್ಲ ರೀತಿಯ ವ್ಯಾಪಾರ– ವಹಿವಾಟಿಗೆ ಹೊಡೆತ ಬಿದ್ದಂತೆ ಪಟಾಕಿ ವ್ಯಾಪಾರವೂ ಕುಂಠಿತಗೊಂಡಿತ್ತು. ಜನರು ದೀಪಾವಳಿಯನ್ನು ಸಾಂಕೇತಿಕವಾಗಿ ಆಚರಿಸಿದ್ದರು. ಸಂಪ್ರದಾಯ ಎಂಬಂತೆ ಅಲ್ಪಸ್ವಲ್ಪ ಪಟಾಕಿ ಖರೀದಿಸಿ ಸಿಡಿಸಿದ್ದರಿಂದ ₹ 50 ಲಕ್ಷ ಮೊತ್ತದ ವ್ಯವಹಾರವೂ ನಡೆದಿರಲಿಲ್ಲ. 2021ರಲ್ಲಿ ಹಿಂದಿನ ವರ್ಷದ ಕೊರತೆಯನ್ನು ನೀಗಿಸುವಂತೆ ಜನರು ಪಟಾಕಿ ಸಿಡಿಸಿದ್ದರು. ಈ ಬಾರಿಯೂ ಜನರು ಅದೇ ರೀತಿ ಪಟಾಕಿ ಖರೀದಿಸಿದ್ದರೂ ಪಟಾಕಿ ದರ ಒಮ್ಮೆಲೇ ಏರಿದ್ದರಿಂದ ಖರೀದಿಯ ಪ್ರಮಾಣ ಕಡಿಮೆಯಾಗಿದೆ.
2021ರಲ್ಲಿ ದಾವಣಗೆರೆ ನಗರದಲ್ಲಿ ₹ 75 ಲಕ್ಷದ ವ್ಯವಹಾರವಾಗಿತ್ತು. ತಂದಿದ್ದ ಅಷ್ಟೂ ಪಟಾಕಿ ಖಾಲಿಯಾಗಿತ್ತು. ಕಳೆದ ವರ್ಷದಷ್ಟೇ ಪಟಾಕಿಯನ್ನು ಈ ಬಾರಿಯೂ ತರಿಸಲಾಗಿತ್ತು. 50 ಮಳಿಗೆಗಳಲ್ಲಿ ಮಾರಾಟ ಮಾಡಲಾಗಿತ್ತು. ₹ 1.25 ಕೋಟಿ ವ್ಯವಹಾರವಾಗಿದೆ. ಪಟಾಕಿ ಶೇ 65ರಷ್ಟು ಮಾತ್ರ ಖಾಲಿಯಾಗಿದೆ. ಇನ್ನೂ ಶೇ 35ರಷ್ಟು ದಾಸ್ತಾನು ಉಳಿದಿದೆ ಎಂದು ಪಟಾಕಿ ವರ್ತಕರ ಮತ್ತು ಬಳಕೆದಾರರ ಸಂಘದ ಅಧ್ಯಕ್ಷ ಡಿ.ಎಸ್. ಸಿದ್ದಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕಳೆದ ವರ್ಷ ₹ 5,000 ಮೌಲ್ಯದ ಪಟಾಕಿ ಖರೀದಿ ಮಾಡಿದ್ದ ಗ್ರಾಹಕನೊಬ್ಬ ಈ ವರ್ಷವೂ ₹ 5,000 ತಂದಿದ್ದರೆ ಹಿಂದಿನ ವರ್ಷದ ಅರ್ಧದಷ್ಟು ಪಟಾಕಿ ಮಾತ್ರ ಒಯ್ಯಲು ಸಾಧ್ಯವಾಗಿತ್ತು. ಪಟಾಕಿ ದರ ದುಪ್ಪಟ್ಟು ಆಗಿದ್ದೇ ಇದಕ್ಕೆ ಕಾರಣ ಎಂದು ಸಿದ್ದಣ್ಣತಿಳಿಸಿದರು.
