ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯಲು ಮುಂದಾಗಿ

ಕುಡಿಯುವ ನೀರು ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಅಧಿಕಾರಿಗಳಿಂದಾಗಬೇಕು: ಡಿ.ಸಿ
Published 31 ಮಾರ್ಚ್ 2024, 6:17 IST
Last Updated 31 ಮಾರ್ಚ್ 2024, 6:17 IST
ಅಕ್ಷರ ಗಾತ್ರ

ದಾವಣಗೆರೆ: ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು, ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಇದೆ. ಕುಡಿಯುವ ನೀರಿನ ಪೂರೈಕೆಗೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಇಟ್ಟುಕೊಂಡು ಸಮಸ್ಯೆಯಾದ ಕಡೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಅಧಿಕಾರಿಗಳೊಂದಿಗೆ ಶನಿವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಾಲುವೆ ಮತ್ತು ನದಿಯಲ್ಲಿನ ನೀರು ಹರಿವು ಕಡಿಮೆಯಾಗಿರುವುದರಿಂದ ಸಮಸ್ಯೆಯಾಗಿದೆ. ಆದರೂ ನದಿ ಹಾಗೂ ಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ ಒಂದು ತಿಂಗಳ ಕಾಲ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜೊತೆಗೆ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಕಡೆ ಬತ್ತಿ ಹೋಗಿದ್ದು, ಇನ್ನೂ ಕೆಲವು ಕಡೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಳಿಕೆಯಾದ ಕೊಳವೆಬಾವಿಗೆ ಸಿಂಗಲ್‍ ಫೇಸ್‌ ಮೋಟಾರ್ ಪಂಪ್ ಅಳವಡಿಸುವ ಮೂಲಕ ನೀರನ್ನು ಪೂರೈಕೆ ಮಾಡಲು ತಿಳಿಸಿ ಗ್ರಾಮ ಪಂಚಾಯಿತಿಗಳಲ್ಲಿನ 15ನೇ ಹಣಕಾಸು ಯೋಜನೆಯಡಿ ಹೊಸ ಸಿಂಗಲ್‍ ಫೇಸ್ ಮೋಟಾರ್ ಖರೀದಿಸಲು ತಿಳಿಸಿದರು.

‘ಪ್ರತಿ ದಿನ ಒಬ್ಬರಿಗೆ ಕನಿಷ್ಠ 55 ಲೀಟರ್ ನೀರು ಪೂರೈಕೆ ಮಾಡಬೇಕಾಗಿದೆ ಮತ್ತು ಜಾನುವಾರುಗಳಿಗೂ ನೀರು ಪೂರೈಕೆ ಮಾಡುವುದರಿಂದ ಬಾಡಿಗೆ ಕೊಳವೆಬಾವಿಗಳಿಂದ ನಿರ್ವಹಣೆ ಸುಲಭವಾಗಲಿದೆ’ ಎಂದರು.

‘ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮಾಲೀಕರಿಂದ ದರಪಟ್ಟಿಯನ್ನು ಪಡೆದು ಅವರೊಂದಿಗೆ ಸಭೆ ಮಾಡಿ ಏಕರೂಪದ ದರ ನಿಗದಿ ಮಾಡಲು ಕ್ರಮ ವಹಿಸಬೇಕು. ಮಾಲಿಕರು ಟ್ಯಾಂಕರ್ ನೊಂದಣಿ, ಆರ್.ಸಿ, ಟ್ಯಾಂಕರ್ ಸ್ವಚ್ಛತೆ, ಜಿಪಿಎಸ್ ಅಳವಡಿಕೆ ಹೊಂದಿರುವ ಷರತ್ತುಗಳಿಗನುಗುಣವಾಗಿ ಎಂಪ್ಯಾನಲ್ ಮಾಡಿಕೊಳ್ಳಬೇಕು. ಇದರಿಂದ ಸಮಸ್ಯೆ ಉದ್ಬವಿಸಿದಾಗ ಟ್ಯಾಂಕರ್ ಮೂಲಕ ನೀರು ನೀಡಲು ತಕ್ಷಣ ಕ್ರಮ ವಹಿಸಲು ಅನುಕೂಲವಾಗುತ್ತದೆ’ ಎಂದರು.