ಸೂರ್ಯಗ್ರಹಣವೂ ಕಾರಣ: ನರಕ ಚತುರ್ದಶಿ, ಅಮಾವಾಸ್ಯೆ ಮತ್ತು ಬಲಿ ಪಾಡ್ಯಮಿ ಈ ಮೂರು ದಿನಗಳಲ್ಲಿ ಜನರು ಸಂಭ್ರಮದಿಂದ ದೀಪಾವಳಿ ಆಚರಿಸುತ್ತಾರೆ. ಆದರೆ ಈ ಬಾರಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಬಂದಿದ್ದರಿಂದ ಎರಡೇ ದಿನ ಸಂಭ್ರಮಾಚರಣೆ ನಡೆಯಿತು. ಅಮಾವಾಸ್ಯೆಯ ದಿನವಾದ ಮಂಗಳವಾರ ಹಬ್ಬದ ಸಡಗರ ಅಷ್ಟಾಗಿ ಕಂಡುಬರಲಿಲ್ಲ. ಮೂರು ದಿನಗಳ ಬದಲು ಎರಡು ದಿನ ಮಾತ್ರ ಹೆಚ್ಚು ಪಟಾಕಿ ಹಾರಿಸಿರುವುದು ಕಂಡುಬಂತು.
ಬಲಿಪಾಡ್ಯಮಿಯ ದಿನವಾದ ಬುಧವಾರ ಎಲ್ಲೆಡೆ ಪಟಾಕಿಯ ಸದ್ದು ಅನುರಣಿಸಿತು. ನಗರದ ಎಲ್ಲ ಪ್ರಮುಖ, ಒಳ ರಸ್ತೆಗಳಲ್ಲಿಯೇ ಪಟಾಕಿ ಸಿಡಿಸಲಾಯಿತು. ಮುಂದಿನ ಹುಣ್ಣಿಮೆಯಂದು ಕೆಲವರು ಲಕ್ಷ್ಮೀ ಪೂಜೆ ಮಾಡುವುದರಿಂದ ಅಂದು ಮತ್ತೆ ಪಟಾಕಿಗೆ ಬೇಡಿಕೆ ಬರುವ ಸಾಧ್ಯತೆ ಇದೆ.
‘ಸರ್ಕಾರವೇ ಜಾಗೃತಿ ಮೂಡಿಸಲಿ’
ಪಟಾಕಿ ಸದ್ದಿಗೆ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ನಾಯಿಗಳು ಹೆದರಿ ಎಲ್ಲೋ ಅವಿತು ಬಿಡುತ್ತವೆ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗುತ್ತದೆ. ಅದಕ್ಕಾಗಿ ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿಸುವುದು ಕಡಿಮೆಯಾಗಬೇಕು. ಈ ಬಗ್ಗೆ ಪರಿಸರ ಪ್ರೇಮ ಇರುವ ಸಂಘಟನೆಗಳು ಕೆಲಸ ಮಾಡುತ್ತವೆ. ಆದರೆ, ಸರ್ಕಾರಿ ಇಲಾಖೆಗಳೇ ಮುತುವರ್ಜಿ ವಹಿಸುತ್ತಿಲ್ಲ ಎನ್ನುವುದು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನಿ ಅವರ ಅಭಿಪ್ರಾಯ.
ಪಟಾಕಿ ಕಡಿಮೆ ಹಚ್ಚಿ ಎಂದು ಸರ್ಕಾರ ಕಾಟಾಚಾರಕ್ಕೆ ಪ್ರಕಟಣೆ ಕೊಡುತ್ತದೆ. ಮಾಲಿನ್ಯ ನಿಯಂತ್ರಣ ಇಲಾಖೆ ಸಹಿತ ಯಾರೂ ಈ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದರೆ ಅದು ಸಣ್ಣ ಮಟ್ಟದಲ್ಲಿ ಆಗುತ್ತದೆ. ಸರ್ಕಾರ, ಇಲಾಖೆಗಳೇ ಮುಂದೆ ನಿಂತು ಜಾಗೃತಿ ಮೂಡಿಸಬೇಕು. ಪಟಾಕಿಯಿಂದ ಏನೆಲ್ಲ ತೊಂದರೆಯಾಗುತ್ತದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಮುಖ್ಯವಾಗಿ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.