ಕೆರೆಕಟ್ಟೆ ಹೂಳೆತ್ತಲು ಸೂಚನೆ:

ಜಿಲ್ಲೆಯಲ್ಲಿ 522 ಕೆರೆಗಳು ಇದ್ದು, ಕೊಳವೆಬಾವಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ. ಆದ್ದರಿಂದ ಈಗಿರುವ ಕೆರೆಗಳಲ್ಲಿನ ಹೂಳೆತ್ತಲು, ಏರಿ ಭದ್ರಪಡಿಸಲು ಮತ್ತು ರಿಪೇರಿ ಇದ್ದಲ್ಲಿ ದುರಸ್ತಿ ಕೆಲಸ ಮಾಡಲು ಮುಂದಾಗಬೇಕು. ಸಾರ್ವಜನಿಕ ಕೊಳವೆಬಾವಿಗಳ ಸುತ್ತಮುತ್ತ ಮಳೆನೀರು ಮರುಪೂರಣ ಮಾಡಲು ಮಳೆ ನೀರು ಸಂಗ್ರಹ ಯೋಜನೆ ರೂಪಿಸುವಂತೆ ಸೂಚಿಸಿದರು.

‘ಜಿಲ್ಲೆ ಅಂತರ್ಜಲ ಕುಸಿದ ಜಿಲ್ಲೆಯ ಪಟ್ಟಿಯಲ್ಲಿದ್ದು ಕೊಳವೆಬಾವಿ ಕೊರೆಯಲು ಫಾರಂ 7ರ ಅಡಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು. ಆದರೆ ಇದುವರೆಗೂ ಯಾವುದೇ ಅರ್ಜಿ ನನ್ನ ಬಳಿ ಬಂದಿಲ್ಲ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.

 ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ‘ಕುಡಿಯುವ ನೀರಿನ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಅಡಚಣೆಯನ್ನು ಬೆಸ್ಕಾಂ ಮಾಡಬಾರದು. ತಕ್ಷಣವೇ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಟಿ.ಸಿ. ಸುಟ್ಟು ಹೋದಾಗ ತಕ್ಷಣವೇ ರಿಪೇರಿ ಮಾಡಿ ಅಳವಡಿಸುವ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿನ ಮೋಟಾರ್ ಸುಟ್ಟಲ್ಲಿ ತಕ್ಷಣವೇ ಪಿಡಿಒಗಳು ರಿಪೇರಿ ಮಾಡಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಅಭಿಷೇಕ್ ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಇಒ, ಮುಖ್ಯಾಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಇದ್ದರು.  

ಯೋಜನೆ ರೂಪಿಸಿ’

ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಇದನ್ನು ಫ್ಲೆಶಿಂಗ್ ಮತ್ತು ಆಳಕ್ಕೆ ಕೊರತೆಯಲು ಯೋಜನೆ ರೂಪಿಸಬೇಕು. ಕೊಳವೆಬಾವಿಗಳ ಕೊರೆಯಲು ಜಿಲ್ಲೆಯಲ್ಲಿ 7 ರಿಗ್‍ಗಳನ್ನು ವಶಕ್ಕೆ ಪಡೆದು ನೀಡಲು ಸಾರಿಗೆ ಅಧಿಕಾರಿಗೆ ಆದೇಶ ನೀಡಲಾಗಿದೆ. ಎಲ್ಲಲ್ಲಿ ಅಗತ್ಯವಿದೆ ಅಂತಹ ಕಡೆ ಮಾತ್ರ ಹಾಲಿ ಇದ್ದ ಕೊಳವೆಬಾವಿ ಆಳ ಮತ್ತು ಫ್ಲೆಶಿಂಗ್ ಮಾಡುವ ಕೆಲಸ ಮಾಡಬೇಕು’ ಎಂದು ವೆಂಕಟೇಶ್ ತಿಳಿಸಿದರು. ‘ಸಾರ್ವಜನಿಕ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಿಸಿದ್ದಲ್ಲಿ ಖಾಸಗಿಯವರು ಪಕ್ಕದಲ್ಲಿಯೇ ಬಂದು ಕೊಳವೆಬಾವಿ ಕೊರೆಯಲು ಅವಕಾಶ ಇರುವುದಿಲ್ಲ. ಒಂದು ವೇಳೆ ಸಾರ್ವಜನಿಕರು ಕೊರೆಯಿಸಿದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯಡಿ ವಶಕ್ಕೆ ಪಡೆದುಕೊಳ್ಳಲು ಅವಕಾಶ ಇದ್ದು ತಹಶೀಲ್ದಾರರು ಕ್ರಮ ಕೈಗೊಳ್ಳಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT